VIRAL POST: ‘ಟಾಕ್ಸಿಕ್’ ಸಿನಿಮಾ ವಾವ್ ಎಂದ ಉಪ್ಪಿ; ನೆಟ್ಟಿಗರ ಅಭಿಪ್ರಾಯವೇ ಬೇರೆ

‘ಟಾಕ್ಸಿಕ್’ ಸಿನಿಮಾ ವಾವ್ ಎಂದ ಉಪ್ಪಿ

Photo Credits: @nimmaupendra (Instagram)

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಂತಹ ಸಂದರ್ಭದಲ್ಲಿ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಸಿನಿಮಾ ನೋಡಿ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಉಪೇಂದ್ರ ಅವರ ಈ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಪರ-ವಿರೋಧದ ತೀವ್ರ ಚರ್ಚೆಗಳು ಆರಂಭವಾಗಿವೆ.

ಸಿನಿಮಾ ಚೆನ್ನಾಗಿಲ್ಲ ಎಂದಿರುವ ಪ್ರೇಕ್ಷಕರು ಉಪೇಂದ್ರ ಅವರ ವಿಮರ್ಶೆಗೆ ಕಮೆಂಟ್ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ.

ವಾವ್! ಎಂತಹ ಸಿನಿಮಾ ಎಂದು ಬಣ್ಣಿಸಿದ ಉಪೇಂದ್ರ

‘ಟಾಕ್ಸಿಕ್’ ಚಿತ್ರ ವೀಕ್ಷಿಸಿದ ಬಳಿಕ ಉಪೇಂದ್ರ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. “ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ವಾವ್! ಎಂತಹ ಸಿನಿಮಾ, ಇದೊಂದು ಸಂಪೂರ್ಣ ಹೊಸ ಅನುಭವ!” ಎಂದು ಹೊಗಳಿದ್ದಾರೆ.

ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ನಿಜಕ್ಕೂ ಅಭಿನಂದನೀಯ. ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್ ಎಂದು ಉಪೇಂದ್ರ ಟ್ವೀಟ್ ಮಾಡಿದ್ದರು.

ಚಿತ್ರರಂಗದ ಪ್ರಮುಖ ನಟರೊಬ್ಬರು ಸಿನಿಮಾ ಪರ ನಿಂತಿರುವುದು ಯಶ್ ಅಭಿಮಾನಿಗಳಿಗೆ ಸಂತಸ ತಂದಿದೆ.

ನೆಟ್ಟಿಗರಿಂದ ವ್ಯಂಗ್ಯ ಹಾಗೂ ತೀವ್ರ ಆಕ್ರೋಶ

ಉಪೇಂದ್ರ ಅವರ ಈ ವಿಮರ್ಶೆಗೆ ನೆಟ್ಟಿಗರಿಂದ ಬಗೆಬಗೆಯ ಪ್ರತಿಕ್ರಿಯೆಗಳು ಹಾಗೂ ವ್ಯಂಗ್ಯದ ಕಮೆಂಟ್‌ಗಳು ಹರಿದುಬರುತ್ತಿವೆ. ಸಾಧಾರಣ ಸಿನಿಮಾಗಳನ್ನು ಹೀಗೆ ಮೆರೆಸುವುದನ್ನು ನಿಲ್ಲಿಸಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

‘ಇದಕ್ಕಿಂತ ಕಬ್ಜ, ಮಾರ್ಟಿನ್ ಹಾಗೂ ಕೆಡಿ ಸಿನಿಮಾಗಳೇ ಎಷ್ಟೋ ಪಟ್ಟು ಮೇಲು’ ಎಂದು ಇನ್ನೊಬ್ಬರು ಖಾರವಾಗಿ ಬರೆದುಕೊಂಡಿದ್ದಾರೆ.

ಇಂತಹ ಸಿನಿಮಾಗಳನ್ನು ಹೊಗಳಿದರೆ ಕನ್ನಡ ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ.

ನಿಮಗಷ್ಟೇ ಅರ್ಥವಾಗುವ ಸಿನಿಮಾ ಎಂದ ಪ್ರೇಕ್ಷಕರು

‘ಸರ್, ಈ ಸಿನಿಮಾ ನಿಮಗಷ್ಟೇ ಅರ್ಥವಾಗಲು ಸಾಧ್ಯ, ಬೇರೆಯವರಿಗಲ್ಲ. ನಮಗೆ ಕನಿಷ್ಠ ಪಕ್ಷ ಒಂದು ಬೇಸಿಕ್ ಕಥೆಯಾದರೂ ಬೇಕು’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಕೇವಲ ರಿಚ್ ವಿಶುವಲ್ಸ್ ಮತ್ತು ಪಬ್‌ಜಿ ಶೈಲಿಯ ಆಕ್ಷನ್ ದೃಶ್ಯಗಳು ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ವಾದಿಸಿದ್ದಾರೆ.

‘ಸರ್, ನೀವು ನೋಡಿದ ಪ್ರಿಂಟ್ ಅನ್ನೇ ಎಲ್ಲರಿಗೂ ರಿಲೀಸ್ ಮಾಡುವಂತೆ ನಿರ್ಮಾಪಕರಿಗೆ ಹೇಳಿ’ ಎಂದು ಇನ್ನೊಬ್ಬರು ಹಾಸ್ಯಾಸ್ಪದವಾಗಿ ವ್ಯಂಗ್ಯ ಮಾಡಿದ್ದಾರೆ.