☔ Weather
Bengaluru: 🌤️ 26°C | AQI 58
Mysore: ☁️ 28°C | AQI 70
Mangalore: 🌤️ 29°C | AQI 97
Bengaluru: 🌤️ 26°C | AQI 58

Jio IPO: ದೇಶದ ಅತಿ ದೊಡ್ಡ ಐಪಿಓ: ಜಿಯೋ ಫ್ಲ್ಯಾಟ್​​ಫಾರ್ಮ್​​ ಖರೀದಿಗೆ ಅರ್ಜಿ ಸಲ್ಲಿಸುವುದು ಹೇಗೆ?

Jio IPO

ದೇಶದ ಅತಿದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್‌ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಷೇರು (Jio IPO) ಬಿಡುಗಡೆ ಮಾಡುತ್ತಿದೆ. ನಾಳೆ ಅಂದರೆ ಅಕ್ಟೋಬರ್ 21 ರಿಂದ ಐಪಿಓ ಸಾರ್ವಜನಿಕರಿಗೆ ಮುಕ್ತವಾಗಲಿದ್ದು . ಅಕ್ಟೋಬರ್ 21ರಿಂದ 23ರವರೆಗೆ ಬಿಡ್ ಮಾಡಲು ಅವಕಾಶ ಇರಲಿದೆ.

ಪ್ರತಿ ಷೇರಿಗೆ ₹1,065ರಿಂದ ₹1,119ರ ಬೆಲೆ ನಿಗದಿಪಡಿಸಿದ್ದು, 27 ಕೋಟಿ ಹೊಸ ಷೇರುಗಳ ಮೂಲಕ ಗರಿಷ್ಠ 30,213 ಕೋಟಿ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಈ ಹಿಂದೆ 2024ರಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಓ ಮೂಲಕ 27,870 ಕೋಟಿ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿತ್ತು. ಆದರೆ ಇದು ಅದನ್ನೂ ಮೀರಿಸಿದ್ದು, ಇದು ಭಾರತದ ಅತಿದೊಡ್ಡ ಷೇರು ಸಂಗ್ರಹ ಅಥವಾ ಐಪಿಓ ಎನಿಸಿಕೊಳ್ಳಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಶೇ 66.43ರಷ್ಟು ಪಾಲು ಹೊಂದಿದ್ದು, ಮೆಟಾ (ಫೇಸ್​​ಬುಲ್) ಶೇ 9.98 ಮತ್ತು ಗೂಗಲ್ ಶೇ 7.73ರಷ್ಟು ಪಾಲು ಹೊಂದಿವೆ. ಈಗ ಬಿಡುಗಡೆ ಆಗುತ್ತಿರುವುದು ಹೊಸ ಷೇರುಗಳಾಗಿವೆ. ಹಳೆಯ ಷೇರುದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ.

ಐಪಿಒ ಪ್ರಮುಖ ವಿವರಗಳು

ಪ್ರತಿ ಷೇರಿತ ಬೆಲೆ: ₹1,065 ರಿಂದ ₹1,119
ಲಾಟ್ ಗಾತ್ರ: 12 ಷೇರುಗಳು, ಕನಿಷ್ಠ ಹೂಡಿಕೆ ₹13,428
ಗರಿಷ್ಠ ಮಿತಿ: 14 ಲಾಟ್ (168 ಷೇರು), ಅಂದರೆ ₹1,87,992
ಐಪಿಓ ಆರಂಭ : ಅಕ್ಟೋಬರ್ 21 (ಬುಧವಾರ) ರಿಂದ 23 (ಶುಕ್ರವಾರ)
ಷೇರು ಹಂಚಿಕೆ: ಅಕ್ಟೋಬರ್ 26
ಮಾರುಕಟ್ಟೆಗೆ ಲಿಸ್ಟಿಂಗ್: ಅಕ್ಟೋಬರ್ 28

