☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

SIR : ಬೆಂಗಳೂರು ಪ್ರತಿಭಟನೆಯಲ್ಲಿ ಯೂಟ್ಯೂಬರ್ ಧ್ರುವ್ ರಾಠಿ, ಪೌರತ್ವ ಪ್ರಶ್ನಿಸಿದ ಭಾಸ್ಕರ್ ರಾವ್

Image of SIR protest in Bengaluru

ಬೆಂಗಳೂರು : ಫ್ರೀಡಂ ಪಾರ್ಕ್ ನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 3.6 ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿರುವ ಧ್ರುವ್ ರಾಠಿ ಅವರು ಪ್ರಚಲಿತ ರಾಜಕೀಯ ಮತ್ತು ಸರ್ಕಾರದ ನೀತಿಗಳ ಕುರಿತು ವಿಮರ್ಶಾತ್ಮಕ ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದಾರೆ. ನಗರದಲ್ಲಿ ನಡೆದ ಎಸ್ಐಆರ್ ವಿರೋಧಿ ಹೋರಾಟದಲ್ಲಿ ಅವರ ಹಾಜರಾತಿ ಗಮನ ಸೆಳೆದಿತ್ತು.

ಇದನ್ನೂ ಓದಿ : ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು – ಇಂದು ರಾಷ್ಟ್ರಪತಿ ಭವನಕ್ಕೆ ಇಂಡಿಯಾ ಬ್ಲಾಕ್ ಮೆರವಣಿಗೆ

ಈ ಬೆಳವಣಿಗೆಯ ಬೆನ್ನಲ್ಲೇ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಧ್ರುವ್ ರಾಠಿ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಧ್ರುವ್ ರಾಠಿ ಜರ್ಮನ್ ಪೌರತ್ವ ಹೊಂದಿದ್ದಾರೆ ಎಂಬ ವರದಿಗಳಿವೆ, ಅವರು ಭಾರತಕ್ಕೆ ಯಾವ ವೀಸಾ ಅಥವಾ ಯಾವ ವಿಶೇಷ ಅನುಮತಿಯ ಮೇಲೆ ಆಗಮಿಸಿದ್ದಾರೆ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ. ವಿದೇಶಿ ಪ್ರಜೆ ಭಾರತದಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ವಿದೇಶಿಗರ ಕಾಯ್ದೆ, ವೀಸಾ ನಿಯಮ ಮತ್ತು ವಲಸೆ ಕಾನೂನಿನ ಉಲ್ಲಂಘನೆಯಾಗುತ್ತದೆ ಆದ್ದರಿಂದ ಸಮಗ್ರ ತನಿಖೆ ಅಗತ್ಯ ಎಂದು ಅವರು ಒತ್ತಾಯಿಸಿದ್ದಾರೆ. ಇದೀಗ ದೂರು ಕೇಂದ್ರದ ಮಟ್ಟಕ್ಕೆ ಹೋಗಿರುವುದರಿಂದ ಧ್ರುವ್ ರಾಠಿ ಅವರ ಪೌರತ್ವ ಸ್ಥಿತಿ ಮತ್ತು ವೀಸಾ ಮಾನ್ಯತೆ ಕುರಿತು ತನಿಖೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ವಿದೇಶಿ ಪೌರತ್ವದ ಸುತ್ತ ವಿವಾದ !

ವಿದೇಶಿ ಪೌರತ್ವ ಹೊಂದಿರುವ ವ್ಯಕ್ತಿ ಭಾರತದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದೇ ಎಂಬುದು ವೀಸಾ ಷರತ್ತುಗಳ ಅಡಿಯಲ್ಲಿ ಸ್ಪಷ್ಟವಾಗಿ ನಿರ್ಬಂಧಿತ ವಿಚಾರ. ಮತ್ತೊಂದೆಡೆ ಧ್ರುವ್ ರಾಠಿ ಅವರು ಭಾರತೀಯ ಮೂಲದವರಾಗಿ ಜರ್ಮನಿಯಲ್ಲಿ ನೆಲೆಸಿದ್ದು, ಅವರ ಪೌರತ್ವದ ಬಗ್ಗೆ ಈ ಹಿಂದೆಯೂ ಹಲವು ಬಾರಿ ಚರ್ಚೆ ನಡೆದಿದೆ. ಒಂದು ವೇಳೆ ಅವರು ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಅಥವಾ ಮಾನ್ಯ ವೀಸಾ ಹೊಂದಿದ್ದರೆ ಅವರ ಹಾಜರಾತಿ ಕಾನೂನಾತ್ಮಕವಾಗಿ ಹೇಗೆ ಪರಿಗಣಿಸಲ್ಪಡುತ್ತದೆ ಎಂಬುದು ಕೇಂದ್ರದ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ರಾಜಕೀಯ ವಿಮರ್ಶಕರಿಗೆ ಈ ರೀತಿಯ ದೂರುಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವೇ ಅಥವಾ ಕಾನೂನು ಪಾಲನೆಯ ಕ್ರಮವೇ ಎಂಬ ಚರ್ಚೆಯೂ ಜೊತೆಗೇ ನಡೆಯುತ್ತಿದೆ.