ಬೆಂಗಳೂರು : ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರೂ ಯಾವುದೇ ಅಂತಿಮ ನಿರ್ಧಾರ ಹೊರಬರಲಿಲ್ಲ. ಪ್ರಸ್ತುತ ತಮಗೆ ಸಿಗುತ್ತಿರುವ ಎಂಟು ಸಾವಿರ ರೂಪಾಯಿ ಗೌರವಧನವನ್ನು ಹದಿನೈದು ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಎಂಬುದೇ ಕಾರ್ಯಕರ್ತೆಯರ ಮುಖ್ಯ ಬೇಡಿಕೆಯಾಗಿದೆ ಎಂದು ಸಭೆಯ ನಂತರ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದರು. ಬೇಡಿಕೆಯ ಕುರಿತು ಆರ್ಥಿಕ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕಾರ್ಯಕರ್ತೆಯರು ಸಹಾನುಭೂತಿ ತೋರಿಸುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಅಡ್ಡಗೋಡೆ ಮೇಲೆ ದೀಪವಿಟ್ಟ ಸಿಎಂ !
ಆದರೆ ಈ ಭರವಸೆ ಕಾರ್ಯಕರ್ತೆಯರ ಅಸಮಾಧಾನವನ್ನು ಶಮನಗೊಳಿಸಲು ಸಾಧ್ಯವಾಗಲಿಲ್ಲ. ಸಭೆಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಅಡ್ಡಗೋಡೆ ಮೇಲೆ ದೀಪವಿಟ್ಟ ರೀತಿಯಲ್ಲಿ ಮಾತನಾಡಿದರು ಎಂದು ಅವರು ದೂರಿದ್ದಾರೆ. ಕಳೆದ ಮೂರು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತೆಯರು, ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರವಾಗಿ ಆದೇಶ ಪತ್ರ ಕೈಸೇರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ದುಡಿದು ಜನರ ಜೀವ ಉಳಿಸಿದ ತಮಗೆ ಆಗ ಸರ್ಕಾರ ನೆನಪಿಸಿಕೊಂಡಿತ್ತು, ಆದರೆ ಈಗ ಬೆಲೆ ಏರಿಕೆ ಗಗನಕ್ಕೇರಿದ್ದರೂ ಗೌರವಧನ ಹೆಚ್ಚಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹೋರಾಟ ಕೈಬಿಡಬೇಕೋ ಅಥವಾ ಮುಂದುವರಿಸಬೇಕೋ ಎಂಬುದನ್ನು ಎಲ್ಲರೂ ಒಟ್ಟಾಗಿ ಚರ್ಚಿಸಿ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : 80 ವರ್ಷ ವಯಸ್ಸಾಯ್ತು – ಇನ್ನು ಚುನಾವಣೆಗೆ ನಿಲ್ಲೋದಿಲ್ಲ
ಈ ವಿಷಯ ಕೇವಲ ಸಂಬಳ ಹೆಚ್ಚಳದ ಬೇಡಿಕೆಯಾಗಿ ಉಳಿದಿಲ್ಲ, ಸರ್ಕಾರದ ನಂಬಿಕೆ ಮತ್ತು ಆಡಳಿತದ ಬದ್ಧತೆಯ ಪ್ರಶ್ನೆಯಾಗಿಯೂ ಬದಲಾಗಿದೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಲಸಿಕೆ, ಮಾತೃ ಆರೋಗ್ಯ, ಕ್ಷಯ ಹಾಗೂ ಇತರೆ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ. ಇಷ್ಟು ದೊಡ್ಡ ಜವಾಬ್ದಾರಿ ಹೊತ್ತವರಿಗೆ ತಿಂಗಳಿಗೆ ಎಂಟು ಸಾವಿರ ರೂಪಾಯಿ ಗೌರವಧನ ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ ಎಂಬುದು ವಾಸ್ತವ. ಸರ್ಕಾರ ಆರ್ಥಿಕ ಹೊರೆ ಮತ್ತು ಖಜಾನೆ ಸ್ಥಿತಿಯನ್ನು ಕಾರಣವಾಗಿ ಹೇಳಬಹುದಾದರೂ, ಪ್ರತಿ ಬಾರಿ ಭರವಸೆ ನೀಡಿ ನಿರ್ಧಾರ ಮುಂದೂಡುವುದು ಕಾರ್ಯಕರ್ತೆಯರಲ್ಲಿ ಅಪನಂಬಿಕೆ ಹೆಚ್ಚಿಸುತ್ತದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸ್ಪಷ್ಟ ಆದೇಶ ಬಾರದಿದ್ದರೆ, ಈ ಹೋರಾಟ ಇನ್ನಷ್ಟು ತೀವ್ರವಾಗಿ ಆರೋಗ್ಯ ಸೇವೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಈ ಬಾರಿ ಕೇವಲ ಮಾತುಕತೆಗೆ ಸೀಮಿತವಾಗದೆ, ಕಾರ್ಯಸಾಧ್ಯವಾದ ಹೆಚ್ಚಳದೊಂದಿಗೆ ಲಿಖಿತ ಭರವಸೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.




