Raveena Tandon: ಭಾರತೀಯ ಚಿತ್ರರಂಗದ ಖ್ಯಾತ ನಟಿ, ಬಾಲಿವುಡ್‌ನ ‘ಮಸ್ತ್ ಮಸ್ತ್’ ಬೆಡಗಿ ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಬೆಳ್ಳಿಪರದೆ ಮೇಲೆ ಮಿಂಚಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ‘ಕೆಜಿಎಫ್-2’ ನಂತರ ಅವರು ಮತ್ತೆ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ.
ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ ಚಿತ್ರತಂಡವನ್ನು ರವೀನಾ ಟಂಡನ್ ಅಧಿಕೃತವಾಗಿ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಂದನವನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರವೀನಾ ಟಂಡನ್ ಒಂದೇ ಪರದೆ ಹಂಚಿಕೊಳ್ಳುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಕಲಾವಿದರ ಹೊಸ ಕಾಂಬಿನೇಷನ್ ಸಿನಿಪ್ರಿಯರಲ್ಲಿ ತೀವ್ರ ರೋಮಾಂಚನ ಮೂಡಿಸಿದೆ.
ಉಪೇಂದ್ರ, ಕೆಜಿಎಫ್ ನಂತರ ಮತ್ತೊಮ್ಮೆ ಕನ್ನಡಕ್ಕೆ ಬಂದ ರವೀನಾ
ಕನ್ನಡ ಚಿತ್ರರಂಗದೊಂದಿಗೆ ರವೀನಾ ಟಂಡನ್ ಅವರಿಗೆ ದಶಕಗಳ ಅವಿನಾಭಾವ ನಂಟಿದೆ. 1999ರಲ್ಲಿ ಬಿಡುಗಡೆಯಾಗಿದ್ದ ‘ಉಪೇಂದ್ರ’ ಚಿತ್ರದ ಮೂಲಕ ಅವರು ಚಂದನವನಕ್ಕೆ ಕಾಲಿಟ್ಟು ಕನ್ನಡಿಗರ ಮನಗೆದ್ದಿದ್ದರು.
ಆ ಬಳಿಕ ಸುದೀರ್ಘ ಗ್ಯಾಪ್ ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ಪ್ರಧಾನಿ ರಮಿಕಾ ಸೇನ್ ಪಾತ್ರದ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು.
ಇದೀಗ ಶಿವಣ್ಣನಂತಹ ದಿಗ್ಗಜ ನಟನಿಗೆ ಜೋಡಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ‘ಎ ಫಾರ್ ಆನಂದ್’ ಚಿತ್ರದ ತೂಕ ಹಾಗೂ ನಿರೀಕ್ಷೆ ಬಾಕ್ಸ್ ಆಫೀಸ್‌ನಲ್ಲಿ ದುಪ್ಪಟ್ಟಾಗಿದೆ.
ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಅದ್ದೂರಿ ಶೂಟಿಂಗ್ ಆರಂಭ
ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಈ ಚಿತ್ರದ ಚಿತ್ರೀಕರಣಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ರವೀನಾ ಟಂಡನ್ ಭರ್ಜರಿಯಾಗಿ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ದಿನದ ಚಿತ್ರೀಕರಣದ ವೇಳೆ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ನಿಸಾರ್ ಅಹ್ಮದ್ ಅವರ ಸಮ್ಮುಖದಲ್ಲಿ ರವೀನಾ ಅವರಿಗೆ ವಿಶೇಷವಾಗಿ ಸನ್ಮಾನ ಮಾಡಲಾಯಿತು.
ಕ್ಯಾಂಪಸ್ ಪರಿಸರದಲ್ಲಿ ರವೀನಾ ಅವರನ್ನೊಳಗೊಂಡ ಮಹತ್ವದ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ. ಅವರ ಪಾತ್ರ ಸಿನಿಮಾದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ.
Raveena Tandon: ಗೀತಾ ಪಿಕ್ಚರ್ಸ್ ನಿರ್ಮಾಣ, ಶ್ರೀನಿ ನಿರ್ದೇಶನ
ಶಿವಣ್ಣ ಅವರಿಗೆ ಈ ಹಿಂದೆ ‘ಘೋಸ್ಟ್’ ಸಿನಿಮಾ ನೀಡಿದ್ದ ನಿರ್ದೇಶಕ ಎಂ.ಜಿ. ಶ್ರೀನಿವಾಸ್, ಈಗ ‘ಎ ಫಾರ್ ಆನಂದ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
‘ವೇದ’, ‘ಭೈರತಿ ರಣಗಲ್’, ‘ಪಬ್ಬಾರ್’ ನಂತರ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.




