ಪ್ರದೀಪ್ ಈಶ್ವರ್ (Pradeep Eshwar), ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸುಧಾಕರ್ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದಾಗ ಅವರನ್ನು ‘ದೈತ್ಯ ಸಂಹಾರಿ’ ಎಂದಿದ್ದರು ಜನ. ಅವರ ಚತುರ ಮಾತುಗಾರಿಕೆ, ಮಾಧ್ಯಮಗಳನ್ನು ಬಳಸುಕೊಳ್ಳುವ ರೀತಿ, ಕುಮಾರಸ್ವಾಮಿ ಅಂಥಹ ರಾಜ್ಯ ರಾಜಕಾರಣ ಧುರಿಣರನ್ನೇ ಭೀತಿಯಿಲ್ಲದೆ ಟೀಕಿಸುವ ರೀತಿ ಕಂಡು ಈತ ಕಾಂಗ್ರೆಸ್ ನ ‘ಆಸ್ತಿ’ ಆಗಬಲ್ಲ ಎಂದೇ ರಾಜಕೀಯ ವಿಶ್ಲೇಷಕರು ಲೆಕ್ಕ ಹಾಕಿದ್ದರು. ಆದರೆ ಪ್ರದೀಪ್ ಈಶ್ವರ್ ಈಗ ಆಗಿರುವುದು ಕಾಂಗ್ರೆಸ್ ನ ‘ರೆಬೆಲ್ ಕಿಡ್’.
ವಿಪಕ್ಷದವರ ವಿರುದ್ಧ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದ, ಪ್ರತಾಪ್ ಸಿಂಹ, ಕುಮಾರಸ್ವಾಮಿ, ವಿಜಯೇಂದ್ರ, ಯತ್ನಾಳ್ ಅವರುಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಪ್ರದೀಪ್ ಈಶ್ವರ್ ಈಗ ತನ್ನ ಗುರಿ ಬದಲಾಯಿಸಿ ಸ್ವ ಪಕ್ಷೀಯರ ಮೇಲೆ ದಾಳಿ ಪ್ರಾರಂಭಿಸಿದ್ದಾರೆ. ಗುಟ್ಟಾಗಿ ನಡೆಯಬೇಕಿದ್ದ ಒಳರಾಜಕೀಯವನ್ನು ಬೀದಿಗೆ ತಂದಿದ್ದಾರೆ. ಆ ಮೂಲಕ ಕಾಂಗ್ರೆಸ್ಗೆ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪವಾಗಿಬಿಟ್ಟಿದ್ದಾರೆ ಪ್ರದೀಪ್ ಈಶ್ವರ್.
ಎಂಸಿ ಸುಧಾಕರ್ ಜೊತೆ ಕಿರಿಕ್
ಪ್ರದೀಪ್ ಈಶ್ವರ್ ಇಂದು ಶಾಸಕನಾಗಿರುವುದಕ್ಕೆ ಮೂಲ ಕಾರಣ ಎಂಸಿ ಸುಧಾಕರ್ ಎಂಬುದು ಚಿಕ್ಕಬಳ್ಳಾಪುರದ ರಾಜಕೀಯ ಅನಕ್ಷರಸ್ಥನಿಗೂ ಗೊತ್ತಿರುವ ಸತ್ಯ. ಆದರೆ ಈಗ ಅವರ ವಿರುದ್ಧವೇ ಪ್ರದೀಪ್ ಈಶ್ವರ್ ತೊಡೆ ತಟ್ಟಿದ್ದಾರೆ. ಗೆದ್ದ ಆರಂಭದಲ್ಲಿ ಗುರು, ಗಾಡ್ ಫಾದರ್ ಎಂದೆಲ್ಲ ಕೊಂಡಾಡಿದ್ದ ಸುಧಾಕರ್ ಅವರನ್ನು ಇಂದು ಏಕವಚನದಲ್ಲಿ ತೆಗಳಿದ್ದಾರೆ. “ಎಲ್ಕೆಜಿಯಲ್ಲಿ ಎಬಿಸಿಡಿ ಹೇಳಿಕೊಟ್ಟ ಮಾತ್ರಕ್ಕೆ ಉದ್ಯೋಗ ಗಿಟ್ಟಿಸಿಕೊಂಡ ಮೇಲೆ ಬಂದ ಸಂಬಳದಲ್ಲಿ ಪಾಲು ಕೊಡಲಾಗದು” ಎಂದು ಮಾರ್ಮಿಕವಾಗಿ ಟಾಂಗ್ ಕೊಟ್ಟಿದ್ದಾರೆ ಸುಧಾಕರ್ಗೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಬಣ ಬಡಿದಾಟ; ರಕ್ಷಾ ರಾಮಯ್ಯ ವಿರುದ್ಧ ಪ್ರದೀಪ್ ಈಶ್ವರ್ ಕಿಡಿ
