ಪ್ರತಿ ಬಿಗ್ಬಾಸ್ (Bigg Boss Kannada) ಸೀಸನ್ನಲ್ಲೂ ಒಂದಲ್ಲ ಒಂದು ಒಂದು ಜೋಡಿ, ಲವ್ ಸ್ಟೋರಿ ಸಾಮಾನ್ಯ. ಗಿಲ್ಲಿ-ಕಾವ್ಯಾ, ರೂಪೇಶ್-ಸಾನ್ಯಾ, ದಿವ್ಯಾ-ಅರವಿಂದ್, ಚಂದನ್-ನಿವೇದಿತಾ, ಕಾರ್ತಿಮ್-ನಮ್ರತಾ ಹೀಗೆ ಬಿಗ್ಬಾಸ್ ಮನೆಯಲ್ಲಿ ಹಲವು ಜೋಡಿಗಳಾಗಿವೆ. ಕೆಲವೊಮ್ಮೆ ಆ ಲವ್ ಸ್ಟೋರಿಗಳು ಮನೆಯ ಹೊರಗೂ ಉಳಿದುಕೊಳ್ಳುತ್ತವೆ ಆದರೆ ಕೆಲವು ಮನೆಯಲ್ಲೇ ಅಂತ್ಯವಾಗಿ ಹೋಗುತ್ತವೆ. ಹಾಗೆಯೇ ಈ ಸೀಸನ್ನಲ್ಲೂ ಒಂದು ಲವ್ ಸ್ಟೋರಿ ಶುರುವಾಗಿದೆ. ಆದರೆ ಆ ಲವ್ ಸ್ಟೋರಿ ಶುರುವಿನಲ್ಲೇ ಟ್ರೈಯಾಂಗಲ್ ಲವ್ ಸ್ಟೋರಿ (ತ್ರಿಕೋನ ಪ್ರೇಮಕತೆ) ಆಗಿಬಿಟ್ಟಿದೆ.
ಹೌದು, ಬಿಗ್ಬಾಸ್ ಮನೆಯಲ್ಲಿ ಲವ್ ಸ್ಟೋರಿ ಒಂದು ಶುರುವಾಗಿದೆ. ಅದನ್ನು ಹೇಳಿಕೊಂಡಿರುವುದು ಕರಾವಳಿ ಚೆಲುವೆ ಸೌಂದರ್ಯಾ. ಮನೆ ಸದಸ್ಯ ಯಶಸ್ ಜೊತೆಗೆ ಸೌಂದರ್ಯಾ ಬಲು ಕ್ಲೋಸ್ ಆಗಿದ್ದರು. ಇಬ್ಬರೂ ಪರಸ್ಪರ ಕ್ಯೂಟ್ ಆಗಿ ಮಾತನಾಡಿಕೊಳ್ಳುತ್ತಾ ಇದ್ದರು. ಆದರೆ ಕಳೆದ ಕೆಲ ದಿನಗಳಿಂದ ಯಶಸ್, ಆಸಿಯಾ ಜೊತೆ ಹೆಚ್ಚು ಕ್ಲೋಸ್ ಆಗಿದ್ದಾರೆ. ಆಸಿಯಾ ಜೊತೆಗೆ ಹೆಚ್ಚು ಸಮಯ ಮಾತನಾಡುತ್ತಾ ಇರುತ್ತಾರೆ. ಇದು ಪಾಪ ಸೌಂದರ್ಯಾಗೆ ಸಹಿಸಲಾಗುತ್ತಿಲ್ಲ.‘
ಶುಕ್ರವಾರ ರಾತ್ರಿ ಆಸಿಯಾ ಮತ್ತು ಯಶಸ್ ಲೈಟ್ಸ್ ಆಫ್ ಆದ ಬಳಿಕ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಸೌಂದರ್ಯಾ ಸಹ ಬೇರೆ ಸ್ಪರ್ಧಿಗಳ ಜೊತೆಗೆ ಹೊರಗೆ ಕೂತು ಮಾತನಾಡುತ್ತಿದ್ದರು. ಆಗ ತಮ್ಮ ಮನದಾಳದ ಮಾತುಗಳನ್ನು ಸೌಂದರ್ಯ ಹೇಳಿಕೊಂಡರು. ‘ನನಗೆ ಯಶಸ್ ತುಂಬಾ ಇಷ್ಟ. ನಾನು ಅವನ ಪ್ರೀತಿಯಲ್ಲಿ ಬೀಳುತ್ತಿದ್ದೇನೆ. ನನಗೆ ಅವನೊಂದಿಗೆ ಇರುವುದು, ಅವನೊಂದಿಗೆ ಮಾತನಾಡುವುದು ತುಂಬಾ ಇಷ್ಟ. ‘ಆದರೆ ಈಗ ಅವನು ಆಸಿಯಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾನೆ. ಅವರಿಬ್ಬರೂ ಹೀಗೆ ಒಟ್ಟಿಗೆ ಕೂತು ಮಾತನಾಡುವುದು, ಕ್ಲೋಸ್ ಆಗಿರುವುದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದರು ಸೌಂದರ್ಯಾ.

ಆಸಿಯಾ ಹೇಳಿದ್ದೇನು?
ಆದರೆ ಇತ್ತ, ಆಸಿಯಾ ಅವರು ಯಶಸ್ ಜೊತೆ ಮಾತನಾಡುತ್ತಾ, ಆತನಿಗೆ ತನ್ನ ಮಿತಿಯಲ್ಲಿ ಇರು ಎಂದು ಸ್ಪಷ್ಟವಾಗಿ ಹೇಳಿದರು. ‘ನೀನು ನನಗೆ ಒಳ್ಳೆಯ ಗೆಳೆಯ, ಸಹ ಸ್ಪರ್ಧಿ. ಆದರೆ ನಿನ್ನ ಆ ಫ್ಲರ್ಟಿಂಗ್ ಆಂಗಲ್ ನನಗೆ ಇಷ್ಟ ಆಗುವುದಿಲ್ಲ. ಅದೊಂದು ಬೇಡ, ಅದಕ್ಕೆಲ್ಲ ನಾನು ತಯಾರಿಲ್ಲ’ ಎಂದು ಆರಂಭದಲ್ಲಿಯೇ ಯಶಸ್ಗೆ ಸ್ಪಷ್ಟವಾಗಿ ಹೇಳಿ ಬಿಟ್ಟರು ಆಸಿಯಾ.
ಈಗ ಪರಿಸ್ಥಿತಿ ಹೇಗಿದೆ ಎಂದರೆ ಸೌಂದರ್ಯಾಗೆ ಯಶಸ್ ಮೇಲೆ ಪ್ರೀತಿ, ಯಶಸ್ಗೆ ಆಸಿಯಾ ಮೇಲೆ ಪ್ರೀತಿ ಆದರೆ ಆಸಿಯಾಗೆ ಬಿಗ್ಬಾಸ್ ಗೆಲುವಿನ ಮೇಲೆ ಪ್ರೀತಿ. ಒಟ್ಟಾರೆ ಮನೆಯಲ್ಲಿ ಒಂದು ಒಳ್ಳೆ ಟ್ರೈಯಾಂಗಲ್ ಲವ್ ಸ್ಟೋರಿ ನಡೆಯುತ್ತಿದೆ.




