Photo Credits: @thisisdsp (Instagram)
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ (ಡಿಎಸ್‌ಪಿ) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 27 ವರ್ಷಗಳಿಂದ ಸಂಗೀತದಿಂದಲೇ ಕೋಟ್ಯಂತರ ರಸಿಕರನ್ನು ರಂಜಿಸಿದ್ದ ಅವರು ಇದೀಗ ನಾಯಕ ನಟರಾಗಿದ್ದಾರೆ.
ತಮ್ಮ 47ನೇ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಅವರು ಈ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿ ನೀಡಿದ್ದಾರೆ.
ಸಂಗೀತ ಲೋಕದಲ್ಲಿ ಸದಾ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುವ ಡಿಎಸ್‌ಪಿ, ಬೆಳ್ಳಿಪರದೆ ಮೇಲೆ ನಟನಾಗಿ ಮಿಂಚಲು ಸಂಪೂರ್ಣ ಸಿದ್ಧರಾಗಿದ್ದಾರೆ. ಅವರ ನಟನೆಯ ಚೊಚ್ಚಲ ಚಿತ್ರ ‘ಯಲ್ಲಮ್ಮ’ದ ಸಂಪೂರ್ಣ ವಿವರ ಇಲ್ಲಿದೆ.
‘ಯಲ್ಲಮ್ಮ’ ಚಿತ್ರದಲ್ಲಿ ‘ಪರ್ಶಿ’ಯಾಗಿ ಡಿಎಸ್‌ಪಿ ಸಿಂಪಲ್ ಲುಕ್…
ಡಿಎಸ್‌ಪಿ ಹುಟ್ಟುಹಬ್ಬದ ಅಂಗವಾಗಿ ‘ಯಲ್ಲಮ್ಮ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಡಿಎಸ್‌ಪಿ ಅತ್ಯಂತ ಸರಳ ಉಡುಪಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಕೈಯಲ್ಲಿ ಕಿರೀಟ ಹಿಡಿದುಕೊಂಡಿರುವ ಅವರ ಈ ಸಾದಾ ಸೀದಾ ಲುಕ್ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಅವರು ‘ಪರ್ಶಿ’ ಎನ್ನುವ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟನೆಯ ಜೊತೆಗೆ ಈ ಚಿತ್ರಕ್ಕೆ ಸ್ವತಃ ಡಿಎಸ್‌ಪಿ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಂಗೀತ ಮತ್ತು ನಟನೆ ಎರಡರಲ್ಲೂ ಅವರು ಧಮಾಕಾ ಮಾಡುವುದು ಖಚಿತವಾಗಿದೆ.
‘ಬಲಗಂ’ ಖ್ಯಾತಿಯ ವೇಣು ಯೆಲ್ದಾಂಡಿ ನಿರ್ದೇಶನ…
ಹಾಸ್ಯ ನಟರಾಗಿ ಹೆಸರು ಮಾಡಿದ್ದ ವೇಣು ಯೆಲ್ದಾಂಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇವರ ಮೊದಲ ನಿರ್ದೇಶನದ ‘ಬಲಗಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ದಿಗ್ಗಜರು ಈ ಸಿನಿಮಾವನ್ನು ಕೊಂಡಾಡಿದ್ದರು. ಸಣ್ಣ ಬಜೆಟ್‌ನಲ್ಲಿ ಅದ್ಭುತ ಕಥೆ ಹೇಳಿದ್ದ ವೇಣು, ಈಗ ‘ಯಲ್ಲಮ್ಮ’ ಜವಾಬ್ದಾರಿ ಹೊತ್ತಿದ್ದಾರೆ. ದಿಲ್ ರಾಜು ಅವರು ಈ ಭರವಸೆಯ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ವೇಣು ಮತ್ತು ಡಿಎಸ್‌ಪಿ ಕಾಂಬಿನೇಷನ್ ಸಿನಿಮಾ ರಂಗದಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ.
ನಟ ನಿತಿನ್ ಜಾಗಕ್ಕೆ ಬಂದ ದೇವಿಶ್ರೀ ಪ್ರಸಾದ್…
ಆರಂಭದಲ್ಲಿ ಈ ‘ಯಲ್ಲಮ್ಮ’ ಸಿನಿಮಾಗೆ ತೆಲುಗು ನಟ ನಿತಿನ್ ಆಯ್ಕೆಯಾಗಿದ್ದರು. ನಿತಿನ್ ಅವರೇ ನಾಯಕ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಸಹ ಮಾಡಿತ್ತು. ಆದರೆ ಕಾರಣಾಂತರಗಳಿಂದ ನಿತಿನ್ ಈ ಯೋಜನೆಯಿಂದ ಹೊರನಡೆದಿದ್ದಾರೆ. ನಂತರ ನಿರ್ದೇಶಕರು ನಟನೆಯ ಅನುಭವವೇ ಇಲ್ಲದ ಡಿಎಸ್‌ಪಿ ಅವರನ್ನು ಆಯ್ಕೆ ಮಾಡಿಕೊಂಡರು. 27 ವರ್ಷಗಳ ಸುದೀರ್ಘ ಸಂಗೀತ ಪಯಣದ ನಂತರ ಡಿಎಸ್‌ಪಿ ಹೀರೋ ಆಗುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.




