☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Bail Review:’ಬೇಲ್’ ಪಡೆದವ್ರಿಗೆ ಲಾಂಗ್ ಹಿಡಿದ ಶಿವಣ್ಣ; ಸ್ಯಾಂಡಲ್‌ವುಡ್‌ಗೆ ಸಿಕ್ಕಿತೇ ‘ಬ್ರೇಕ್’?

Shivarajkumar, Saikumar, Jayaram starrer Bail review and rating in Kannada

Stars: 3.5/5

Bail Review: ಸತತ ಸೋಲುಗಳನ್ನು ಕಂಡಿರೋ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸ್ಟಾರ್ ಸಿನಿಮಾ ರಿಲೀಸ್ ಆಗಿದೆ. ಅದುವೇ ಪವನ್ ಒಡೆಯರ್ ನಿರ್ದೇಶನದ ‘ಬೇಲ್’ (Bail). ಹಲವು ವರ್ಷಗಳ ಬಳಿಕ ಶಿವರಾಜ್‌ಕುಮಾರ್ (Shivarajkumar) ಮೀಸೆ ಬಿಟ್ಟು ವಿಭಿನ್ನವಾಗಿ ತೆರೆಮೇಲೆ ಎಂಟ್ರಿ ಕೊಟ್ಟಿದ್ದಾರೆ. ಇವರೊಂದಿಗೆ ಹಿರಿಯ ನಟರಾದ ಡೈಲಾಗ್ ಕಿಂಗ್ ಸಾಯಿ ಕುಮಾರ್ (Saikumar), ಮಲಯಾಳಂ ನಟ ಜಯರಾಮ್ (Jayaram) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಿದ್ದರೆ, ಇಂದು (ಅಕ್ಟೋಬರ್ 2) ತೆರೆಕಂಡಿರೋ ‘ಬೇಲ್’ ಸಿನಿಮಾ ಕಥೆಯೇನು? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ಇಲ್ಲಿದೆ.

‘ಬೇಲ್’ ಕಥೆಯೇನು?

‘ಬೇಲ್’ ಸಿನಿಮಾ ಆರಂಭವಾಗುವುದೇ ಒಂದು ಕುತೂಹಲಕಾರಿ ಘಟನೆಯೊಂದಿಗೆ. 12 ಆಗಸ್ಟ್ 2023ರಂದು ಹೋಟೆಲ್ ಮೇಲೆ ನಡೆಯುವ ಭಯೋತ್ಪಾದಕ ದಾಳಿ ಕಥೆಗೆ ದೊಡ್ಡ ತಿರುವು ನೀಡುತ್ತದೆ. ವಿಜಯ್ ಎಂಬ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ನಿವೃತ್ತಿಯ ನಂತರವೂ ಅವರ ಜೀವನದಲ್ಲಿ ಎದುರಾಗುವ ಘಟನೆಗಳು ಕಥೆಯನ್ನು ಮತ್ತಷ್ಟು ಗಂಭೀರವಾಗಿಸುತ್ತದೆ.ಮೂರು ಸ್ನೇಹಿತರ ನಡುವಿನ ಬಾಂಧವ್ಯ, ಭಯೋತ್ಪಾದಕ ದಾಳಿಯಲ್ಲಿ ವಿಜಯ್ ಅವರ ದೊಡ್ಡ ಮಗಳು ಕೃತಿಯನ್ನು ಕಳೆದುಕೊಳ್ಳುವ ನೋವು ಹಾಗೂ ನಂತರ ನಡೆಯುವ ಘಟನೆಗಳು ಕಥೆಯ ಪ್ರಮುಖ ಭಾಗ.

‘ಬೇಲ್’ ಪ್ಲಸ್ ಪಾಯಿಂಟ್ ಏನು?

ಹಿಮಾಚಲ ಪ್ರದೇಶದ ದೇವಾಲಯದ ದೃಶ್ಯಗಳು ಮತ್ತು ಫೋಟೋಗ್ರಫಿ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಅಲ್ಲಿ ನಡೆಯುವ ಘಟನೆಗಳು ಹಾಗೂ ಸಾಜಿದ್ ಖುರೇಷಿ ಪಾತ್ರಕ್ಕೆ ಸಂಬಂಧಿಸಿದ ಟ್ವಿಸ್ಟ್ ಕಥೆಯಲ್ಲಿ ಕುತೂಹಲ ಮೂಡಿಸುತ್ತದೆ.

ಸಿನಿಮಾದಲ್ಲಿ ಮೆಡಿಕಲ್ ಮಾಫಿಯಾ ವಿಷಯ ಪ್ರೇಕ್ಷಕರನ್ನು ಸ್ಪರ್ಶಿಸುತ್ತದೆ. ವಿಜ್ಞಾನಿ ಸಿರಾಜ್ ಥಾಮಸ್ ಸುತ್ತ ನಡೆಯುವ ಘಟನೆಗಳಲ್ಲಿ ವಿಜಯ್ ಅವರ ಸ್ನೇಹಿತರ (ಸಾಯಿಕುಮಾರ್ ಹಾಗೂ ಜಯರಾಮ್) ಪಾತ್ರಗಳೂ ಇಲ್ಲಿ ಪ್ರಮುಖ.

ಶಿವಣ್ಣ ಇಡೀ ಸಿನಿಮಾದ ಹೈಲೈಟ್. ನಿವೃತ್ತಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಇವರಿಗೆ ಹಿರಿಯ ನಟರಾದ ಸಾಯಿಕುಮಾರ್ ನಿವೃತ್ತ ನ್ಯಾಯಾದೀಶರು ಹಾಗೂ ವಿಜ್ಞಾನಿಯಾಗಿ ಜಯರಾಮ್ ಉತ್ತಮ ಸಾಥ್ ಕೊಟ್ಟಿದ್ದಾರೆ.

ಇಂಟರ್‌ವಲ್‌ ಬ್ಲಾಕ್ ಸಿನಿಮಾದ ಮತ್ತೊಂದು ಹೈಲೈಟ್. ಶಿಂಧೆ ಬ್ರದರ್ ಮತ್ತು ಅವರ ಸ್ನೇಹಿತರನ್ನು ವಿಜಯ್ ಶೂಟ್ ಮಾಡುವ ದೃಶ್ಯ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ— ಇದರ ಹಿಂದೆ ಯಾರು? ಏಕೆ? ಎಂಬ ಕುತೂಹಲ ಮುಂದಿನ ಭಾಗದ ಮೇಲೆ ನಿರೀಕ್ಷೆ ಮೂಡಿಸುತ್ತದೆ.

ನಂತರ ದೀಕ್ಷಿತ್ ಶೆಟ್ಟಿ ಅವರ ದಯಾಶಂಕರ್ ಪಾತ್ರದ ಎಂಟ್ರಿ ಕಥೆಗೆ ಹೊಸ ವೇಗ ನೀಡುತ್ತದೆ. ಇವರ ಪಾತ್ರಗಳು ಇಂಟ್ರೆಸ್ಟಿಂಗ್ ಆಗಿದ್ದು, ಲೂಸ್ ಮಾದ ಯೋಗಿ ಅವರ ಎಂಟ್ರಿಗೆ ಶಿಳ್ಳೆಗಳು ಬೀಳುತ್ತವೆ.

ಮಾಜಿ ಸಚಿವ ನಾಗರಡ್ಡಿ ಅವರ ತಮ್ಮ ಯೋಗಿ ರೆಡ್ಡಿ ಜೈಲಿನಿಂದ bail ಪಡೆದು ಹೊರಬರುವ ದೃಶ್ಯವನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ಅವರ ಮಾಸ್ ಡೈಲಾಗ್ಸ್ ಅಭಿಮಾನಿಗಳಿಗೆ ಇಷ್ಟವಾಗುತ್ತವೆ.

“ಕುಮಾರಿ ಕುಮಾರಿ” ಹಾಡಿನಲ್ಲಿ ಬಿಗ್‌ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮಿಂಚಿದ್ದಾರೆ.

‘ಬೇಲ್’ ಮೈನಸ್ ಪಾಯಿಂಟ್ ಏನು?

ಪವನ್ ಒಡೆಯರ್ ಕಥೆಯನ್ನು ಇನ್ನಷ್ಟು ಬಿಗಿಗೊಳಿಸಬಹುದಿತ್ತು. ಹಾಗೇ ಚಿತ್ರಕಥೆಯನ್ನು ಇನ್ನಷ್ಟು ಇಂಟ್ರೆಸ್ಟಿಂಗ್ ಮಾಡಿದ್ದರೆ, ಸಿನಿಮಾ ಪ್ರೇಕ್ಷಕರಿಗೆ ಇನ್ನು ಕಿಕ್ ಕೊಡುತ್ತಿತ್ತು.

ಕೆಲವು ಕಡೆ ಹಿನ್ನೆಲೆ ಸಂಗೀತ ಮೈನಸ್ ಅನಿಸುತ್ತೆ. ಕೆಲವು ದೃಶ್ಯಗಳಲ್ಲಿ ಬರೀ ಹಿನ್ನೆಲೆ ಸಂಗೀತವೇ ರಾರಾಜಿಸಿದೆ. ಅದು ಕೆಲವು ಪ್ರೇಕ್ಷಕರಿಗೆ ಕಿರಿಕಿರಿ ಎನಿಸಬಹುದು.

ಶಿವಣ್ಣ, ಸಾಯಿಕುಮಾರ್, ಜಯರಾಮ್, ದೀಕ್ಷಿತ್ ಶೆಟ್ಟಿ ಬಿಟ್ಟರೆ ಇನ್ನು ಉಳಿದವರಿಗೆ ಹೆಚ್ಚಿನ ಸ್ಕ್ರೀನ್ ಪ್ರೆಸೆನ್ಸ್ ಇಲ್ಲ.

ಫೈನಲಿ…

ಒಟ್ಟಿನಲ್ಲಿ, ಸಮಾಜದ ಹಲವು ಸಮಸ್ಯೆಗಳು, ಅಪರಾಧ, ರಾಜಕೀಯ ಹಿನ್ನೆಲೆ ಮತ್ತು ಜೈಲಿನಿಂದ ಜಾಮೀನು ಪಡೆದು ಹೊರಬರುವ ಕ್ರಿಮಿನಲ್‌ಗಳ ಸುತ್ತ ನಡೆಯುವ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆಯನ್ನು ಕಟ್ಟಿಕೊಡಲಾಗಿದೆ.

‘ಬೇಲ್’ ಒಂದು ಕ್ರೈಂ-ಆಕ್ಷನ್-ಥ್ರಿಲ್ಲರ್ ಆಗಿ ಕುತೂಹಲ ಮೂಡಿಸುವ ಸಿನಿಮಾ. ವಿಶೇಷವಾಗಿ ಶಿವಣ್ಣ ಅವರ ಸ್ಕ್ರೀನ್ ಪ್ರೆಸೆನ್ಸ್, ಇಂಟರ್‌ವಲ್ ಬ್ಲಾಕ್, ದೀಕ್ಷಿತ್ ಶೆಟ್ಟಿ ಅವರ ಎಂಟ್ರಿ ಮತ್ತು ಯೋಗಿ ರೆಡ್ಡಿ ಅವರ ಮಾಸ್ ಸೀನ್‌ಗಳು ಸಿನಿಮಾದ ಪ್ರಮುಖ ಅಂಶಗಳು.