☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

AMIT SHAH : ರಾಹುಲ್ ಎಂಟ್ರಿಯಿಂದಲೇ ಕಾಂಗ್ರೆಸ್ ಅಧಪತನ ಶುರು, ಆರೋಪದಲ್ಲಿ ಹುರುಳಿಲ್ಲ : ಅಮಿತ್ ಶಾ

Image of Amit shah

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀಕ್ಷ್ಣ ಟೀಕೆ ಪ್ರಹಾರ ನಡೆಸಿದರು. ರಾಹುಲ್ ಗಾಂಧಿ ರಾಜಕೀಯ ರಂಗ ಪ್ರವೇಶಿಸಿದ ದಿನದಿಂದಲೇ ಕಾಂಗ್ರೆಸ್ ಪಕ್ಷದ ಅವನತಿ ಆರಂಭವಾಗಿದೆ ಎಂದು ಅವರು ಹೇಳಿದರು. ತಮ್ಮ ಸತತ ಪರಾಜಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿವೆ ಹಾಗೂ ಎಸ್ಐಆರ್ ನಂತಹ ಇತ್ತೀಚಿನ ಬೆಳವಣಿಗೆಗಳನ್ನು ನೆಪ ಮಾಡಿಕೊಳ್ಳುತ್ತಿವೆ ಎಂದು ಶಾ ಆರೋಪಿಸಿದರು.

ರಾಹುಲ್ ರಿಂದಲೇ ಕಾಂಗ್ರೆಸ್ ಗೆ ಹಿನ್ನಡೆ !

ರಾಹುಲ್ ಗಾಂಧಿ ಪ್ರಮುಖ ನಾಯಕರಾಗಿ, ಪಕ್ಷಾಧ್ಯಕ್ಷರಾಗಿ ಮತ್ತು ಈಗ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲೆಲ್ಲಾ ಕಾಂಗ್ರೆಸ್ ಹಿನ್ನಡೆ ಕಂಡಿದೆ ಎಂದು ಅಮಿತ್ ಶಾ ವಿವರಿಸಿದರು. ತ್ರಿಪುರಾದಲ್ಲಿ ಕಳೆದ 33 ವರ್ಷಗಳಿಂದ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ನೀಡಿಲ್ಲ, ಪಶ್ಚಿಮ ಬಂಗಾಳದಲ್ಲಿ 54 ವರ್ಷಗಳಿಂದ ಅಧಿಕಾರದಿಂದ ಹೊರಗಿದೆ, ಗುಜರಾತ್ ನಲ್ಲಿ ಕೂಡ ನಾಲ್ಕು ದಶಕಗಳಿಂದ ಅಧಿಕಾರ ಹಿಡಿದಿಲ್ಲ ಎಂದು ಅವರು ಅಂಕಿ ಅಂಶ ನೀಡಿದರು. ಬ್ಯಾಲೆಟ್ ಪೇಪರ್ ನಲ್ಲಿ ನಡೆದ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋತಿರುವುದೇ ಇವಿಎಂ ದೂರುಗಳಿಗೆ ಆಧಾರವಿಲ್ಲ ಎಂಬುದಕ್ಕೆ ಪುರಾವೆ ಎಂದರು. ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಶೇ 90 ಮಹಾನಗರ ಪಾಲಿಕೆ, ಶೇ 66 ನಗರಸಭೆ, ಶೇ 65 ಪುರಸಭೆಗಳಲ್ಲಿ ಗೆಲುವು ಸಾಧಿಸಿದ್ದು, ಆಮ್ ಆದ್ಮಿ ಪಕ್ಷ ಶೇ 85 ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಠೇವಣಿ ಕಳೆದುಕೊಂಡಿದೆ ಎಂದು ಹೇಳಿದರು. ತ್ರಿಪುರಾ ಗ್ರಾಮ ಸಮಿತಿ ಕೌನ್ಸಿಲ್ ನ 4600 ಸ್ಥಾನಗಳಲ್ಲಿ ಎನ್ ಡಿಎ 77.5 ಶೇ ಮತಗಳೊಂದಿಗೆ 4000 ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಕಾಂಗ್ರೆಸ್ ಗೆ ಕೇವಲ 14 ಸ್ಥಾನ ಸಿಕ್ಕಿದೆ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿದೆ, ಬಂಗಾಳದ ರೇಜಿನಗರ ಮತ್ತು ನೋವ್ ಗಾಂವ್ ನಲ್ಲಿ ಬಿಜೆಪಿ ದೊಡ್ಡ ಅಂತರದಿಂದ ಗೆದ್ದಿದೆ, ಗಾಂಧಿನಗರ ಮಹಾನಗರ ಪಾಲಿಕೆ ಸೇರಿ ನಗರಸಭೆಗಳ 104 ಸ್ಥಾನಗಳಲ್ಲಿ 90 ಸ್ಥಾನ ಬಿಜೆಪಿ ಪಾಲಾಗಿದ್ದು ಮತಪ್ರಮಾಣ ಶೇ 10 ರಷ್ಟು ಏರಿಕೆಯಾಗಿದೆ ಎಂದು ಅವರು ವಿವರಿಸಿದರು. 1985 ರ ಬಳಿಕ ಅಂದರೆ 41 ವರ್ಷಗಳಿಂದ ಗುಜರಾತ್ ನಲ್ಲಿ ಕಾಂಗ್ರೆಸ್ ಗೆದ್ದಿಲ್ಲ ಎಂಬುದನ್ನು ನೆನಪಿಸಿ, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಬದಲು ರಾಹುಲ್ ಗಾಂಧಿ ಸ್ವ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಾ ಸಲಹೆ ನೀಡಿದರು.

