ಹುಲಿಕಲ್ ನಟರಾಜ್ (Hulikal Nataraj), ದಶಕಗಳಿಂದಲೂ ನಕಲಿ ಪವಾಡಗಳು, ಕಣ್ ಕಟ್ಟು, ದೇವರ ಹೆಸರಿನಲ್ಲಿ ವಂಚನೆ ಮಾಡುವವರ ನಿಜ ಬಣ್ಣ ಬಯಲು ಮಾಡುತ್ತಾ ಪವಾಡ ಭಂಜಕ ಎಂದೇ ಖ್ಯಾತರಾಗಿದ್ದಾರೆ. ತಮ್ಮ ಈ ಜನಪರ ಕಾರ್ಯದಿಂದ ರಾಷ್ಟ್ರಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹುಲಿಕಲ್ ನಟರಾಜ್ ಅವರಿಗೆ ಸವಾಲುಗಳನ್ನು ಎಸೆದಿದ್ದರು. ನಕಲಿ ದೇವಮಾನವ ರಾಜಾ ಶ್ರೀನಿವಾಸ ತನ್ನ ಮೇಲೆ ಮಹಾಕಾಳಿ ಬರುತ್ತದೆಯೆಂದು, ತಾನು ಹುಲಿಕಲ್ಗೆ ಈ ವಿಷಯವಾಗಿ ಸವಾಲು ಹಾಕುತ್ತೇನೆ ಎಂದಿದ್ದ. ತೀರ ವೈಯಕ್ತಿಕ ಮಟ್ಟಕ್ಕೆ ಹೋಗಿ, ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಹುಲಿಕಲ್ ನಟರಾಜ್ ಅವರ ಪುತ್ರ ಶರತ್ ಹುಲಿಕಲ್ಗೆ ಕಣ್ಣು ಕೊಡಿಸುವುದಾಗಿ ಸವಾಲು ಹಾಕಿದ್ದ.
ಹುಟ್ಟಿನಿಂದಲೂ ಮಂದ ದೃಷ್ಟಿ ಹೊಂದಿದ್ದ ಹಾಗೂ ನರಗಳ ದೌರ್ಬಲ್ಯದಿಂದ ಈಗ ಸಂಪೂರ್ಣ ದೃಷ್ಟಿಹೀನರಾಗಿರುವ ಶರತ್ ನಟರಾಜ್ ಅವರಿಗೆ 40 ದಿನಗಳಲ್ಲಿ ದೃಷ್ಟಿ ಬರಿಸುವುದಾಗಿ ಸವಾಲು ಹಾಕಿದ್ದ. ಈ ಸವಾಲು ತೀರ ವೈಯಕ್ತಿಕ ಆದರೂ ಸಹ ಹುಲಿಕಲ್ ಅವರು ಸವಾಲನ್ನು ಒಪ್ಪಿಕೊಂಡರು. ಜುಲೈ 22 ರಿಂದ ಸೆಪ್ಟೆಂಬರ್ 12 ರ ವರೆಗೆ ರಾಜಾ ಶ್ರೀನಿವಾಸ ವಿಧ-ವಿಧವಾದ ಪೂಜೆಗಳನ್ನು ಮಾಡಿದರು. ಏನೇನೋ ಪ್ರಯೋಗಗಳನ್ನು ಮಾಡಿದರು. ಆದರೆ ಶರತ್ ನಟರಾಜ್ ಅವರಿಗೆ ದೃಷ್ಟಿ ಬರಲಿಲ್ಲ. ಇದನ್ನು ವೈದ್ಯರು ಸಹ ದೃಢಪಡಿಸಿದ್ದು, “ನಲ್ವತ್ತು ದಿನಗಳ ನಂತರ ಶರತ್ ಹುಲಿಕಲ್ಗೆ ದೃಷ್ಟಿ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬರದೆ ಯಥಾಸ್ಥಿತಿ ಮುಂದುವರಿದಿದೆ ಎಂದು ನರರೋಗ ತಜ್ಞ ಡಾ.ಪ್ರಶಾಂತ್ ಹಾಗೂ ನೇತ್ರ ತಜ್ಞ ಡಾ. ಕೆ.ವಿ. ಹರೀಶ್ ಅವರುಗಳು ದೃಢೀಕರಿಸಿದ್ದು ಈ ವ್ಯಕ್ತಿ ಹೇಳಿದ್ದೆಲ್ಲ ಸುಳ್ಳು ಎಂದು ಸಾಬೀತಾಗಿದೆ. ಈ ಪರೀಕ್ಷೆಗಳನ್ನು ಜಿಲ್ಲಾ ವೈದ್ಯರೂ ದೃಢೀಕರಿಸಿದ್ದಾರೆ. ಮತ್ತು ಶರತ್ಗೆ ಯಾವುದೇ ಕಾರಣಕ್ಕೂ ಸದ್ಯಕ್ಕೆ ಲಭ್ಯವಿರುವ ತಂತ್ರಜ್ಞಾನಗಳ ಮೂಲಕ ದೃಷ್ಟಿ ಮರಳಿಸಲು ಸಾಧ್ಯವಿಲ್ಲ ಎಂದು ದೃಢೀಕರಿಸಿದ್ದಾರೆ.
