ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಎಂಬ ಆತ್ಮಕಥೆ ಮಾರುಕಟ್ಟೆಗೆ ಬರುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರ ಶುರುವಾಗಿದೆ. ಉತ್ತರ ಇಟಲಿಯಲ್ಲಿ ಕಳೆದ ಬಾಲ್ಯ, ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ಪರಿಚಯ, ನಂತರ ಭಾರತದ ಜೀವನಕ್ಕೆ ಹೊಂದಿಕೊಂಡ ಬಗೆ ಮತ್ತು ಈ ನಾಡಿನೊಂದಿಗೆ ಬೆಳೆದ ಭಾವನಾತ್ಮಕ ಸಂಬಂಧದ ಕುರಿತು ಸೋನಿಯಾ ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಪುಸ್ತಕದ ಮೂಲಕ ನೆಹರೂ-ಗಾಂಧಿ ಕುಟುಂಬ ತನ್ನ ಐತಿಹಾಸಿಕ ತಪ್ಪುಗಳನ್ನು ಮುಚ್ಚಿಡಲು ಹೊರಟಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹಳೆಯ ವಿಷಯಗಳನ್ನು ಕೆದಕುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ರಾಷ್ಟ ರಾಜಕೀಯದಲ್ಲಿ ಮತ್ತೆ ಕಿಡಿ .!
ಪುಸ್ತಕದಲ್ಲಿ ಉಲ್ಲೇಖವಾಗಿರುವ ಆಪರೇಷನ್ ಬ್ಲೂ ಸ್ಟಾರ್, 1984ರ ಸಿಖ್ ವಿರೋಧಿ ದಂಗೆ, ಬಾಬರಿ ಮಸೀದಿ, ಬಟ್ಲಾ ಹೌಸ್ ಕಾರ್ಯಾಚರಣೆ ಮತ್ತು 26/11 ಮುಂಬೈ ದಾಳಿಯಂತಹ ಸೂಕ್ಷ್ಮ ಪ್ರಸಂಗಗಳನ್ನು ಮುಂದಿಟ್ಟುಕೊಂಡು ಬಿಜೆಪಿ ದಾಳಿ ನಡೆಸಿದೆ. ಸಿಖ್ ಸಂತ್ರಸ್ತರ ಪರ ನ್ಯಾಯಾಲಯದಲ್ಲಿ ಹೋರಾಡಿದ್ದ ವಕೀಲ ಹಾಗೂ ಬಿಜೆಪಿ ನಾಯಕ ಎಚ್.ಎಸ್. ಫೂಲ್ಕಾ ಅವರು ಸೋನಿಯಾ ಗಾಂಧಿ ಅವರು ಸಿಖ್ ನರಮೇಧದ ವಿಚಾರದಲ್ಲಿ ತಮ್ಮ ಕುಟುಂಬಕ್ಕೆ ತಾವೇ ಕ್ಲೀನ್ ಚೀಟ್ ನೀಡಲು ಯತ್ನಿಸಿದ್ದಾರೆ, ಇದು ಅಧಿಕೃತ ದಾಖಲೆಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಅವರು ಇದನ್ನು ಇತಿಹಾಸಕ್ಕೆ ಬಣ್ಣ ಬಳಿಯುವ ಪ್ರಯತ್ನ ಎಂದು ಟೀಕಿಸಿದ್ದಾರೆ. ಶಿವಸೇನಾ ನಾಯಕಿ ಶೈನಾ ಎನ್‌ಸಿ ಅವರು 1984, 1991 ಮತ್ತು 2004ರಲ್ಲಿ ದೇಶವನ್ನು ಕಣ್ಣೀರಿಡುವಂತೆ ಮಾಡಿದವರು ಈಗ ಒಡನಾಟದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಪ್ರಧಾನಿ ಹುದ್ದೆ ಬದಲಾವಣೆ ಬಗ್ಗೆ ಪ್ರಣಬ್ ಮುಖರ್ಜಿ ನೀಡಿದ್ದ ಸಲಹೆ ತಮಗೆ ಆಘಾತ ತಂದಿತ್ತು ಎಂದು ಸೋನಿಯಾ ಬರೆದಿರುವುದಕ್ಕೆ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ತಿರುಗೇಟು ನೀಡಿದ್ದಾರೆ. ಅನುಭವಿ ನಾಯಕರಿಗೆ ಪ್ರಧಾನಿಯಾಗುವ ಆಕಾಂಕ್ಷೆ ಇರುವುದರಲ್ಲಿ ಆಘಾತವೇನಿದೆ, ಪ್ರಣಬ್ ಅವರಿಗೆ ಯಾವುದೇ ಹುದ್ದೆ ಸುಲಭವಾಗಿ ಸಿಕ್ಕಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ಸಿಖ್ ಸಮುದಾಯಕ್ಕೆ ನೋವಾಗಿದ್ದು ನಿಜ, ಎಲ್ಲರೂ ಕ್ಷಮೆ ಕೇಳಿದ್ದಾರೆ, ಅದು ಮುಗಿದ ಇತಿಹಾಸ, ಪಂಜಾಬ್ ಚುನಾವಣೆಗಾಗಿ ಬಿಜೆಪಿ ಹಳೆಯ ಗಾಯ ಕೆದಕುತ್ತಿದೆ ಎಂದು ಆರೋಪಿಸಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸೋನಿಯಾ ಅವರನ್ನು ಪ್ರಬುದ್ಧ ನಾಯಕಿ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಸಂಸತ್ ಭವನದಲ್ಲಿ ಟಿಪ್ಪು ಭಾವಚಿತ್ರಕ್ಕೆ ವಾಟಾಳ್ ಪಟ್ಟು !
