Photo Credits: @toxic_themovie (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಇಂಗ್ಲಿಷ್ ಟ್ರೇಲರ್ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಿದೆ. ಹಿಂದಿ ಆವೃತ್ತಿಗಿಂತ ಇಂಗ್ಲಿಷ್ ಟ್ರೇಲರ್ ಅತ್ಯಂತ ಶಾರ್ಪ್ ಹಾಗೂ ವಿಭಿನ್ನ ದೃಶ್ಯಗಳಿಂದ ಕೂಡಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಆದರೆ ಬ್ರಿಟಿಷ್ ಸೆನ್ಸಾರ್ ಮಂಡಳಿ (BBFC) ಮಾಡಿದ ಭಾರಿ ಎಡವಟ್ಟಿನಿಂದಾಗಿ ಇದೀಗ ಕನ್ನಡಿಗರು ತೀವ್ರವಾಗಿ ಗರಂ ಆಗಿದ್ದಾರೆ.
ಕನ್ನಡ ಚಿತ್ರವನ್ನು ‘ತಮಿಳು’ ಎಂದ ಸೆನ್ಸಾರ್ ಮಂಡಳಿ: ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ…
ಇಂಗ್ಲೆಂಡ್ನ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಶನ್ (BBFC) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ದೊಡ್ಡ ತಪ್ಪು ಮಾಡಿದೆ. ಕನ್ನಡದ ಹೆಮ್ಮೆಯ ಸಿನಿಮಾವನ್ನು “ತಮಿಳು ಭಾಷೆಯ ಆಕ್ಷನ್ ಚಿತ್ರ” ಎಂದು ತಪ್ಪಾಗಿ ಬರೆದು ವಿವರಣೆ ನೀಡಿದೆ. “ಗೋವಾದ ಪ್ರಬಲ ಡ್ರಗ್ ಕಾರ್ಟೆಲ್ ನಾಯಕನ ಕಥೆ” ಎಂದು ಬರೆಯುವಾಗ ತಮಿಳು ಸಿನಿಮಾ ಎಂದು ಉಲ್ಲೇಖಿಸಿದೆ. ಅಧಿಕೃತ ಸೆನ್ಸಾರ್ ಮಂಡಳಿಯೇ ಈ ರೀತಿಯ ಜವಾಬ್ದಾರಿರಹಿತ ಎಡವಟ್ಟು ಮಾಡಿರುವುದಕ್ಕೆ ಕನ್ನಡಿಗರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಫೇಮಸ್ ಆಗಿರುವ ಕನ್ನಡ ಸಿನಿಮಾಗೆ ಈ ರೀತಿ ಅವಮಾನ ಮಾಡಬಾರದು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂಗ್ಲಿಷ್ ಟ್ರೇಲರ್ನಲ್ಲಿದೆ ಸಖತ್ ಚೇಂಜಸ್: ಹಿಂದಿಗಿಂತ ಭಿನ್ನವಾಗಿ ಮೂಡಿಬಂದ ಆವೃತ್ತಿ…
‘ಟಾಕ್ಸಿಕ್’ ಸಿನಿಮಾದ ಹಿಂದಿ ಟ್ರೇಲರ್ಗಿಂತ ಇಂಗ್ಲಿಷ್ ಟ್ರೇಲರ್ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹಿಂದಿ ಟ್ರೇಲರ್ 4 ನಿಮಿಷ 38 ಸೆಕೆಂಡುಗಳಿದ್ದರೆ, ಇಂಗ್ಲಿಷ್ ಆವೃತ್ತಿಯನ್ನು 4 ನಿಮಿಷ 28 ಸೆಕೆಂಡುಗಳಿಗೆ ಕಟ್ ಮಾಡಲಾಗಿದೆ. ಇಂಗ್ಲಿಷ್ ಆವೃತ್ತಿಯಲ್ಲಿ ಯಶ್ ಮೆಗಾಫೋನ್ ಹಿಡಿದಿರುವುದು ಮತ್ತು ತೀವ್ರತೆಯಿಂದ ಕೂಡಿದ ಸಂಭಾಷಣೆಗಳನ್ನು ಬಳಸಲಾಗಿದೆ. ಕಡಿಮೆ ಅವಧಿಯ ಶಾರ್ಪ್ ಎಡಿಟಿಂಗ್ ಕಾರಣಕ್ಕೆ ಇಂಗ್ಲಿಷ್ ಟ್ರೇಲರ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬ್ರಿಟನ್ನಲ್ಲಿ 18+ ಸರ್ಟಿಫಿಕೇಟ್: ಆಗಸ್ಟ್ 26ಕ್ಕೆ ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್…
ಭಾರತದಲ್ಲಿ ‘ಎ’ ಸರ್ಟಿಫಿಕೇಟ್ ಪಡೆದಿರುವ ಈ ಸಿನಿಮಾಗೆ ಬ್ರಿಟನ್ನಲ್ಲಿಯೂ 18+ (A) ಪ್ರಮಾಣಪತ್ರ ನೀಡಲಾಗಿದೆ. ಚಿತ್ರದಲ್ಲಿರುವ ಬಲವಾದ ರಕ್ತಸಿಕ್ತ ಹಿಂಸೆ ಮತ್ತು ಸಾಹಸ ದೃಶ್ಯಗಳ ಕಾರಣಕ್ಕೆ ಈ ಸರ್ಟಿಫಿಕೇಟ್ ಸಿಕ್ಕಿದೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿವೆ. ಯಶ್ ಅಭಿನಯದ ಈ ಬಿಗ್ ಬಜೆಟ್ ಆಕ್ಷನ್ ಸಿನಿಮಾ ಇದೇ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.