ವಿಶೇಷ ಮೀಸಲು: ಅರ್ಹ ಉದ್ಯೋಗಿಗಳಿಗೆ ₹500 ಕೋಟಿವರೆಗೆ ಹಾಗೂ ಅಕ್ಟೋಬರ್ 14ರ ವೇಳೆಗೆ ರಿಲಯನ್ಸ್ ಷೇರು ಹೊಂದಿದ್ದ ವೈಯಕ್ತಿಕ ಮತ್ತು ಹಿಂದೂ ಅವಿಭಕ್ತ ಕುಟುಂಬ ಷೇರುದಾರರಿಗೆ ₹2,500 ಕೋಟಿವರೆಗೆ ಮೀಸಲಿಡಲಾಗಿದೆ; ಉದ್ಯೋಗಿಗಳಿಗೆ ಪ್ರತಿ ಷೇರಿಗೆ ₹54 ರಿಯಾಯಿತಿ ಇದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಪ್ಯಾನ್ ಕಾರ್ಡ್, ಸಕ್ರಿಯ ಡಿಮ್ಯಾಟ್ ಖಾತೆ, ಬ್ಯಾಂಕ್ ಖಾತೆ ಮತ್ತು ಆ ಖಾತೆಗೆ ಜೋಡಣೆಯಾದ ಯುಪಿಐ ಐಡಿ ಬೇಕು. ಆಂಕರ್ ಹೂಡಿಕೆದಾರರನ್ನು ಹೊರತುಪಡಿಸಿ ಎಲ್ಲರೂ ಎಎಸ್‌ಬಿಎ ಮೂಲಕ ಅರ್ಜಿ ಸಲ್ಲಿಸಬೇಕು. ಯುಪಿಐ ಬಳಸುವವರು ಯುಪಿಐ ವ್ಯವಸ್ಥೆ ಬಳಸಬೇಕು.

ಬ್ರೋಕರ್ ಆ್ಯಪ್ ಮೂಲಕ (ಜೆರೋಧಾ, ಗ್ರೋ, ಅಪ್‌ಸ್ಟಾಕ್ಸ್, ಏಂಜೆಲ್ ಒನ್ ಇತ್ಯಾದಿ)

  1. ನಿಮ್ಮ ಬ್ರೋಕರ್ ಆ್ಯಪ್ ಅಥವಾ ವೆಬ್‌ಸೈಟ್‌ಗೆ ಲಾಗಿನ್ ಆಗಿ, ಐಪಿಒ ವಿಭಾಗಕ್ಕೆ ಹೋಗಿ.
  2. ತೆರೆದಿರುವ ಐಪಿಒಗಳ ಪಟ್ಟಿಯಲ್ಲಿ “Jio Platforms” ಆಯ್ಕೆ ಮಾಡಿ ಮತ್ತು “Bid/Apply” ಒತ್ತಿ.
  3. ಲಾಟ್ ಸಂಖ್ಯೆ ನಮೂದಿಸಿ. ಚಿಲ್ಲರೆ ಹೂಡಿಕೆದಾರರು ಗರಿಷ್ಠ ₹2 ಲಕ್ಷದವರೆಗೆ ಬಿಡ್ ಮಾಡಬಹುದು, ಮತ್ತು “ಕಟ್-ಆಫ್ ಬೆಲೆ” (ಮೇಲಿನ ಬೆಲೆ ₹1,119) ಆಯ್ಕೆ ಮಾಡಬಹುದು.
  4. ನಿಮ್ಮ ಯುಪಿಐ ಐಡಿ ನಮೂದಿಸಿ, ತಪ್ಪಿಲ್ಲವೆಂದು ಪರಿಶೀಲಿಸಿ ಸಲ್ಲಿಸಿ.
  5. ನಿಮ್ಮ ಯುಪಿಐ ಆ್ಯಪ್‌ನಲ್ಲಿ ಬರುವ ಮ್ಯಾಂಡೇಟ್ (ಹಣ ತಡೆಹಿಡಿಯುವ) ವಿನಂತಿಯನ್ನು ಒಪ್ಪಿಕೊಳ್ಳಿ. ಒಪ್ಪದಿದ್ದರೆ ಅರ್ಜಿ ತಿರಸ್ಕೃತವಾಗುತ್ತದೆ. ಯುಪಿಐ ಮ್ಯಾಂಡೇಟ್ ಅನ್ನು ಐಪಿಒ ಮುಕ್ತಾಯದ ದಿನ ಸಂಜೆ 5 ಗಂಟೆಯವರೆಗೆ ಒಪ್ಪಬಹುದು.