ರಕ್ಷಾ ರಮಯ್ಯಗೆ ಟಾಂಗ್
ಇನ್ನು ರಾಜ್ಯ ಕಾಂಗ್ರೆಸ್ನ ಯುವ ನಾಯಕ, ಯುವ ಕಾಂಗ್ರೆಸ್ನ ಅಧ್ಯಕ್ಷರೂ ಆಗಿದ್ದ ರಕ್ಷಾ ರಾಮಯ್ಯಗೂ ನೇರವಾಗಿ ಎಚ್ಚರಿಕೆಯನ್ನೇ ನೀಡಿದ್ದಾರೆ ಪ್ರದೀಪ್ ಈಶ್ವರ್. ರಕ್ಷಾ ರಾಮಯ್ಯ, ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೂ ತಯಾರಿ ನಡೆಸುತ್ತಿದ್ದು, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದು, ಈ ಬಾರಿ ಕ್ಷೇತ್ರದಲ್ಲಿ ಮತಗಳನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಆದರೆ ಇದಕ್ಕೆ ಪ್ರದೀಪ್ ಈಶ್ವರ್ ಉರಿದು ಬಿದ್ದಿದ್ದು, “ನನ್ನ ಕ್ಷೇತ್ರಕ್ಕೆ ಕಾಲಿಡುವಂತಿಲ್ಲ” ಎಂದು ಅಬ್ಬರಿಸಿದ್ದಾರೆ.
ಇತ್ತೀಚೆಗಿನ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿರುವ ಪ್ರದೀಪ್ ಈಶ್ವರ್, “ರಕ್ಷಾ ರಾಮಯ್ಯಗೆ ನೇರ ಎಚ್ಚರಿಕೆ ಕೊಟ್ಟಿದ್ದು, ನನ್ನ ಕ್ಷೇತ್ರಕ್ಕೆ (ಚಿಕ್ಕಬಳ್ಳಾಪುರ) ಸುಖಾ ಸುಮ್ಮನೆ ಬಂದು ಕಡ್ಡಿ ಅಲ್ಲಾಡಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ನಾನು ಏನೆಂದು ತೋರಿಸುತ್ತೇನೆ. ಒಂದೊಮ್ಮೆ ನೀನು ಇದನ್ನೇ ಮುಂದುವರೆಸಿದರೆ ನನ್ನ ಸಹೋದರನನ್ನೇ ನಾನು ಚಿಕ್ಕಬಳ್ಳಾಪುರ ಸಂಸದ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತೇನೆ” ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಪ್ರದೀಪ್.
ಪ್ರದೀಪ್ ಎದುರು ಹಾಕಿಕೊಂಡಿರುವ ರಕ್ಷಾ ರಾಮಯ್ಯ ಮತ್ತು ಎಂಸಿ ಸುಧಾಕರ್ ಇಬ್ಬರೂ ಸಹ ಸಾಮಾನ್ಯ ದರ್ಜೆ ನಾಯಕರಲ್ಲ. ರಾಜ್ಯ ಕಾಂಗ್ರೆಸ್ನಲ್ಲಿ ಅತ್ಯಂತ ಪ್ರಭಾವ ಹೊಂದಿರುವ ನಾಯಕರುಗಳು. ಪ್ರದೀಪ್ ಈಶ್ವರ್ ಅವರು ಈಗ ತಮ್ಮದೇ ಪಕ್ಷದವರನ್ನು ಎದುರು ಹಾಕಿಕೊಂಡಿರುವುದು ಅವರ ಎಳಸುತನವನ್ನು ತೋರಿಸುತ್ತದೆ. ತಾಳ್ಮೆಯ ರಾಜಕೀಯದ ಬದಲಿಗೆ ರೆಬೆಲ್ ರಾಜಕಾರಣದಲ್ಲಿ ಪ್ರದೀಪ್ ಈಶ್ವರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಅವರಿಗೆ ಮುಳುವಾಗಲಿದೆಯೋ ಅಥವಾ ವರವಾಗಲಿದೆಯೋ ಕಾದು ನೋಡಬೇಕಿದೆ.




