YASH FITNESS TIPS: ಪ್ಯಾಕ್ ರಹಸ್ಯ ಬಿಚ್ಚಿಟ್ಟ ಯಶ್; ದಿನಚರಿಯಲ್ಲಿ ಈ ಒಂದಕ್ಕೆ ಮಾತ್ರ ತಪ್ಪದೇ ಕೊಡುತ್ತಾರೆ ಫಸ್ಟ್ ಪ್ರಿಯಾರಿಟಿ…

ಪ್ಯಾಕ್ ರಹಸ್ಯ ಬಿಚ್ಚಿಟ್ಟ ಯಶ್...

Photo Credits: @monster.mind.creations (Instagram)

ರಾಕಿಂಗ್ ಸ್ಟಾರ್ ಯಶ್ ಎಂದರೆ ಸ್ಟೈಲ್, ಆ್ಯಕ್ಷನ್ ಹಾಗೂ ರಗಡ್ ಲುಕ್‌ಗೆ ಇನ್ನೊಂದು ಹೆಸರು. ‘ಕೆಜಿಎಫ್‌’ ಸರಣಿಯಿಂದ ಹಿಡಿದು ಮುಂಬರುವ ‘ಟಾಕ್ಸಿಕ್‌’ ಸಿನಿಮಾದವರೆಗೆ ಯಶ್ ಅವರ ಅದ್ಭುತ ಫಿಟ್‌ನೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 40ರ ಹರೆಯದಲ್ಲೂ ಸಿಕ್ಸ್ ಪ್ಯಾಕ್ ಕಾಯ್ದುಕೊಂಡಿರುವ ಯಶ್ ಅವರ ಈ ಬಾಡಿ ಟ್ರಾನ್ಸ್‌ಫಾರ್ಮೇಷನ್ ಹಿಂದೆ ಯಾವುದೇ ಶಾರ್ಟ್‌ಕಟ್ ಅಥವಾ ಮ್ಯಾಜಿಕ್ ಇಲ್ಲ.

ಬೆಳಗ್ಗೆ ಜಿಮ್‌ನಲ್ಲಿ ಬೆವರು ಹರಿಸೋ ರಾಕಿ…

ಯಶ್ ಅವರ ದಿನಚರಿಯಲ್ಲಿ ವ್ಯಾಯಾಮಕ್ಕೆ ಯಾವಾಗಲೂ ಮೊದಲ ಆದ್ಯತೆ ಸಿಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ದಿನದ ಇತರ ಕೆಲಸಗಳನ್ನು ಆರಂಭಿಸುವ ಮುನ್ನವೇ ಕಡ್ಡಾಯವಾಗಿ ಜಿಮ್‌ಗೆ ಹೋಗುತ್ತಾರೆ. ಸುಮಾರು ಒಂದು ಗಂಟೆಯ ಕಾಲ ಕಾರ್ಡಿಯೋ, ವೆಯ್ಟ್ ಟ್ರೈನಿಂಗ್, ಪುಶ್‌ಅಪ್ಸ್ ಮತ್ತು ಕೋರ್ ವರ್ಕೌಟ್‌ಗಳನ್ನು ಮಾಡುತ್ತಾರೆ. ಫಿಟ್‌ನೆಸ್‌ನಲ್ಲಿ ನಿರಂತರತೆ ಅತ್ಯಂತ ಮುಖ್ಯ ಎಂದು ಯಶ್ ಬಲವಾಗಿ ನಂಬುತ್ತಾರೆ. ಒಂದು ದಿನ ಜಿಮ್‌ಗೆ ಹೋಗಿ ಮತ್ತೊಂದು ದಿನ ಗ್ಯಾಪ್ ನೀಡಿದರೆ ಸೂಕ್ತ ಫಲಿತಾಂಶ ಸಿಗುವುದಿಲ್ಲ ಎಂಬುದು ಅವರ ಅಭಿಪ್ರಾಯ. ಸಿನಿಮಾ ಪಾತ್ರದ ಅಗತ್ಯಕ್ಕೆ ತಕ್ಕಂತೆ ಅವರು ಸಂಜೆ ವೇಳೆಯಲ್ಲೂ ಹೆಚ್ಚುವರಿ ವರ್ಕೌಟ್ ಸಷನ್ ನಡೆಸುತ್ತಾರೆ.

