ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಕೌಂಟ್‌ಡೌನ್ ಶುರುವಾಗಿದೆ. ಆಗಸ್ಟ್ 26ರಂದು ಪ್ರಪಂಚದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮೊನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಪ್ರಚಾರದ ಕಿಚ್ಚು ಹೊತ್ತಿಸಿವೆ. ಇದೀಗ ಬೆಂಗಳೂರಿನ ಜೀವನಾಡಿ ‘ನಮ್ಮ ಮೆಟ್ರೋ’ ರೈಲುಗಳ ಮೇಲೆ ಯಶ್ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಮೆಟ್ರೋ ಪ್ರಯಾಣಿಕರ ಕಣ್ಣು ಕುಕ್ಕುತ್ತಿವೆ.
ಮೆಜೆಸ್ಟಿಕ್‌ನಲ್ಲಿ ಅದ್ಧೂರಿ ಟ್ರೇಲರ್ ಲಾಂಚ್ ಹಾಗೂ ಹಿಟ್ ಸಾಂಗ್ ಟ್ರೆಂಡ್…
ಇತ್ತೀಚೆಗಷ್ಟೇ ಮೆಜೆಸ್ಟಿಕ್ ಬಳಿಯ ಎಎಂಬಿ ಮಲ್ಟಿಪ್ಲೆಕ್ಸ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಚಿತ್ರದ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದರು. ಈ ಕಾರ್ಯಕ್ರಮದಲ್ಲಿ ಯಶ್, ರಾಧಿಕಾ ಪಂಡಿತ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಭಾಗಿಯಾಗಿದ್ದರು. ಸಿನಿಮಾದಲ್ಲಿ ಯಶ್ ಅವರು ರಾಯ ಮತ್ತು ಟಿಕೆಟ್ ಎಂಬ ಎರಡು ವಿಭಿನ್ನ ಹಾಗೂ ಪವರ್‌ಫುಲ್ ಶೇಡ್‌ಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟೈಟಲ್ ಸಾಂಗ್ “ಡ್ಯಾಡಿ ಇಸ್ ಹೋಮ್” ಪ್ರತಿಯೊಬ್ಬರ ನಾಲಿಗೆಯ ಮೇಲಿದ್ದು, ಇದೇ ಸಾಲನ್ನೇ ಮೆಟ್ರೋ ಪೋಸ್ಟರ್‌ಗಳಲ್ಲಿ ಬಳಸಿಕೊಳ್ಳಲಾಗಿದೆ. ರಾಜಧಾನಿಯ ವಿವಿಧ ಭಾಗಗಳಿಗೆ ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಮೆಟ್ರೋ ಆಯ್ಕೆ ಮಾಡಿಕೊಂಡಿರುವುದು ಸೂಪರ್ ಪ್ರಚಾರ ತಂತ್ರವಾಗಿದೆ. ಪ್ರತಿಯೊಂದು ಭಾಷೆಯ ಜನರನ್ನು ತಲುಪಲು ಈ ಮೆಟ್ರೋ ಪ್ರಚಾರದ ಮಾಸ್ಟರ್ ಪ್ಲಾನ್ ಭಾರಿ ಯಶಸ್ಸು ಕಂಡಿದೆ.