ಇದನ್ನೂ ಓದಿ : ಜಿರಳೆ ಆಯ್ತು..ಈಗ ನೊಣ – ಸದ್ದು ಮಾಡ್ತಿದೆ ಮಖ್ಖಿ ಜನತಾ ಪಾರ್ಟಿ

ಇತ್ತೀಚೆಗೆ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಎಸ್ಐಆರ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ಕೇಂದ್ರದ ವಿರುದ್ಧ ಅಭಿಯಾನ ನಡೆಸುತ್ತಿರುವಾಗಲೇ ಅಮಿತ್ ಶಾ ಅವರು ರಾಹುಲ್ ಗಾಂಧಿ ವೈಯಕ್ತಿಕ ನಾಯಕತ್ವದ ವೈಫಲ್ಯದತ್ತ ಚರ್ಚೆಯನ್ನು ತಿರುಗಿಸುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ ಎಂಬ ವಾದವನ್ನು ಬ್ಯಾಲೆಟ್ ಪೇಪರ್ ಚುನಾವಣೆಗಳ ದತ್ತಾಂಶದ ಮೂಲಕ ಅಲ್ಲಗಳೆಯುವ ಮೂಲಕ ಬಿಜೆಪಿ ತನ್ನ ಆಡಳಿತದ ನೈತಿಕ ಬಲವನ್ನು ಎತ್ತಿ ಹಿಡಿಯಲು ನೋಡುತ್ತಿದೆ. ಆದರೆ ಕಾಂಗ್ರೆಸ್ ನ ದೀರ್ಘಕಾಲದ ಅಧಿಕಾರ ವಂಚಿತ ಸ್ಥಿತಿಗೆ ಕೇವಲ ಒಬ್ಬ ನಾಯಕನೇ ಕಾರಣವೇ ಎಂಬ ಪ್ರಶ್ನೆ ಉಳಿಯುತ್ತದೆ. ಪಕ್ಷದ ಸಂಘಟನಾತ್ಮಕ ದೌರ್ಬಲ್ಯ, ಸ್ಥಳೀಯ ನಾಯಕತ್ವದ ಕೊರತೆ, ಬೂತ್ ಮಟ್ಟದ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಸ್ಪಷ್ಟ ಸೈದ್ಧಾಂತಿಕ ನಿಲುವಿನ ಅಭಾವವೂ ಪ್ರಮುಖ ಕಾರಣಗಳಾಗಿವೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಂತಹ ಪ್ರಯತ್ನಗಳ ಮೂಲಕ ಜನಸಂಪರ್ಕ ಹೆಚ್ಚಿಸಿದರೂ ಅದು ಮತಗಳಾಗಿ ಪರಿವರ್ತನೆಯಾಗದಿರುವುದು ಪಕ್ಷದ ಕಾರ್ಯತಂತ್ರದ ವೈಫಲ್ಯವನ್ನು ತೋರಿಸುತ್ತದೆ. ಅಮಿತ್ ಶಾ ಅವರು ಪ್ರಸ್ತಾಪಿಸಿದ ರಾಜಸ್ಥಾನ, ತ್ರಿಪುರಾ, ಗುಜರಾತ್ ಫಲಿತಾಂಶಗಳು ಬಿಜೆಪಿಯ ಸಂಘಟನಾ ಶಕ್ತಿ ಮತ್ತು ಮೋದಿ ಜನಪ್ರಿಯತೆ ಸೂಚಿಸಿದರೂ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಸ್ವತಃ ತೃಣಮೂಲದ ಎದುರು ಪರ್ಯಾಯವಾಗಲು ಹೆಣಗಾಡುತ್ತಿರುವುದನ್ನು ಮರೆಯುವಂತಿಲ್ಲ.