☔ Weather
Bengaluru: ☁️ 25°C | AQI 52
Mysore: ☁️ 26°C | AQI 52
Mangalore: ☁️ 30°C | AQI 86
Bengaluru: ☁️ 25°C | AQI 52

YASH RADHIKA PANDIT LOVE STORY: “ನನ್ನ ಫೇವರಿಟ್ ನೀನು”: ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ 10 ವರ್ಷ, ವೀಡಿಯೋ ವೈರಲ್…

ಕಡಲ ತೀರದಲ್ಲಿ ನೆರವೇರಿದ್ದ ಆ ಶ್ರೇಷ್ಠ ಘಳಿಗೆಗೆ 10 ವರ್ಷ...

Photo Credits: @iamradhikapandit (Instagram)

ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುವ ಅಪರೂಪದ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. ಇಬ್ಬರ ನಡುವಿನ ಸೌಹಾರ್ದಯುತ ಬಾಂಧವ್ಯ ಮತ್ತು ಅನ್ಯೋನ್ಯತೆಯನ್ನು ಕಂಡು ಲಕ್ಷಾಂತರ ಅಭಿಮಾನಿಗಳು ತಮ್ಮ ನಿಜ ಜೀವನಕ್ಕೆ ಸ್ಪೂರ್ತಿಯಾಗಿ ಸ್ವೀಕರಿಸಿದ್ದಾರೆ. ಅಂದು ಗೋವಾದ ಸಮ್ಮೋಹಕ ಸಮುದ್ರದ ದಂಡೆಯಲ್ಲಿ ಉಂಗುರ ಬದಲಾಯಿಸಿಕೊಂಡು ಹೊಸ ಬಾಳಿಗೆ ಕಾಲಟ್ಟ ಈ ಜೋಡಿಯ ನಿಶ್ಚಿತಾರ್ಥಕ್ಕೆ ಈಗ ದಶಕದ ಸಂಭ್ರಮ.

ರಾಧಿಕಾ ಕಂಡಿದ್ದ ಕನಸನ್ನು ನನಸು ಮಾಡಿದ್ದ ಯಶ್‌…

ತಮ್ಮ ಬದುಕಿನ ಅತ್ಯಂತ ಆಪ್ತ ಹಾಗೂ ಮಹತ್ವದ ದಿನವಾದ ನಿಶ್ಚಿತಾರ್ಥದ ಕ್ಷಣಗಳನ್ನು ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ರೀಕಾಲ್ ಮಾಡಿದ್ದಾರೆ. ರಾಧಿಕಾ ಅವರಿಗೆ ತಮ್ಮ ಹುಟ್ಟೂರಾದ ಗೋವಾದ ಸಮುದ್ರ ತೀರದಲ್ಲೇ ನಿಶ್ಚಿತಾರ್ಥ ನೆರವೇರಬೇಕೆಂಬ ಸುಂದರ ಆಸೆಯಿತ್ತು. ಪತ್ನಿಯ ಈ ಕನಸಿನಂತೆಯೇ ಯಶ್ ಅವರು ಕಡಲ ತೀರದಲ್ಲಿ ಮನಮೋಹಕ ಮಂಟಪ ಸೃಷ್ಟಿಸಿ ಅದ್ದೂರಿಯಾಗಿ ಶುಭಕಾರ್ಯ ನೆರವೇರಿಸಿದ್ದರು. ಪ್ರಸಿದ್ಧ ಡಿಸೈನರ್ ಸಾನಿಯಾ ಸರ್ದಾರಿಯಾ ವಿನ್ಯಾಸಗೊಳಿಸಿದ್ದ ಆ ದಿನದ ಉಡುಪುಗಳು ಇಂದಿಗೂ ಟ್ರೆಂಡಿಂಗ್‌ನಲ್ಲಿವೆ. ಆ ಮರೆಯಲಾಗದ ಸಂಭ್ರಮದ ವೀಡಿಯೋ ಹಂಚಿಕೊಂಡ ರಾಧಿಕಾ, “10 ವರ್ಷದ ನಿಶ್ಚಿತಾರ್ಥ, ಜೀವಮಾನವಿಡೀ ಪ್ರೀತಿ… ನನ್ನ ಫೇವರಿಟ್ ನೀನು” ಎಂದು ಬರೆದುಕೊಂಡಿದ್ದಾರೆ.

‘ನಂದಗೋಕುಲ’ ಕಿರುತೆರೆ ಸೀರಿಯಲ್ ನೀಡಿದ ಅಪರೂಪದ ಗೆಳೆತನ…

ಯಶ್ ಮತ್ತು ರಾಧಿಕಾ ಜೋಡಿಯ ಸುದೀರ್ಘ ಒಡನಾಟಕ್ಕೆ ಬರೋಬ್ಬರಿ 21 ವರ್ಷಗಳ ