☔ Weather
Bengaluru: ☁️ 21°C | AQI 59
Mysore: ☁️ 21°C | AQI 63
Mangalore: ☁️ 26°C | AQI 69
Bengaluru: ☁️ 21°C | AQI 59

STING OPERATION : ಉತ್ತರ ಭಾರತದ ಖಾಸಗಿ ಏಜೆನ್ಸಿಯಿಂದ ಸಿಎಂ ಸೇರಿ ಸಚಿವರಿಗೆ ಬಲೆ: ಜಾರಕಿಹೊಳಿ ಸ್ಫೋಟಕ ಹೇಳಿಕೆ

ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಮತ್ತೆ ಸ್ಟಿಂಗ್ ಆಪರೇಷನ್ (Sting Operation) ಆತಂಕ ಶುರುವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟದ ಪ್ರಮುಖ ಸಚಿವರನ್ನು ಗುರಿಯಾಗಿಸಿ ಖಾಸಗಿ ಸಂಸ್ಥೆಯೊಂದು ರಹಸ್ಯ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗಪಡಿಸಿದ್ದಾರೆ. ಉತ್ತರ ಭಾರತದ ಮೂಲದ ಏಜೆನ್ಸಿಯೊಂದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಈ ತಂತ್ರ ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ.

ಆಕರ್ಷಣೆಗೆ ಒಳಗಾದರೆ ಸಂಕಷ್ಟ ಖಚಿತ !

ಈ ವಿಚಾರ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿದೆ. ತಮ್ಮನ್ನೇ ಗುರಿಯಾಗಿಸಿ ಈ ರೀತಿಯ ಪ್ರಯತ್ನ ನಡೆದಿದೆ ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಇತರೆ ಸಚಿವರಿಗೂ ಇದೇ ರೀತಿ ಮೋಸದ ಬಲೆ ಬೀಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸಚಿವರನ್ನು ಸೆಳೆಯಲು ಬರುವವರು ವಿವಿಧ ಆಮಿಷಗಳನ್ನು ತೋರಿಸುತ್ತಾರೆ. ಮೈಲಾರಿ ದೋಸೆ, ಮದ್ದೂರು ವಡೆ, ದಾವಣಗೆರೆ ಬೆಣ್ಣೆ ದೋಸೆ, ಮುಳಬಾಗಿಲು ದೋಸೆ, ರಸಗುಲ್ಲಾದಂತಹ ತಿಂಡಿಗಳನ್ನು ಮುಂದಿಟ್ಟು ಆಸೆ ಹುಟ್ಟಿಸುವ ರೀತಿಯಲ್ಲಿ ಬಲೆ ಹಾಕುತ್ತಾರೆ. ಅಂತಹ ಆಕರ್ಷಣೆಗೆ ಒಳಗಾದರೆ ಸಂಕಷ್ಟ ಖಚಿತ. ಹೀಗಾಗಿ ಯಾರೂ ಯಾವುದೇ ಆಮಿಷಕ್ಕೆ ಮಣಿಯದೆ ಅತ್ಯಂತ ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ : ಸ್ಟಿಂಗ್ – ಡಿಂಗ್ ಎಲ್ಲಾ ನಿಮ್ಮದೇ ಕಿತಾಪತಿ : ವಿಜಯೇಂದ್ರ ವಾಗ್ದಾಳಿ

ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಹೊಸ ವಿಷಯವೇನಲ್ಲ. ಈ ಹಿಂದೆ ಸಿಡಿ ಪ್ರಕರಣಗಳು ಹಲವು ಸಚಿವರ ರಾಜಕೀಯ ಭವಿಷ್ಯವನ್ನೇ ಬದಲಿಸಿವೆ. ರಮೇಶ್ ಜಾರಕಿಹೊಳಿ ಪ್ರಕರಣದಿಂದ ಹಿಡಿದು ಇತ್ತೀಚಿನ ಕೆಲವು ಆಡಿಯೋ, ವಿಡಿಯೋ ಪ್ರಕರಣಗಳವರೆಗೆ ಗುಪ್ತ ಕಾರ್ಯಾಚರಣೆಗಳು ಅಧಿಕಾರದ ಚಿತ್ರಣವನ್ನೇ ಅಲುಗಾಡಿಸಿವೆ. ಇಂತಹ ಕಾರ್ಯಾಚರಣೆಗಳ ಹಿಂದೆ ಕೆಲವೊಮ್ಮೆ ರಾಜಕೀಯ ದ್ವೇಷ, ಕೆಲವೊಮ್ಮೆ ಬ್ಲಾಕ್ ಮೇಲ್ ಉದ್ದೇಶ ಇರುತ್ತದೆ. ಸರ್ಕಾರದಲ್ಲಿರುವಾಗ ಸಚಿವರು ಪ್ರತಿದಿನ ನೂರಾರು ಜನರನ್ನು ಭೇಟಿಯಾಗುತ್ತಾರೆ. ಯಾರು ಯಾವ ಉದ್ದೇಶದಿಂದ ಬರುತ್ತಿದ್ದಾರೆ ಎಂದು ಗುರುತಿಸುವುದು ಕಷ್ಟ. ಖಾಸಗಿ ಏಜೆನ್ಸಿಗಳು ದೊಡ್ಡ ಮೊತ್ತದ ಹಣಕ್ಕಾಗಿ ಅಥವಾ ರಾಜಕೀಯ ಲಾಭಕ್ಕಾಗಿ ಈ ರೀತಿಯ ಬಲೆ ಹೆಣೆಯುತ್ತವೆ. ಉತ್ತರ ಭಾರತದ ಏಜೆನ್ಸಿಯ ಹೆಸರು ಕೇಳಿಬಂದಿರುವುದು ಈ ಪ್ರಕರಣಕ್ಕೆ ರಾಷ್ಟ್ರೀಯ ಆಯಾಮ ನೀಡಿದೆ. ಇದು ಕೇವಲ ರಾಜ್ಯದ ಆಂತರಿಕ ವಿಚಾರವಾಗಿ ಉಳಿಯದೆ, ಕೇಂದ್ರ ಮತ್ತು ರಾಜ್ಯದ ರಾಜಕೀಯ ಸಂಘರ್ಷದ ಪ್ರತಿಬಿಂಬವಾಗಿಯೂ ಕಾಣುತ್ತಿದೆ.

ಆದರೆ ಕೇವಲ ಎಚ್ಚರಿಕೆಯಿಂದ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಗುಪ್ತಚರ ಇಲಾಖೆ ಹೆಚ್ಚು ಸಕ್ರಿಯವಾಗಬೇಕು. ಇಂತಹ ಏಜೆನ್ಸಿಗಳ ಮೂಲವನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿ ಸಚಿವರು ಅನುಮಾನದ ನೆರಳಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನಡೆಯುವ ಬ್ಲಾಕ್ ಮೇಲ್ ದಂಧೆಗೆ ಕಡಿವಾಣ ಹಾಕಬೇಕಿದೆ.