ಒಬ್ಬ ನಾಯಕನ ಆತ್ಮಕಥೆ ಕೇವಲ ವೈಯಕ್ತಿಕ ನೆನಪುಗಳ ಸಂಗ್ರಹವಾಗಿರದೆ, ಅದೊಂದು ರಾಜಕೀಯ ದಾಖಲೆಯಾಗಿಯೂ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಈ ವಿವಾದವೇ ಸಾಕ್ಷಿ. ಸೋನಿಯಾ ಗಾಂಧಿ ಅವರು ತಮ್ಮ ಬದುಕಿನ ಕಥೆಯನ್ನು ಹೇಳಲು ಹೊರಟರೂ, ವಿರೋಧ ಪಕ್ಷಗಳು ಅದನ್ನು ಕಾಂಗ್ರೆಸ್‌ನ ಹಿಂದಿನ ಆಡಳಿತದ ವೈಫಲ್ಯಗಳನ್ನು ಮರುಪರಿಶೀಲಿಸುವ ಅವಕಾಶವಾಗಿ ಬಳಸಿಕೊಳ್ಳುತ್ತಿವೆ. ಅದರಲ್ಲೂ 1984ರ ದಂಗೆ ಮತ್ತು ಪಂಜಾಬ್‌ನಂತಹ ಸೂಕ್ಷ್ಮ ವಿಷಯಗಳು ಚುನಾವಣಾ ರಾಜಕಾರಣದಲ್ಲಿ ಮತ್ತೆ ಮುನ್ನೆಲೆಗೆ ಬರುವುದು ಆತಂಕಕಾರಿ. ಇತಿಹಾಸವನ್ನು ಚರ್ಚಿಸುವುದು ಅಗತ್ಯವಾದರೂ, ಅದನ್ನು ಮತಗಳ ಲೆಕ್ಕಾಚಾರಕ್ಕಾಗಿ ಕೆದಕುವುದು ಸಂತ್ರಸ್ತರ ಗಾಯವನ್ನು ಮತ್ತೆ ತೆರೆದಂತೆ ಆಗುತ್ತದೆ. ಕಾಂಗ್ರೆಸ್ ಕೂಡ ಕೇವಲ ಕ್ಷಮೆ ಕೇಳಿದ್ದೇವೆ ಎಂಬ ಉತ್ತರದಿಂದ ತಪ್ಪಿಸಿಕೊಳ್ಳದೆ, ಆ ಕಾಲದ ತಪ್ಪುಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಪ್ರಾಮಾಣಿಕ ಉತ್ತರ ನೀಡಬೇಕಾಗುತ್ತದೆ. ಅಂತಿಮವಾಗಿ ಈ ಪುಸ್ತಕ ಸೋನಿಯಾ ಅವರ ವೈಯಕ್ತಿಕ ಪಯಣಕ್ಕಿಂತ ಹೆಚ್ಚಾಗಿ, ಭಾರತದ ರಾಜಕೀಯದಲ್ಲಿ ಇತಿಹಾಸ, ನೆನಪು ಮತ್ತು ಅಧಿಕಾರದ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.