ನೆಟ್ ಬ್ಯಾಂಕಿಂಗ್ ಎಎಸ್‌ಬಿಎ

ನಿಮ್ಮ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ, “IPO/ASBA/Investments” ವಿಭಾಗದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಆಯ್ಕೆ ಮಾಡಿ, ಡಿಮ್ಯಾಟ್ ವಿವರ ಮತ್ತು ಲಾಟ್ ಸಂಖ್ಯೆ ನೀಡಿ ಅರ್ಜಿ ಸಲ್ಲಿಸಿ. ಬ್ಯಾಂಕ್ ಶಾಖೆಯಲ್ಲಿ ಕಾಗದದ ಅರ್ಜಿ ನೀಡುವ ಆಯ್ಕೆಯೂ ಇದೆ. ₹2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ (ಎಚ್‌ಎನ್‌ಐ) ಅರ್ಜಿಗಳಿಗೆ ಯುಪಿಐ ಬಳಸಲಾಗದು; ಅಂಥವರು ಎಎಸ್‌ಬಿಎ ಮೂಲಕ ಅರ್ಜಿ ಸಲ್ಲಿಸಬೇಕು.

ಮುಖ್ಯ ಸೂಚನೆಗಳು

  • ಅರ್ಜಿ ಸಲ್ಲಿಸಿದಾಗ ಹಣ ಖಾತೆಯಿಂದ ಕಡಿತವಾಗುವುದಿಲ್ಲ, ಹಿಡಿದಿಡಲಾಗುತ್ತದೆ. ಷೇರು ಹಂಚಿಕೆಯಾದ ನಂತರ ಮಾತ್ರ ಹಣ ಕಡಿತವಾಗುತ್ತದೆ; ಹಂಚಿಕೆಯಾಗದಿದ್ದರೆ ಹಣ ಬಿಡುಗಡೆಯಾಗುತ್ತದೆ.
  • ಒಬ್ಬ ವ್ಯಕ್ತಿ ಒಂದೇ ಪ್ಯಾನ್‌ನಿಂದ ಒಂದೇ ಅರ್ಜಿ ಸಲ್ಲಿಸಬೇಕು. ಬೇರೆ ಬೇರೆ ವಿಧಾನಗಳಲ್ಲಿ ಎರಡು ಬಾರಿ ಅರ್ಜಿ ಸಲ್ಲಿಸಿದರೆ ಒಂದು ಅಥವಾ ಎರಡೂ ತಿರಸ್ಕೃತವಾಗಬಹುದು.
  • ಕೊನೆಯ ದಿನದವರೆಗೆ ಕಾಯಬೇಡಿ. ಯುಪಿಐ ಐಡಿ ತಪ್ಪಾಗದಂತೆ ಮತ್ತು ಮ್ಯಾಂಡೇಟ್ ಒಪ್ಪುವುದನ್ನು ಮರೆಯದಂತೆ ನೋಡಿಕೊಳ್ಳಿ.
  • ಷೇರು ಹಂಚಿಕೆಯ ಸ್ಥಿತಿಯನ್ನು ರಿಜಿಸ್ಟ್ರಾರ್ ಕೆಫಿನ್ ಟೆಕ್ನಾಲಜೀಸ್ ವೆಬ್‌ಸೈಟ್ ಅಥವಾ ಬಿಎಸ್‌ಇ/ಎನ್‌ಎಸ್‌ಇ ತಾಣಗಳಲ್ಲಿ ಪ್ಯಾನ್ ಅಥವಾ ಅರ್ಜಿ ಸಂಖ್ಯೆಯ ಮೂಲಕ ಪರಿಶೀಲಿಸಬಹುದು.

ಹೂಡಿಕೆ ಮುನ್ನ ಗಮನಿಸಿ

ಐಪಿಒದ ಗಾತ್ರ ದೊಡ್ಡದಾಗಿದೆ ಎಂದ ಮಾತ್ರಕ್ಕೆ ಅದು ಲಾಭದಾಯಕ ಎಂದು ಅರ್ಥವಲ್ಲ. ಕಂಪನಿಯ ಹಣಕಾಸು ಮಾಹಿತಿ, ಮೌಲ್ಯಮಾಪನ ಮತ್ತು ರಿಸ್ಕುಗಳನ್ನು ಓದಿ, ನಿಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.