IMAGE: AI GENERATED
‘ಬಿಗ್ ಬಾಸ್ ಕನ್ನಡ ಸೀಸನ್ 13’ರ (BBK 13) ಮನೆ ಈಗ ಸಂಪೂರ್ಣವಾಗಿ ಕಾಡಿನ ರೂಪ ಪಡೆದುಕೊಂಡಿದೆ. ದೊಡ್ಮನೆಯ ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.
ಈಗಾಗಲೇ ಮನೆಯೊಳಗೆ ಗುಳ್ಳೆನರಿ ಮತ್ತು ಕಾಗೆ ಸೇರಿಕೊಂಡು ತಮ್ಮ ಆಟ ಶುರುಮಾಡಿವೆ. ನಂಬಿಕೆಯ ಮುಖವಾಡ ಧರಿಸಿ, ಮನೆಯವರ ದಿಕ್ಕು ತಪ್ಪಿಸುವ ಕೆಲಸವನ್ನು ಗುಳ್ಳೆನರಿ ಬಹಳ ಚಾಣಾಕ್ಷತೆಯಿಂದ ಮಾಡುತ್ತಿದೆ.
ಇದೀಗ ಈ ಕಾಡಿಗೆ ಕಾಡಿನ ರಾಜ ಸಿಂಹದ ಎಂಟ್ರಿಯಾಗಿದೆ. ಕಾಗೆ ಹಾಗೂ ನರಿಯನ್ನು ಬೇಟೆಯಾಡಲು ಸಿಂಹ ಸಿದ್ಧವಾಗಿದ್ದು, ಇಂದಿನ ಸಂಚಿಕೆಯ ಹೊಸ ಪ್ರೋಮೋ ಭಾರಿ ಕುತೂಹಲ ಮೂಡಿಸಿದೆ.
ಗುಳ್ಳೆನರಿ ಆಟದಲ್ಲಿ ‘ಯಶಸ್’ ಕಂಡಿರುವುದೆಷ್ಟು?
ಮನೆಯೊಳಗಿನ ಗುಳ್ಳೆನರಿ ಬೇರಾರೂ ಅಲ್ಲ, ಅದು ಯಶಸ್ ಎಂಬುದು ವೀಕ್ಷಕರಿಗೆ ಈಗಾಗಲೇ ಗೊತ್ತಿದೆ. ಆದರೆ ದೊಡ್ಮನೆಯ ಸ್ಪರ್ಧಿಗಳಿಗೆ ಮಾತ್ರ ಈ ಸತ್ಯ ಇನ್ನೂ ತಿಳಿದಿಲ್ಲ.
ತಮ್ಮ ಚಾಣಾಕ್ಷ ಬುದ್ಧಿಯಿಂದ ಯಶಸ್ ನಂಬಿಕೆಯ ಮುಖವಾಡ ಧರಿಸಿದ್ದಾರೆ. ಮನೆಯವರಿಗೆ ದ್ರೋಹ ಬಗೆದು ಅಧಿಕಾರ ಪಡೆದುಕೊಳ್ಳಲು ಅವರು ಮುನ್ನುಗ್ಗುತ್ತಿದ್ದಾರೆ.
ಈಗಾಗಲೇ ನೀಡಿರುವ ಎರಡು ರಹಸ್ಯ ಟಾಸ್ಕ್‌ಗಳನ್ನು ಯಶಸ್ ಬಹಳ ‘ಯಶಸ್’ವಿಯಾಗಿ ಪೂರ್ಣಗೊಳಿಸಿದ್ದಾರೆ. ತಮ್ಮ ಮೇಲೆ ಅನುಮಾನ ಬಾರದಂತೆ ಆಟ ಆಡುತ್ತಿರುವುದು ವಿಶೇಷವಾಗಿದೆ.
ಸಿಂಹದ ಪಾತ್ರಕ್ಕೆ ಮನೆಯವರ ಆಯ್ಕೆ ಹೇಗಿತ್ತು?
ಇದೀಗ ಬಿಗ್ ಬಾಸ್ ಮನೆಗೆ ಸಿಂಹ ಎಂಟ್ರಿ ಕೊಟ್ಟಿದ್ದು, ನರಿ ಹಾಗೂ ಕಾಗೆ ಯಾರು ಎಂಬುದನ್ನು ಪತ್ತೆಹಚ್ಚುವ ಜವಾಬ್ದಾರಿ ಸಿಂಹಕ್ಕಿದೆ. ಈ ಕುರಿತು ವಾಹಿನಿ ಹೊಸ ಪ್ರೋಮೋ ರಿಲೀಸ್ ಮಾಡಿದೆ.
ಮನೆಯವರೇ ಒಮ್ಮತದಿಂದ ಆಯ್ಕೆ ಮಾಡಿ ಸಿಂಹದ ಪಾತ್ರವನ್ನು ಒಬ್ಬರಿಗೆ ನೀಡಬೇಕಿದೆ. ಅದರಂತೆ ಸ್ಪರ್ಧಿಗಳೆಲ್ಲರೂ ಆಕ್ಟಿವಿಟಿ ರೂಮ್‌ನಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡಿದ್ದಾರೆ.
ಸಿಂಹದ ಕಿರೀಟವನ್ನು ಒಬ್ಬರಿಂದ ಇನ್ನೊಬ್ಬರ ತಲೆಗೆ ಹಾಕುತ್ತಾ ಹೋಗುವ ಟಾಸ್ಕ್ ನೀಡಲಾಗಿದೆ. ಈ ಆಟದಲ್ಲಿ 13ನೇಯದಾಗಿ ಯಾರ ತಲೆ ಮೇಲೆ ಕಿರೀಟ ಬರುತ್ತದೋ ಅವರೇ ಸಿಂಹವಾಗಲಿದ್ದಾರೆ.
13ನೇ ಕಿರೀಟದ ಆಟದಲ್ಲಿ ಬಿಗ್ ಟ್ವಿಸ್ಟ್
ಈ ಕಿರೀಟ ವರ್ಗಾವಣೆ ಆಟದಲ್ಲಿ ಬಿಗ್ ಬಾಸ್ ಒಂದು ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಅಕ್ಕಪಕ್ಕ ಕುಳಿತವರ ತಲೆ ಮೇಲೆ ಕಿರೀಟ ಹಾಕುವಂತಿಲ್ಲ ಎಂಬ ನಿಯಮವಿದೆ.
ಇದನ್ನು ಓದಿ: BBK 13: 80 ದಿನಗಳ ಆಟದಲ್ಲಿ ಗುಳ್ಳೆನರಿ ಟ್ವಿಸ್ಟ್; ಗಾನವಿ-ಗಗನ್ ನಡುವೆ ಮತ್ತಷ್ಟು ದೊಡ್ಡದಾದ ಬಿರುಕು
ಸ್ಪರ್ಧಿಗಳು ತಮ್ಮ ಇಷ್ಟದ ಹಾಗೂ ಸೂಕ್ತ ಕಾರಣ ನೀಡಿ ಯಾರ ತಲೆ ಮೇಲೆ ಬೇಕಿದ್ದರೂ ಕಿರೀಟ ಇಡಬಹುದು. ಕೊನೆಯದಾಗಿ 13ನೇ ಸುತ್ತಿನಲ್ಲಿ ಯಾರ ತಲೆ ಮೇಲೆ ಕಿರೀಟ ಬೀಳುತ್ತದೋ ಅವರು ಸಿಂಹದ ಪಾತ್ರ ನಿಭಾಯಿಸಬೇಕು. ಸಿಂಹವಾದವರು ಮನೆಯೊಳಗಿರುವ ಕಾಗೆ ಹಾಗೂ ಗುಳ್ಳೆನರಿ ಯಾರೆಂದು ಕಂಡುಹಿಡಿಯಬೇಕಿದೆ. ಇದು ಇಡೀ ಆಟದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ.
BBK 13: ಯಶಸ್ ಪಾಲಿಗೆ ಸಿಂಹ, ನರಿ ಎರಡೂ ಪಾತ್ರ
ಹೊಸ ಪ್ರೋಮೋದಲ್ಲಿ ತೋರಿಸಿರುವಂತೆ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಈಗಾಗಲೇ ಗುಳ್ಳೆನರಿ ಪಾತ್ರದಲ್ಲಿರುವ ಯಶಸ್ ಅವರಿಗೇ ಸಿಂಹದ ಪಾತ್ರವೂ ಸಿಕ್ಕಿರುವಂತೆ ಕಾಣುತ್ತಿದೆ.
ಒಂದೇ ವ್ಯಕ್ತಿಗೆ ಗುಳ್ಳೆನರಿ ಮತ್ತು ಸಿಂಹ ಎಂಬ ಎರಡು ಪ್ರಮುಖ ಪಾತ್ರಗಳು ಸಿಕ್ಕರೆ ಆಟ ಹೇಗೆ ಸಾಗುತ್ತದೆ ಎಂಬ ಕುತೂಹಲ ಮೂಡಿದೆ. ಯಶಸ್ ಈ ಎರಡೂ ಪಾತ್ರಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಅಥವಾ ಯಶಸ್ ಅವರಿಗೆ ಎರಡು ಪಾತ್ರ ಸಿಕ್ಕಿರುವುದರಿಂದ ಬಿಗ್ ಬಾಸ್ ಪಾತ್ರವನ್ನು ಬದಲಿಸುತ್ತಾರಾ? ಇಂದಿನ ಸಂಚಿಕೆಯಲ್ಲಿ ‘ಯಶಸ್ವಿ’ಯಾಗೋದು ನರಿನಾ ಅಥವಾ ಸಿಂಹಾನಾ ಎಂಬುದನ್ನು ಕಾದುನೋಡಬೇಕಿದೆ.