ಜಂಕ್ ಫುಡ್‌ಗೆ ಸಂಪೂರ್ಣ ಗುಡ್‌ಬೈ…

ಕೇವಲ ವ್ಯಾಯಾಮ ಮಾತ್ರವಲ್ಲದೆ ಯಶ್ ತಮ್ಮ ಆಹಾರಕ್ರಮಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರ ಪ್ರಾತಃರಾಶಿಯಲ್ಲಿ ನಟ್ಸ್, ಬ್ರೌನ್ ಬ್ರೆಡ್, ಮೊಟ್ಟೆಯ ಬಿಳಿ ಭಾಗ ಹಾಗೂ ತಾಜಾ ಹಣ್ಣುಗಳು ಸೇರಿರುತ್ತವೆ. ಮಧ್ಯಾಹ್ನದ ಊಟಕ್ಕೆ ಮೀನು, ಸೀಫುಡ್ ಮತ್ತು ಬ್ರೌನ್ ರೈಸ್‌ನಂತಹ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸುತ್ತಾರೆ. ಸಂಜೆ ಸ್ನ್ಯಾಕ್ಸ್ ಸಮಯದಲ್ಲಿ ಬ್ರೌನ್ ಬ್ರೆಡ್ ಹಾಗೂ ಬಾಳೆಹಣ್ಣು ತಿಂದರೆ, ರಾತ್ರಿ ವೇಳೆ ಅತ್ಯಂತ ಹಗುರವಾದ ಪ್ರೋಟೀನ್ ಆಹಾರ ತಗೋತಾರೆ. ಸಿಹಿ ಪದಾರ್ಥಗಳು, ಜಂಕ್ ಫುಡ್, ಅತಿಯಾಗಿ ಕರಿದ ಮತ್ತು ಮಸಾಲೆಯುಕ್ತ ಆಹಾರಗಳಿಂದ ಸಂಪೂರ್ಣವಾಗಿ ದೂರವಿರುತ್ತಾರೆ.

ಸಿಕ್ಸ್‌ಪ್ಯಾಕ್ ಕೇವಲ ಜಿಮ್‌ನಿಂದ ಸಿಗಲ್ಲ…

ಯಶ್ ಅವರ ಪ್ರಕಾರ ಫಿಟ್‌ನೆಸ್ ಎಂಬುದು ಒಂದೆರಡು ವಾರಗಳ ಗುರಿಯಲ್ಲ; ಅದೊಂದು ನಿರಂತರ ಜೀವನಶೈಲಿ. ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿ ನಂತರ ಬೇಕಾಬಿಟ್ಟಿ ತಿನ್ನುವುದು ಅವರ ಫಿಟ್‌ನೆಸ್ ಸೂತ್ರದಲ್ಲಿಲ್ಲ. ವರ್ಕೌಟ್ ಜೊತೆಗೆ ಸರಿಯಾದ ಆಹಾರ, ಉತ್ತಮ ನಿದ್ದೆ, ಯಥೇಚ್ಛ ನೀರು ಕುಡಿಯುವುದು ಹಾಗೂ ದೈನಂದಿನ ಶಿಸ್ತು ಬಹಳ ಮುಖ್ಯ. ಯಾವುದೇ ಸ್ಟೆರಾಯ್ಡ್ಸ್ ಅಥವಾ ಶಾರ್ಟ್‌ಕಟ್‌ಗಳ ಮೊರೆ ಹೋಗದೆ ನೈಸರ್ಗಿಕವಾಗಿಯೇ ತಮ್ಮ ದೇಹವನ್ನು ಹುರಿಗೊಳಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲೂ ತಮ್ಮ ಈ ಹೊಸ ಅವತಾರದ ಮೂಲಕ ಬಾಕ್ಸ್ ಆಫೀಸ್ ಧಮಾಕಾ ಎಬ್ಬಿಸಲು ರಾಕಿ ಭಾಯ್ ಸಿದ್ಧರಾಗಿದ್ದಾರೆ.