ನವದೆಹಲಿ: ರಾಹುಲ್ ಗಾಂಧಿ (Rahul Gandhi) ಪ್ರಸ್ತುತ ಎಸ್.ಐ.ಆರ್ ವಿರುದ್ಧದ ಹೋರಾಟವನ್ನು ಶಿವನ ತಾಂಡವಕ್ಕೆ ಹೋಲಿಸಿ, ಇದು ಶಿವನ ತಾಂಡವ ಎಂದಿದ್ದು ವಿವಾದಕ್ಕೆ ಕಾರಣವಾಗಿದೆ.ಇದರಲ್ಲಿ ಯಾರು ಬೇಕಾದರೂ ಸೇರಬಹುದು ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟವು ಹಲವು ದಿನ ಅಥವಾ ವರ್ಷಗಳ ಕಾಲ ನಡೆಯಲಿದೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವ ರಕ್ಷಣೆಗೆ ನಿರಂತರ ಹೋರಾಟ ಅಗತ್ಯ ಎಂದು ಅವರು ಕರೆ ನೀಡಿದ್ದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ..?
ಈ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದೆ. ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಖಂಡನೆ ವ್ಯಕ್ತಪಡಿಸಿ, ರಾಜಕೀಯ ಪ್ರತಿಭಟನೆಯನ್ನು ಶಿವತಾಂಡವಕ್ಕೆ ಹೋಲಿಸುವುದು ಅವಮಾನಕರ ನಡೆ ಎಂದು ಹೇಳಿದ್ದಾರೆ. ತಮ್ಮ ಅರಾಜಕ ರಾಜಕಾರಣಕ್ಕೆ ಶಿವತಾಂಡವವನ್ನು ಬಳಸಬಾರದು, ನಿಜವಾದ ಶಿವತಾಂಡವ ನಡೆದರೆ ರಾಜಕೀಯ ಅಸ್ತಿತ್ವವೇ ಇಲ್ಲವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನ್ಯಾಯಾಲಯದ ಎದುರು ಶಕ್ತಿ ಪ್ರದರ್ಶನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಕ್ಷುಲ್ಲಕ ಲಾಭಕ್ಕಾಗಿ ಧರ್ಮವನ್ನು ಬಳಸುತ್ತಿರುವ ಕಾಂಗ್ರೆಸ್‌ಗೆ ಹಿಂದೂ ಸಮಾಜವೇ ತಕ್ಕ ಪಾಠ ಕಲಿಸಲಿದೆ ಎಂದು ಅವರು ಹೇಳಿದ್ದು, ರಾಹುಲ್ ಗಾಂಧಿ ದೇಶದ ಜನರಲ್ಲಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಜಿರಳೆ ಆಯ್ತು..ಈಗ ನೊಣ – ಸದ್ದು ಮಾಡ್ತಿದೆ ಮಖ್ಖಿ ಜನತಾ ಪಾರ್ಟಿ
ಶಿವತಾಂಡವ ಹಿಂದೂ ನಂಬಿಕೆಯಲ್ಲಿ ಸೃಷ್ಟಿ, ಸ್ಥಿತಿ, ಲಯಗಳ ಸಂಕೇತವಾಗಿದ್ದು, ವಿನಾಶ ಮತ್ತು ನವನಿರ್ಮಾಣದ ಆಳವಾದ ತಾತ್ವಿಕ ಅರ್ಥವನ್ನು ಹೊಂದಿದೆ. ಅದನ್ನು ಬೀದಿ ಹೋರಾಟ ಅಥವಾ ರಾಜಕೀಯ ಮೆರವಣಿಗೆಗೆ ಹೋಲಿಸಿದಾಗ ಭಕ್ತ ಸಮುದಾಯದಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಸಹಜವಾಗಿ ಮೂಡುತ್ತದೆ. ಕಾಂಗ್ರೆಸ್ ಈ ಹಿಂದೆ ಹಿಂದೂ ಧರ್ಮದ ವಿಚಾರದಲ್ಲಿ ನೀಡಿರುವ ಹೇಳಿಕೆಗಳು ಈಗಾಗಲೇ ವಿವಾದಕ್ಕೆ ಕಾರಣವಾಗಿದ್ದು, ವಿಎಚ್‌ಪಿ ಮತ್ತು ಬಿಜೆಪಿ ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿವೆ. ಮತ್ತೊಂದೆಡೆ ಇಂಡಿಯಾ ಮೈತ್ರಿಕೂಟದ ದೃಷ್ಟಿಯಲ್ಲಿ ಇದು ಪ್ರಜಾಪ್ರಭುತ್ವ ಮತ್ತು ಚುನಾವಣಾ ಪಾರದರ್ಶಕತೆಯ ಪ್ರಶ್ನೆಯಾಗಿದ್ದು, ಆಡಳಿತಾರೂಢ ಸರ್ಕಾರದ ವಿರುದ್ಧದ ಸಾಂಕೇತಿಕ ಪ್ರತಿರೋಧಕ್ಕೆ ಪೌರಾಣಿಕ ರೂಪಕ ಬಳಸಲಾಗಿದೆ ಎಂಬ ಸಮರ್ಥನೆ ಇದೆ.
ಹೀಗಾಗಿ ಇಂತಹ ಹೇಳಿಕೆಗಳು ಚುನಾವಣಾ ಕಾಲದಲ್ಲಿ ಧ್ರುವೀಕರಣವನ್ನು ಹೆಚ್ಚಿಸಿ, ಮೂಲ ವಿಷಯವಾದ ಮತದಾರರ ಪಟ್ಟಿ ತಿದ್ದುಪಡಿ ಮತ್ತು ಚುನಾವಣಾ ಅಕ್ರಮದ ಆರೋಪಗಳ ಚರ್ಚೆಯನ್ನು ಮರೆಮಾಚುವ ಅಪಾಯವಿದೆ. ರಾಜಕೀಯ ನಾಯಕರು ಪ್ರತಿಭಟನೆಯ ತೀವ್ರತೆಯನ್ನು ವಿವರಿಸಲು ಧಾರ್ಮಿಕ ಪದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ, ಇಲ್ಲದಿದ್ದರೆ ಅದು ಕಾನೂನು ಹೋರಾಟಕ್ಕಿಂತ ಭಾವನಾತ್ಮಕ ಸಂಘರ್ಷವಾಗಿ ಬದಲಾಗುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ.




