
Premada Oorali: ಕನ್ನಡ ಚಿತ್ರರಂಗದಲ್ಲಿ ಒಂದು ಸಿನಿಮಾ ಪ್ರೇಕ್ಷಕರ ಮನ ಗೆದ್ದು ಬಿಟ್ಟರೆ, ಅದನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ‘ಪ್ರೇಮದ ಊರಲಿ’ ಸಿನಿಮಾ ಒಂದೊಳ್ಳೆ ಉದಾಹರಣೆ ಆಗ್ಬಹುದು. ಕೇವಲ ಪ್ರಮುಖ ನಗರಗಳಲ್ಲಷ್ಟೇ ಅಲ್ಲ, ತುಮಕೂರಿನಂತಹ ಟೈಯರ್ ಟು ಸಿಟಿಗಳಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಲ್ಲಿನ ಮಾರುತಿ ಚಿತ್ರಮಂದಿರದಲ್ಲಿ ಈ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರೇಕ್ಷಕರ ಸಂಖ್ಯೆ ಚಿತ್ರತಂಡಕ್ಕಷ್ಟೇ ಅಲ್ಲದೇ ಚಿತ್ರಮಂದಿರದ ಮಾಲೀಕರಿಗೂ ಸಂತಸ ತಂದಿದೆ.
ಸಾಮಾನ್ಯವಾಗಿ ಬಿಡುಗಡೆಯಾದ ಮೊದಲ ಮೂರು ದಿನಗಳ ನಂತರ ಸಿಂಗಲ್ ಸ್ಕ್ರೀನ್ಗಳಲ್ಲಿ ನಾಲ್ಕು ಶೋಗಳು ಪ್ರದರ್ಶನ ಆಗುತ್ತವೆ. ಆದರೆ, ‘ಪ್ರೇಮದ ಊರಲಿ’ ತೆರೆಕಂಡ ಮೂರು ವಾರಗಳ ಬಳಿಕ ಮಾರುತಿ ಚಿತ್ರಮಂದಿರ ದಿನಕ್ಕೆ ಐದು ಶೋಗಳನ್ನು ಹಾಕುತ್ತಿದೆ. ಇದು ಅತೀ ಅಪರೂಪವೆಂದೇ ಹೇಳಬಹುದು. ಈ ಬಗ್ಗೆ ಚಿತ್ರಮಂದಿರದ ಮಾಲೀಕರಾದ ಗಣೇಶ್ ಕಲ್ಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
“ನಮ್ಮ ಚಿತ್ರಮಂದಿರದಲ್ಲಿ ಪ್ರತಿದಿನ 4 ಪ್ರದರ್ಶನಗಳನ್ನು ನಡೆಸುತ್ತಿದ್ದೆವು. ಆದರೆ ‘ಪ್ರೇಮದ ಊರಲಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಯನ್ನು ಕಂಡು 5 ಪ್ರದರ್ಶನಗಳನ್ನು ಆರಂಭಿಸಿದ್ದೇವೆ. ವಿಶೇಷವೆಂದರೆ, ಎಲ್ಲಾ ಪ್ರದರ್ಶನಗಳಿಗೂ ಹೌಸ್ಫುಲ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ” ಎಂದು ಮಾರುತಿ ಚಿತ್ರಮಂದಿರದ ಮಾಲೀಕರಾದ ಗಣೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
2ನೇ ವಾರದಲ್ಲೂ ಭರ್ಜರಿ ಪ್ರದರ್ಶನ!