ಸ್ವತಃ ಪರೀಕ್ಷೆಗೆ ಒಡ್ಡಿಕೊಂಡ ಶರತ್ ಹುಲಿಕಲ್, “ಇದು ಕೇವಲ ಪ್ರಯೋಗವಷ್ಟೇ. ನಾನು ಕೂಡಾ ಒಂದು ನಂಬಿಕೆಯಿಂದಲೇ ಈ ಪ್ರಯೋಗಕ್ಕೆ ಒಡ್ಡಿಕೊಂಡೆ. ಇದು ನನ್ನ ತಂದೆಯವರ ವೈಜ್ಞಾನಿಕ ಅನ್ವೇಷಣೆಯಲ್ಲಿ ಇದೂ ಒಂದು ಹೆಜ್ಜೆಯಷ್ಟೇ. ಇದು ವಿಫಲ ಪ್ರಯೋಗ ಎಂದು ನನಗೆ ಅನುಮಾನವಿತ್ತು. ಅದು ಸಾಬೀತಾಗಿದೆ. ವಿಕಲಚೇತನರ ಹಕ್ಕು ಕಾಯ್ದೆ, 2016ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಾಗಿದೆ” ಎಂದಿದ್ದಾರೆ. ವಕೀಲರಾದ ಗೋವರ್ಧನ್ ಸಿ. “ಅಮಾನವೀಯ ದುಷ್ಟಪದ್ಧತಿಗಳು ಮತ್ತು ವಾಮಾಚಾರ ಪ್ರತಿಬಂಧಕ ನಿರ್ಮೂಲನಾ ಕಾಯ್ದೆ, 2017ರ ಅಡಿಯಲ್ಲಿ ದೇವರು ಮೈಮೇಲೆ ಬರುವುದು, ದೆವ್ವ ಮೈಲೇಲೆ ಬರುವುದು, ಪರಿಹಾರ ಮಾಡಿಕೊಡುತ್ತೇವೆ, ಜಾಹೀರಾತು ಅಪರಾಧವಾಗಿರುತ್ತದೆ. ಈ ನಿಟ್ಟಿನಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಲು ಅರ್ಹರು. ಆಶ್ವಾಸನೆ ನೀಡಿ ಕೊನೆಗೆ ಆಗದೇ ಇದ್ದಾಗ ಆಘಾತ ಉಂಟಾಗುತ್ತದೆ. ಭಾರತೀಯ ನ್ಯಾಯಸಂಹಿತೆ 2023ರ ಅಡಿಯಲ್ಲಿ 318ರ ಅಡಿಯಲ್ಲಿ ಮೋಸ, ವಂಚನೆ ಪ್ರಕರಣವಾಗಿರುತ್ತದೆ” ಎನ್ನುತ್ತಾರೆ.
ಹೇಳುತ್ತಾರೆ.
