UMASHREE POLITICS CARRER: ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ; ರಾಜಕೀಯದಲ್ಲಿ ಹಿರಿಯ ನಟಿಯ ಹೊಸ ಮೈಲಿಗಲ್ಲು…

ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ನಟಿ ಉಮಾಶ್ರೀ ಅವಿರೋಧ ಆಯ್ಕೆ...

Photo Credits: @cm_siddaramaiah_fan_bidar (Instagram)

                       @akashvaninewskannada (Instagram)

ಮಾಜಿ ಸಚಿವೆ ಹಾಗೂ ಖ್ಯಾತ ಹಿರಿಯ ನಟಿ ಉಮಾಶ್ರೀ ಅವರು ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸದನದ ನಾಯಕ ಡಾ. ಯತೀಂದ್ರ ಅವರು ಉಮಾಶ್ರೀ ಅವರ ಹೆಸರನ್ನು ಈ ಮಹತ್ವದ ಹುದ್ದೆಗೆ ಪ್ರಸ್ತಾಪಿಸಿದ್ದರು. ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಸದಸ್ಯರು ಒಮ್ಮತದಿಂದ ಈ ಪ್ರಸ್ತಾಪವನ್ನು ಬೆಂಬಲಿಸಿ ಸ್ವಾಗತಿಸಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ: ಬೆಳ್ಳಿಪರದೆಯಲ್ಲಿ 470ಕ್ಕೂ ಹೆಚ್ಚು ಸಿನಿಮಾಗಳ ಸಾಧನೆ…

68 ವರ್ಷದ ಉಮಾಶ್ರೀ ಅವರು ಕನ್ನಡ ರಂಗಭೂಮಿ ಹಾಗೂ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟಿಯಾಗಿದ್ದಾರೆ. ‘ಗುಲಾಬಿ ಟಾಕೀಸ್’ ಚಿತ್ರದ ಅದ್ಭುತ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ತಮ್ಮ ಸುದೀರ್ಘ ನಟನಾ ಪಯಣದಲ್ಲಿ 470ಕ್ಕೂ ಹೆಚ್ಚು ಸಿನಿಮಾಗಳು ಹಾಗೂ 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಎಂಟು ರಾಜ್ಯ ಪ್ರಶಸ್ತಿಗಳು ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗೌರವಗಳಿಗೂ ಉಮಾಶ್ರೀ ಭಾಜನರಾಗಿದ್ದಾರೆ. ಕಿರುತೆರೆಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ನಟನೆಯ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನ ಗೆದ್ದಿದ್ದಾರೆ.

ರಾಜಕೀಯ ಪಯಣ ಮತ್ತು ಸಚಿವ ಗಿರಿ: ತೇರದಾಳದಿಂದ ಶಾಸಕಿಯಾಗಿ ಜನಸೇವೆ…

ಉಮಾಶ್ರೀ ಅವರು ನಟನೆಯ ಜೊತೆಗೆ ರಾಜಕೀಯ ರಂಗದಲ್ಲೂ ಹಲವು ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2001ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಳ್ಳುವ ಮೂಲಕ ಮೇಲ್ಮನೆ ಪ್ರವೇಶಿಸಿದ್ದರು. ನಂತರ 2013ರಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಅಲ್ಲದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡಿದ್ದಾರೆ.

ಭಾವುಕರಾದ ನಟಿ ಉಮಾಶ್ರೀ: ಸಾಧನೆಯನ್ನು ಹೆತ್ತವರಿಗೆ ಅರ್ಪಿಸಿದ ನೂತನ ಉಪಸಭಾಪತಿ…

ಉಮಾಶ್ರೀ ಅವರ ಆಯ್ಕೆಯನ್ನು ಬೆಂಬಲಿಸಿ ಸದನದ 26ಕ್ಕೂ ಹೆಚ್ಚು ಶಾಸಕರು ಮತ್ತು ಸದಸ್ಯರು ಸುದೀರ್ಘವಾಗಿ ಮಾತನಾಡಿದರು. ಅವರನ್ನು ಬಹುಮುಖ ಪ್ರತಿಭೆಯ ನಟಿ ಮತ್ತು ಜನಸೇವೆ ಮಾಡುವ ಉದಾರ ಮನಸ್ಸಿನ ನಾಯಕಿ ಎಂದು ಬಣ್ಣಿಸಿದರು. ಈ ಗೌರವದ ಬಗ್ಗೆ ಮಾತನಾಡಿದ ಉಮಾಶ್ರೀ, “ಇದು ನನ್ನ ಜೀವನದ ಅತ್ಯಂತ ಭಾವುಕ ಕ್ಷಣ” ಎಂದು ಹೇಳಿದ್ದಾರೆ. ತಮ್ಮ ಈ ಉನ್ನತ ಸಾಧನೆಯ ಸಂಪೂರ್ಣ ಶ್ರೇಯಸ್ಸನ್ನು ತಮ್ಮ ಪೋಷಕರಿಗೆ ಅರ್ಪಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ. ಮೇಲ್ಮನೆಯ ಉಪಸಭಾಪತಿಯಾಗಿ ಉಮಾಶ್ರೀ ಅವರು ಹೊಸ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ.