Renukaswamy Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ಇನ್ಮುಂದೆ ಮಾಫಿ ಸಾಕ್ಷಿಯಾಗಲಿದ್ದಾರೆ.
ಪ್ರದೋಷ್ ಪರ ವಕೀಲರ ಮನವಿಗೆ ಕೋರ್ಟ್ ಸ್ಪಂದಿಸಿದೆ. ಚಾರ್ಜ್‌ಶೀಟ್‌ನಲ್ಲಿರುವ ‘ಆರೋಪಿ 14’ ಎಂಬ ಹೆಸರನ್ನು ತೆಗೆದುಹಾಕಲು ನ್ಯಾಯಾಲಯ ಸೂಚನೆ ನೀಡಿದೆ.
ಸೆಪ್ಟೆಂಬರ್ 28ರಂದು ಕೋರ್ಟ್‌ನಲ್ಲಿ ಪ್ರದೋಷ್ ಹೇಳಿಕೆ ದಾಖಲಾಗಲಿದೆ. ಈ ಪ್ರಕ್ರಿಯೆಯು ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಭಾರೀ ಹಿನ್ನಡೆ ತಂದೊಡ್ಡುವ ಸಾಧ್ಯತೆಯಿದೆ.
ಮಾಫಿ ಸಾಕ್ಷಿಯಾದ 14ನೇ ಆರೋಪಿ ಪ್ರದೋಷ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ಎಸ್. ರಾವ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ (ಮಾಫಿ ಸಾಕ್ಷಿ) ಪರಿಗಣಿಸಲಾಗಿದೆ.
ಇದನ್ನು ಓದಿ: Darshan Case: ಇಂದು ಎ1 ಆರೋಪಿ ಪವಿತ್ರಾ ಗೌಡಗೆ ಸಿಗುತ್ತಾ ಜಾಮೀನು? ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ
ಸೆಷನ್ಸ್ ಕೋರ್ಟ್ ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕರಿಸಿದೆ. ಹೀಗಾಗಿ ಚಾರ್ಜ್‌ಶೀಟ್‌ನಲ್ಲಿ ‘ಆರೋಪಿ 14’ ಎಂದಿರುವ ಹೆಸರನ್ನು ಡಿಲೀಟ್ ಮಾಡಲು ಅವರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಕೋರ್ಟ್ ಕೂಡ ಸಮ್ಮತಿಸಿದೆ.
ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಎದುರಾಯ್ತು ಹಿನ್ನಡೆ
ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 23ರಂದು ಈ ಅರ್ಜಿಯನ್ನು ವಜಾಗೊಳಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಕಾನೂನುಬಾಹಿರತೆ ಕಂಡುಬಂದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದಾಗಿ ದರ್ಶನ್ ಕಡೆಯವರಿಗೆ ಕಾನೂನು ಹಂತದಲ್ಲಿ ದೊಡ್ಡ ಹಿನ್ನಡೆಯಾದಂತಾಗಿದೆ.
Renukaswamy Case: ಸೆಪ್ಟೆಂಬರ್ 28ರಂದು ನ್ಯಾಯಾಲಯದಲ್ಲಿ ಪ್ರಮುಖ ಹೇಳಿಕೆ
ಬರುವ ಸೆಪ್ಟೆಂಬರ್ 28ರಂದು ನ್ಯಾಯಾಲಯದ ಮುಂದೆ ಪ್ರದೋಷ್ ತಮ್ಮ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಲಿದ್ದಾರೆ. ಪ್ರದೋಷ್ ನೀಡುವ ಹೇಳಿಕೆಯು ಈ ಇಡೀ ಕೊಲೆ ಪ್ರಕರಣದ ತನಿಖೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ.
ನ್ಯಾಯಾಲಯದ ಮುಂದೆ ಪ್ರದೋಷ್ ಯಾವ ರೀತಿಯ ವಿಷಯಗಳನ್ನು ಬಿಚ್ಚಿಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಪ್ರದೋಷ್ ಹೇಳಿಕೆಯ ನಂತರ ದರ್ಶನ್ ಪರ ವಕೀಲರು ನಡೆಸುವ ಪ್ರತಿಪ್ರಶ್ನೆಗಳು (Cross-examination) ಮುಂದಿನ ಹಂತದಲ್ಲಿ ನಿರ್ಣಾಯಕವಾಗಲಿವೆ.