ಪ್ರಕರಣ ಕುರಿತು ಮಾತನಾಡಿರುವ ನೇತ್ರತಜ್ಞ ಡಾ ಕೆವಿ ಹರೀಶ್, “ಶರತ್ ಹುಲಿಕಲ್ ನನಗೆ ಬಾಲ್ಯದಿಂದಲೂ ಗೊತ್ತು. ಅವರ ಎಲ್ಲ ನೇತ್ರ ಚಿಕಿತ್ಸೆಯಲ್ಲೂ ನಾನು ಹಿರಿಯ ತಜ್ಞ ವೈದ್ಯರೊಂದಿಗೆ ಭಾಗವಹಿಸಿದ್ದೇನೆ. ಅವರಿಗೆ ದೃಷ್ಟಿ ಸಂಪೂರ್ಣ ನಷ್ಟವಾಗುವ ಪರಿಸ್ಥಿತಿಯನ್ನು ತಡೆಯಲು ವೈದ್ಯ ವಿಜ್ಞಾನದಲ್ಲಿ ಸಾಧ್ಯವಿಲ್ಲ. ಹಾಗಾಗಿ ದೃಷ್ಟಿ ನಷ್ಟಕ್ಕೆ ಮುನ್ನವೇ ಅವರನ್ನು ನಾವು ಮಾನಸಿಕವಾಗಿ ಸಜ್ಜುಗೊಳಿಸಿ ಮುಂದಿನ ಬದುಕಿಗೆ ಅವರಿಗೆ ಸೂಕ್ತ ತರಬೇತಿ ನೀಡಿದ್ದರಿಂದ ಶರತ್ ಈಗ ಸ್ವಾವಲಂಬಿ ಬದುಕು ಬದುಕಲು ಸಾಧ್ಯವಾಗಿದೆ. ಈಗ ನಡೆಸಿದ ಪ್ರಯೋಗ ವೈದ್ಯಕೀಯ ಚಿಕಿತ್ಸೆಯಲ್ಲದ ಬರೀ ವಿಶ್ವಾಸ ನಂಬಿಕೊAಡ ಕಾರ್ಯವಾಗಿತ್ತು ಎಂದು ನಂತರ ತಿಳಿಯಿತು. ಪ್ರಯೋಗ ವಿಫಲವಾಗಿದ್ದು ನಾವು ಯಾವುದೇ ರೋಗಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ನಂಬಬೇಕೆ ಹೊರತು ಬರೀ ಅಂಧವಿಶ್ವಾಸಗಳನ್ನು ಅಲ್ಲ ಎಂದು ಈ ಪ್ರಕರಣ ತಿಳಿಸಿದೆ” ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ತಮ್ಮ ಪುತ್ರನನ್ನು ಪರೀಕ್ಷೆ ಒಳಪಡಿಸಿದ ಹುಲಿಕಲ್ ನಟರಾಜ್, “ಯಾವುದೇ ವಿಷಯವನ್ನು ಪ್ರಶ್ನಿಸದೆ ನಂಬಬಾರದು ಎಂದು ಈ ಪ್ರಕರಣ ತೋರಿಸಿದೆ. ಆದರೂ ಇಂತಹ ಅಸಂಖ್ಯ ಜನರು ಲಕ್ಷಾಂತರ ಮಂದಿಗೆ ಇನ್ನೂ ಮಂಕುಬೂದಿ ಎರಚುತ್ತಿದ್ದಾರೆ. ಸಾರ್ವಜನಿಕರಲ್ಲಿ ನಾನು ಮನವಿ ಮಾಡಿಕೊಳ್ಳುವುದು ಇಷ್ಟೇ. ಪವಾಡ ಎಂದು ಅನಿಸಿದಾಗ ಅದರ ಹಿಂದಿನ ವೈಜ್ಞಾನಿಕತೆಯನ್ನು ಅರಿಯಲು ಪ್ರಯತ್ನಿಸಿ. ದೇವರು ಮೈಮೇಲೆ ಬರುವುದು ಸಾಧ್ಯವಿಲ್ಲ” ಎಂದಿದ್ದಾರೆ.




