ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಕಳೆದ ಕೆಲ ವಾರಗಳಿಂದ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಜೈಲಿನ ಹೊರಗಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಅವರು ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಜೈಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ವೈದ್ಯಾಧಿಕಾರಿಗಳು ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಿದ್ದಾರೆ.
ಇದೀಗ ನ್ಯಾಯಾಲಯವು ದರ್ಶನ್ ಚಿಕಿತ್ಸೆಯ ಕುರಿತು ಮಹತ್ವದ ನಿರ್ದೇಶನ ನೀಡಿದೆ. ಜೈಲಿನ ಹೊರಗೆ ಚಿಕಿತ್ಸೆ ಪಡೆಯಲು ಅವಕಾಶ ಸಿಕ್ಕಿದೆಯಾದರೂ, ಕೋರ್ಟ್ ಒಂದು ಪ್ರಮುಖ ಷರತ್ತು ವಿಧಿಸಿದೆ. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲರ ವಾದವೇನು?
ನವೆಂಬರ್ 26ರಂದು ನಡೆದ ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು. ಕಳೆದ 20 ದಿನಗಳಲ್ಲಿ ದರ್ಶನ್‌ಗೆ ಕೇವಲ ಮೂರ್ನಾಲ್ಕು ಬಾರಿ ಮಾತ್ರ ಫಿಸಿಯೋಥೆರಪಿ ನೀಡಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ನೋವು ನಿವಾರಣೆಗಾಗಿ ಎಪಿಡ್ಯೂರಲ್ ಇಂಜೆಕ್ಷನ್ ನೀಡಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಜೈಲಿನಲ್ಲಿ ಈ ಆರೋಗ್ಯ ಸಮಸ್ಯೆಗಳನ್ನು ಇತರರ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜೈಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು. ಇದೇ ವೇಳೆ ವಾದ ಮಂಡನೆಗೆ ಕಾಲಾವಕಾಶ ಕೋರಿದ ಪ್ರಾಸಿಕ್ಯೂಷನ್, ನವೆಂಬರ್ 28 ಅಥವಾ 30ಕ್ಕೆ ವಿಚಾರಣೆ ನಿಗದಿಪಡಿಸುವಂತೆ ಮನವಿ ಮಾಡಿತು.
ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಕೋರ್ಟ್ ಸೂಚನೆ
ವೈದ್ಯಾಧಿಕಾರಿಗಳು ಸಲ್ಲಿಸಿದ ವರದಿ ಹಾಗೂ ದರ್ಶನ್ ಆರೋಗ್ಯ ಸ್ಥಿತಿಯನ್ನು ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಪರಿಶೀಲಿಸಿದರು. ನೋವು ಉಪಶಮನಕ್ಕೆ ಅಗತ್ಯ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಿದರು.
ಅಗತ್ಯಬಿದ್ದರೆ ದರ್ಶನ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ಆದೇಶಿಸಿದರು. ಬಳಿಕ ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದರು.
ಇದನ್ನು ಓದಿ: Darshan Case: ದರ್ಶನ್ ಕೇಸ್ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ; ಸೋಮವಾರಕ್ಕೆ ಮುಂದೂಡಿದ ಕ್ರಾಸ್ ಎಕ್ಸಾಮಿನೇಷನ್
ಈ ಆದೇಶದಿಂದ ದರ್ಶನ್ ಜೈಲಿನ ಹೊರಗೆ ಚಿಕಿತ್ಸೆ ಪಡೆಯಲು ಅವಕಾಶ ಸಿಕ್ಕಂತಾಗಿದೆ. ಆದರೆ ತಾವು ಬಯಸಿದ ಖಾಸಗಿ ಆಸ್ಪತ್ರೆಯ ಬದಲಿಗೆ, ನ್ಯಾಯಾಲಯ ಸೂಚಿಸಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಿದೆ.
Darshan: ಚಳಿಗಾಲದಲ್ಲಿ ಹೆಚ್ಚಾದ ದರ್ಶನ್ ಬೆನ್ನುನೋವು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ವರ್ಷಕ್ಕೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ. ಕೆಲ ವಾರಗಳ ಹಿಂದಷ್ಟೇ ನ್ಯಾಯಾಲಯದ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದರು.
ಚಳಿಗಾಲ ಪ್ರಾರಂಭವಾದ ಬಳಿಕ ತಮಗೆ ಮತ್ತೆ ಬೆನ್ನು ನೋವು ಶುರುವಾಗಿದೆ ಎಂದು ಹೇಳಿಕೊಂಡಿದ್ದರು. ನೋವು ತೀವ್ರವಾಗಿರುವುದರಿಂದ ಸೂಕ್ತ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.