ಸಿನಿಮಾದ ವಿವಾದ ಹಾಗೂ ಯಶ್ ನೀಡಿದ ಕಟ್ಟುನಿಟ್ಟಿನ ಸ್ಪಷ್ಟನೆ…
ಚಿತ್ರದ ಕೆಲವು ಬೋಲ್ಡ್ ದೃಶ್ಯಗಳು ಮತ್ತು ವಿಭಿನ್ನ ಸನ್ನಿವೇಶಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಾದ-ವಿವಾದಗಳಿಗೆ ಕಾರಣವಾಗಿದ್ದವು. ಈ ಎಲ್ಲಾ ವಿವಾದಗಳ ಬಗ್ಗೆ ಟ್ರೇಲರ್ ಲಾಂಚ್ ವೇದಿಕೆಯಲ್ಲಿ ಸ್ವತಃ ನಟ ಯಶ್ ಅತ್ಯಂತ ಖಡಕ್ ಹಾಗೂ ಸಮಾಧಾನಕರವಾದ ಉತ್ತರ ನೀಡಿದ್ದಾರೆ. “ಕಾಲಕ್ಕೆ ತಕ್ಕಂತೆ ನಡೀಬೇಕು, ಇಂದಿನ ಪೀಳಿಗೆಯ ಭಾವನೆಗಳನ್ನು ನಮ್ಮ ಸಿನಿಮಾ ಸರಿಯಾಗಿ ಪ್ರತಿನಿಧಿಸುತ್ತದೆ” ಎಂದು ಯಶ್ ಹೆಮ್ಮೆಯಿಂದ ಹೇಳಿದ್ದಾರೆ. “ಕನ್ನಡಿಗರು ಯಾವತ್ತೂ ತಲೆ ತಗ್ಗಿಸುವಂತೆ ನಾನು ಮಾಡುವುದಿಲ್ಲ, ಯಶ್ ಮೇಲೆ ನಿಮಗಿದ್ದ ನಂಬಿಕೆ ಎಂದಿಗೂ ಹುಸಿಯಾಗುವುದಿಲ್ಲ” ಎಂದು ಧೈರ್ಯ ತುಂಬಿದ್ದಾರೆ. ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಹಾಗೂ ಸಿನಿರಸಿಕರಲ್ಲಿ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿವೆ.
ಕೆವಿಎನ್ ಪ್ರೊಡಕ್ಷನ್ಸ್ ಸಾರಥ್ಯದಲ್ಲಿ ಕರುನಾಡಿನಲ್ಲಿ ಗ್ರ್ಯಾಂಡ್ ರಶ್…
ನಟ ಯಶ್ ತಮ್ಮದೇ ಮೊನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಬಂಡವಾಳ ಹೂಡಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಕರುನಾಡಿನಲ್ಲಿ ಪ್ರಚಾರ ನಿಭಾಯಿಸುತ್ತಿದೆ. ಯಶ್ ಹೊರ ರಾಜ್ಯಗಳಲ್ಲಿ ಪ್ರಮೋಷನ್ ಬ್ಯುಸಿಯಾಗಿದ್ದರೆ, ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಸಿನಿಮಾ ತಲುಪಿಸಲು ಕೆವಿಎನ್ ಟೀಮ್ ಶ್ರಮಿಸುತ್ತಿದೆ. ವಿವಾದಗಳನ್ನು ಬದಿಗೊತ್ತಿ ಪ್ರೇಕ್ಷಕರು ಈಗ ‘ಟಾಕ್ಸಿಕ್’ ಸಿನಿಮಾದ ಅದ್ಧೂರಿ ಬಿಡುಗಡೆಗಾಗಿ ಕಾತುರದಿಂದ ದಿನ ಎಣಿಸುತ್ತಿದ್ದಾರೆ. ಮೆಟ್ರೋ ರೈಲುಗಳ ಮೇಲಿನ ಅಬ್ಬರದ ಪ್ರಚಾರದಿಂದಾಗಿ ರಾಜಧಾನಿ ಬೆಂಗಳೂರಿನಾದ್ಯಂತ ಈಗ ‘ಟಾಕ್ಸಿಕ್’ ಸಿನಿಮಾದ್ದೇ ಸೌಂಡ್ ಕೇಳಿಬರುತ್ತಿದೆ. ಆಗಸ್ಟ್ 26ರಂದು ತೆರೆಗೆ ಬರಲಿರುವ ಈ ಚಿತ್ರ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುವುದು ಬಹುತೇಕ ಖಚಿತವಾಗಿದೆ.




