ಮೈಸೂರು : ಜಿಲ್ಲೆಯ ವರುಣ ಕ್ಷೇತ್ರದ ಹೊಸಕೆಂಪಯ್ಯನಹುಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮೂಗುಮಾರಮ್ಮ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ್ದರು. ಅವರೊಂದಿಗೆ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಹೂಮಳೆ ಸುರಿಸಿ ಅತ್ಯಂತ ಅದ್ದೂರಿಯಾಗಿ ಸ್ವಾಗತ ಕೋರಿದರು. ದೇವಸ್ಥಾನದ ಉದ್ಘಾಟನೆಯ ಸಂಭ್ರಮದ ನಡುವೆಯೇ ಗ್ರಾಮದಲ್ಲಿ ಅಭಿಮಾನಿಗಳ ಉತ್ಸಾಹ ಮನೆಮಾಡಿತ್ತು.
ಸಿದ್ದುನೇ ನೆಕ್ಸ್ಟ್ ಸಿಎಂ ..!
ಈ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಮತ್ತು ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು. ನಮಗೆ ತೃಪ್ತಿ ಇಲ್ಲ, ನೀವು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಅಭಿಮಾನಿಗಳು ಬಹಿರಂಗವಾಗಿ ಆಗ್ರಹಿಸಿದರು. ರಾಜ್ಯದ ಏಳು ಕೋಟಿ ಜನರ ಆಶೀರ್ವಾದ ನಿಮ್ಮ ಮೇಲಿದೆ ಎಂದು ಅವರು ಘೋಷಣೆಗಳ ಮೂಲಕ ವಿಶ್ವಾಸ ವ್ಯಕ್ತಪಡಿಸಿದರು. ದೇವಸ್ಥಾನದ ಉದ್ಘಾಟನಾ ವೇದಿಕೆ ಕೆಲಕಾಲ ಅಭಿಮಾನಿಗಳ ಘೋಷಣೆಗಳಿಂದಲೇ ತುಂಬಿಹೋಗಿತ್ತು. ಗ್ರಾಮಸ್ಥರ ಈ ಪ್ರೀತಿ ಮತ್ತು ಬೆಂಬಲಕ್ಕೆ ಸಿದ್ದರಾಮಯ್ಯ ಅವರು ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಜನಸೇವೆಯೇ ನಿಜವಾದ ದೇವರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ವರುಣ ಸಿದ್ದರಾಮಯ್ಯ ಅವರ ರಾಜಕೀಯ ತವರೂರು ಎಂಬ ಕಾರಣಕ್ಕೆ ಇಲ್ಲಿನ ಪ್ರತಿಯೊಂದು ಕಾರ್ಯಕ್ರಮಕ್ಕೂ ರಾಜಕೀಯ ಮಹತ್ವ ಬರುವುದು ಸಹಜ. ದೇವಸ್ಥಾನದ ಉದ್ಘಾಟನೆಯಂತಹ ಧಾರ್ಮಿಕ ಕಾರ್ಯಕ್ರಮವೂ ಅಭಿಮಾನಿಗಳ ಪಾಲಿಗೆ ತಮ್ಮ ನಾಯಕನ ಮೇಲಿನ ನಂಬಿಕೆಯನ್ನು ಪ್ರದರ್ಶಿಸುವ ವೇದಿಕೆಯಾಗಿ ಬದಲಾಗಿದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ನಿರಂತರವಾಗಿ ನಡೆಯುತ್ತಿರುವ ಹೊತ್ತಿನಲ್ಲಿ, ತವರು ಕ್ಷೇತ್ರದಿಂದಲೇ ಇಂತಹ ಘೋಷಣೆಗಳು ಮೊಳಗುವುದು ಸಿದ್ದರಾಮಯ್ಯ ಅವರಿಗೆ ನೈತಿಕ ಬಲ ನೀಡುತ್ತದೆ. ಇದು ಕೇವಲ ಅಭಿಮಾನಿಗಳ ಭಾವನೆಯೋ ಅಥವಾ ಮುಂಬರುವ ರಾಜಕೀಯ ಬೆಳವಣಿಗೆಗಳಿಗೆ ಸಂದೇಶವೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.




