☔ Weather
Bengaluru: ☁️ 20°C | AQI 59
Mysore: ☁️ 22°C | AQI 63
Mangalore: ☁️ 26°C | AQI 68
Bengaluru: ☁️ 20°C | AQI 59

WEST BENGAL : AI ಬಳಸಿ 58 ಲಕ್ಷ ಮತದಾರರ ಹೆಸರು ಕಡಿತ..? – ಮರುಚುನಾವಣೆಗೆ ಮಮತಾ ಬ್ಯಾನರ್ಜಿ ಆಗ್ರಹ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಹಳೆಯ ಮತದಾರರ ಪಟ್ಟಿಯನ್ನು ಬಳಸಿಕೊಂಡು ತಕ್ಷಣವೇ ಮರುಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಚುನಾವಣಾ ಆಯೋಗ ವಿಶೇಷ ಸಾಂದ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನೆಪದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಬಂಗಾಳದ ಸುಮಾರು 58 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಯಾವುದೇ ಮುನ್ಸೂಚನೆ ಅಥವಾ ವಿಚಾರಣೆಯ ಅವಕಾಶ ನೀಡದೆ ಪ್ರಜೆಗಳ ಹಕ್ಕನ್ನು ಕಸಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಈ ಅಕ್ರಮಗಳ ವಿರುದ್ಧ ಸಿಡಿದೆದ್ದಿರುವ ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಚುನಾವಣಾ ಆಯೋಗದ ಮುಖ್ಯಸ್ಥರನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಆಯೋಗವು ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ ಮತ್ತು ಆಡಳಿತಾರೂಢ ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದ ಮಮತಾ ಬ್ಯಾನರ್ಜಿ, ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಜೊತೆಗೆ, ತಕ್ಷಣವೇ ಈ ಹೊಸ ಮತದಾರರ ಪಟ್ಟಿಯನ್ನು ರದ್ದುಗೊಳಿಸಿ, ಹಳೆಯ ಪಟ್ಟಿಯಧಾರಿತವಾಗಿ ಮರುಚುನಾವಣೆ ಪ್ರಕ್ರಿಯೆಯನ್ನು ಆರಂಭಿಸುವುದು ಒಂದೇ ಸೂಕ್ತ ಪರಿಹಾರ ಎಂದು ಪ್ರತಿಪಾದಿಸಿದ್ದಾರೆ.

ಆಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆಯನ್ನು ಚುನಾವಣಾ ಸಂಸ್ಥೆಗಳು ಮತದಾರರ ಪಟ್ಟಿ ಪರಿಶೀಲನೆಗೆ ಬಳಸುವುದು ತಾಂತ್ರಿಕವಾಗಿ ಪ್ರಗತಿಯಾಗಿದ್ದರೂ, ಅದರಲ್ಲಿನ ನ್ಯೂನತೆಗಳು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುತ್ತವೆ. ಲಕ್ಷಾಂತರ ಮತದಾರರನ್ನು ಏಕಾಏಕಿ ಪಟ್ಟಿಯಿಂದ ಹೊರಗಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯನ್ನೇ ಅಲ್ಲಾಡಿಸುತ್ತದೆ ಎಂಬೆಲ್ಲಾ ಆರೋಪ ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ. ಈ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಆಸ್ಪದ ನೀಡದೆ ಸ್ವತಂತ್ರ ತನಿಖೆ ನಡೆಸಿ ಆಯೋಗ ತನ್ನ ಬದ್ಧತೆಯನ್ನು ಸ್ಪಷ್ಟಪಡಿಸಬೇಕಿದೆ.