ಗಣೇಶ್ ಅವರ ಪ್ರಕಾರ, 2ನೇ ವಾರದಲ್ಲಿ ಒಟ್ಟು 35 ಪ್ರದರ್ಶನಗಳನ್ನು ನಡೆಸಲಾಗಿದ್ದು, ಅದರಲ್ಲಿ ಬರೋಬ್ಬರಿ 33 ಪ್ರದರ್ಶನಗಳು ಹೌಸ್ಫುಲ್ ಆಗಿವೆ. ಮೂರನೇ ವಾರದಲ್ಲಿಯೂ ಸಿನಿಮಾದ ಮೇಲಿನ ಪ್ರೇಕ್ಷಕರ ಪ್ರೀತಿ ಕಡಿಮೆಯಾಗಿಲ್ಲ. 36 ಪ್ರದರ್ಶನಗಳಲ್ಲಿ 33 ಪ್ರದರ್ಶನಗಳು ಹೌಸ್ಫುಲ್ ಆಗಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: Premada Oorali: ‘ಪ್ರೇಮದ ಊರಲಿ’ ಸಿನಿಮಾ ಒಟಿಟಿಗೆ ಬರ್ತಿದೆಯಾ? ವದಂತಿಗಳಿಗೆ ಬ್ರೇಕ್ ಹಾಕಿದ ಚಿತ್ರತಂಡ
ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವುದು ಸಹಜ. ಆದರೆ ಎರಡನೇ ವಾರ, ಮೂರನೇ ವಾರ ದಾಟಿ ನಾಲ್ಕನೇ ವಾರದಲ್ಲೂ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುತ್ತಿರುವುದು ನಿಜಕ್ಕೂ ವಿಶೇಷ. ಅದರಲ್ಲೂ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿರುವುದು ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಮತ್ತೊಂದು ಪ್ರಮುಖ ಅಂಶ.
ಮೊದಲ ಬಾರಿಗೆ ಬೆಳಗ್ಗೆ 7 ಗಂಟೆ ಪ್ರದರ್ಶನ!
ತುಮಕೂರಿನ ಪ್ರೇಕ್ಷಕರ ಬೇಡಿಕೆಗೆ ಮಣಿದು ಮಾರುತಿ ಚಿತ್ರಮಂದಿರದಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕೆ ಇದು ಮತ್ತೊಂದು ಉದಾಹರಣೆ ಎಂದೇ ಹೇಳಬಹುದು.
4ನೇ ವಾರದಲ್ಲೂ ಸಿನಿಮಾದ ಯಶಸ್ಸಿನ ಓಟ ಮುಂದುವರಿದಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 18 ಮತ್ತು 21ರಂದು ಬೆಳಗ್ಗೆ 7 ಗಂಟೆಯ ಪ್ರದರ್ಶನಗಳನ್ನು ನೀಡಲು ಚಿತ್ರಮಂದಿರದ ಆಡಳಿತ ಮಂಡಳಿ ನಿರ್ಧರಿಸಿದೆ. ಚಿತ್ರಮಂದಿರದ ಮಾಲೀಕರೇ ಪ್ರೇಕ್ಷಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಪ್ರದರ್ಶನಗಳನ್ನು ಆಯೋಜಿಸುತ್ತಿರುವುದು ಈ ಸಿನಿಮಾದ ಕ್ರೇಜ್ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.
ಸಿಂಗಲ್ ಸ್ಕ್ರೀನ್ಗೆ ಪ್ರೇಕ್ಷಕರ ಆದ್ಯತೆ!
ತುಮಕೂರಿನಲ್ಲಿ ಮಲ್ಟಿಪ್ಲೆಕ್ಸ್ಗಳಿದ್ದರೂ, ಅವುಗಳಲ್ಲಿ ದಿನಕ್ಕೆ 12ರಿಂದ 18 ಪ್ರದರ್ಶನಗಳು ನಡೆಯುತ್ತಿದ್ದರೂ, ಮಾರುತಿ ಚಿತ್ರಮಂದಿರದಂತಹ ಸಿಂಗಲ್ ಸ್ಕ್ರೀನ್ಗಳಿಗೆ ಪ್ರೇಕ್ಷಕರು ಹೆಚ್ಚಿನ ಪ್ರೀತಿಯನ್ನು ತೋರಿಸುತ್ತಿದ್ದಾರೆ ಎಂದು ಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಇಷ್ಟೊಂದು ಪ್ರೀತಿ ತೋರಿಸುತ್ತಿರುವುದಕ್ಕೆ ಕಾರಣವೂ ಇದೆ. ಮಾರುತಿ ಚಿತ್ರಮಂದಿರದಲ್ಲಿ 4K ಪ್ರೊಜೆಕ್ಷನ್ ವ್ಯವಸ್ಥೆ, ಪುಷ್ಬ್ಯಾಕ್ ಆಸನಗಳು, ಉತ್ತಮ ಧ್ವನಿ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ ಹಾಗೂ ಕೈಗೆಟುಕುವ ಟಿಕೆಟ್ ದರಗಳಿವೆ. ಪ್ರೇಕ್ಷಕರು ಆರಾಮಾಗಿ ಕುಳಿತು ಸಿನಿಮಾ ವೀಕ್ಷಿಸಲು ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ಜನರು ಇಲ್ಲಿಗೆ ಬಂದು ಸಿನಿಮಾ ನೋಡೋಕೆ ಇಷ್ಟಪಡುತ್ತಿದ್ದಾರೆ.”ಉತ್ತಮ ಸಿನಿಮಾ, ಉತ್ತಮ ಚಿತ್ರಮಂದಿರದ ಅನುಭವ ಮತ್ತು ಕೈಗೆಟುಕುವ ಟಿಕೆಟ್ ದರಗಳು ಇದ್ದರೆ ಪ್ರೇಕ್ಷಕರು ಖಂಡಿತವಾಗಿಯೂ ಬರುತ್ತಾರೆ” ಎಂಬ ಸಂದೇಶವನ್ನು ‘ಪ್ರೇಮದ ಊರಲಿ’ಯ ಯಶಸ್ಸು ಮತ್ತೊಮ್ಮೆ ಸಾರುತ್ತಿದೆ.
ಕನ್ನಡ ಸಿನಿಮಾಗಳಿಗೆ ಹೊಸ ಭರವಸೆ
ಇಂದಿನ ದಿನಗಳಲ್ಲಿ ದೊಡ್ಡ ಬಜೆಟ್, ಸ್ಟಾರ್ಗಳ ಹವಾಗಳ ಜೊತೆ ಭರ್ಜರಿ ಪ್ರಚಾರವೇ ಯಶಸ್ಸಿನ ಸೂತ್ರ ಎಂಬ ನಂಬಿಕೆ ಇದೆ. ಈ ಮಧ್ಯೆ ಪ್ರೇಕ್ಷಕರ ಹೃದಯ ಗೆದ್ದ ಕಥೆ ಮತ್ತು ಜನರ ಪ್ರೀತಿ ಒಂದು ಸಿನಿಮಾವನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗುತ್ತೆ ಅನ್ನೋದನ್ನು ‘ಪ್ರೇಮದ ಊರಲಿ’ ಎತ್ತಿ ತೋರಿಸುತ್ತಿದೆ. ತುಮಕೂರು ಮಾರುತಿ ಚಿತ್ರಮಂದಿರದಲ್ಲಿ 4ನೇ ವಾರದಲ್ಲೂ ಮುಂದುವರಿದಿರುವ ಹೌಸ್ಫುಲ್ ಪ್ರದರ್ಶನಗಳು ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆಯನ್ನು ಮೂಡಿಸಿರೋದಂತೂ ನಿಜ. ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ಪ್ರೀತಿಸಲು ಸಿದ್ಧರಿದ್ದಾರೆ. ಅವರಿಗೆ ಉತ್ತಮ ಸಿನಿಮಾ ಮತ್ತು ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿತ್ರಮಂದಿರದ ಅನುಭವ ಸಿಗಬೇಕು ಎಂಬುದಷ್ಟೇ ಮುಖ್ಯ.




