☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

YATINDRA : ಕುಮಾರಸ್ವಾಮಿ ಮನೆಯಿಂದಲೇ ಅಪಲೋಡ್ ಆಯ್ತಾ ಸ್ಟಿಂಗ್ ವಿಡಿಯೋ..? ಯತೀಂದ್ರ ಸ್ಫೋಟಕ ಆರೋಪ

Image of Yatindra with HD Kumaraswamy
ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yatindra) ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಅತ್ಯಂತ ಗಂಭೀರ ಆರೋಪ

ಮುಖ್ಯಾಂಶಗಳು

  • ಹೆಚ್.ಡಿ.ಕೆ ನಿವಾಸದಿಂದಲೇ ವಿಡಿಯೋ ಅಪ್ಲೋಡ್
  • ಯತಿಂದ್ರ ಸ್ಫೋಟಕ ಆರೋಪ

ಮೈಸೂರು : ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yatindra) ಅವರು ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಅತ್ಯಂತ ಗಂಭೀರ ಆರೋಪವೊಂದನ್ನು ಮುಂದಿಟ್ಟಿದ್ದಾರೆ. ವಿಡಿಯೋವನ್ನು ಅಪ್ಲೋಡ್ ಮಾಡಿಸಿದ ಆರೋಪಿಯ ಮೊಬೈಲ್ ನೆಟ್ವರ್ಕ್ ಕುಮಾರಸ್ವಾಮಿ ಅವರ ನಿವಾಸದಲ್ಲೇ ಪತ್ತೆಯಾಗಿದೆ ಎಂದು ಪೊಲೀಸ್ ತನಿಖೆಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದು, ಪ್ರಕರಣ ಈಗ ವೈಯಕ್ತಿಕ ತೇಜೋವಧೆಯ ಆರೋಪದಿಂದ ರಾಜಕೀಯ ಪಿತೂರಿಯ ಆರೋಪದ ಹಂತಕ್ಕೆ ತಲುಪಿದಂತಾಗಿದೆ.

ಕಾನೂನು ಪ್ರಕಾರ ಕಠಿಣ ಕ್ರಮವಾಗಲಿದೆ..!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಡಿಯೋ ಹರಡಿದ ಕೆಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಯತೀಂದ್ರ ತಿಳಿಸಿದ್ದಾರೆ. ವಿಚಾರಣೆಯ ವೇಳೆ ಸಿಕ್ಕ ಮಾಹಿತಿಯ ಪ್ರಕಾರ, ಅಪ್ಲೋಡ್ ಮಾಡಿಸಿದ ವ್ಯಕ್ತಿಯ ಮೊಬೈಲ್ ಸಂಪರ್ಕ ಕುಮಾರಸ್ವಾಮಿ ಅವರ ಮನೆಯ ವ್ಯಾಪ್ತಿಯಲ್ಲೇ ಟ್ರೇಸ್ ಆಗಿದೆ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಕೇವಲ ಸ್ಟಿಂಗ್ ಮಾಡಿದವರನ್ನು ಮಾತ್ರವಲ್ಲ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ತೇಜೋವಧೆ ಮಾಡಲು ಯತ್ನಿಸಿದವರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖಾಧಿಕಾರಿಗಳು ಸಂಗ್ರಹಿಸಿದ ಎಲ್ಲ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು, ಅವರು ವಿಡಿಯೋ ಹರಡುವಲ್ಲಿ ಭಾಗಿಯಾಗಿದ್ದಾರೆಯೇ ಇಲ್ಲವೇ ಎಂಬುದನ್ನು ನ್ಯಾಯಾಲಯವೇ ನಿರ್ಧರಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಟಿಂಗ್ ಮಾಡಿದವರು ಮತ್ತು ಉದ್ದೇಶಪೂರ್ವಕವಾಗಿ ವಿಡಿಯೋ ಹರಡಿದ ಪ್ರತಿಯೊಬ್ಬರ ಮೇಲೂ ಕ್ರಮವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮೂರನೇ ಸಿಎಂ ಚರ್ಚೆಗೆ ತೆರೆ ಎಳೆದ ಸತೀಶ್ ಜಾರಕಿಹೊಳಿ, ಡಿಕೆಶಿನೇ ನಾಯಕ

ಈ ಪ್ರಕರಣ ಇನ್ನು ಕೇವಲ ಒಂದು ವಿಡಿಯೋ ಪ್ರಕರಣವಾಗಿ ಉಳಿದಿಲ್ಲ. ಮೊಬೈಲ್ ನೆಟ್ವರ್ಕ್ ಲೊಕೇಶನ್ ನಂತಹ ತಾಂತ್ರಿಕ ಸಾಕ್ಷ್ಯವೊಂದು ನೇರವಾಗಿ ಒಬ್ಬ ಕೇಂದ್ರ ಸಚಿವರ ನಿವಾಸದತ್ತ ಬೊಟ್ಟು ಮಾಡುತ್ತಿದೆ ಎಂಬ ಆರೋಪವೇ ಇದರ ತೀವ್ರತೆಯನ್ನು ಹೆಚ್ಚಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೆಟ್ವರ್ಕ್ ಟ್ರೇಸ್ ಆಗುವುದು ಮಾತ್ರವೇ ಯಾರೊಬ್ಬರ ನೇರ ಪಾಲ್ಗೊಳ್ಳುವಿಕೆಗೆ ನಿರ್ಣಾಯಕ ಸಾಕ್ಷ್ಯವಾಗುವುದಿಲ್ಲ. ಆ ಸಮಯದಲ್ಲಿ ಆ ಮನೆಯಲ್ಲಿ ಯಾರಿದ್ದರು, ಮೊಬೈಲ್ ಯಾರ ಬಳಿ ಇತ್ತು, ಅಪ್ಲೋಡ್ ಮಾಡಲು ಸೂಚನೆ ಕೊಟ್ಟವರು ಯಾರು ಎಂಬುದನ್ನು ತನಿಖೆ ಸ್ಪಷ್ಟಪಡಿಸಬೇಕಿದೆ. ರಾಜಕೀಯ ನಾಯಕರ ಹೆಸರು ಬಂದ ಕೂಡಲೇ ಆರೋಪ-ಪ್ರತ್ಯಾರೋಪಗಳು ಸಹಜವಾಗುತ್ತವೆ. ಹಾಗಾಗಿ ಸರ್ಕಾರದ ತನಿಖೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾದರೆ, ಪೊಲೀಸರು ಈ ತಾಂತ್ರಿಕ ಸಾಕ್ಷ್ಯವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಸಾಬೀತುಪಡಿಸಬೇಕು. ಇಲ್ಲದಿದ್ದರೆ ಇದು ಮತ್ತೊಂದು ರಾಜಕೀಯ ಕೆಸರೆರಚಾಟವಾಗಿ ಮಾತ್ರ ಉಳಿಯುವ ಅಪಾಯವಿದೆ.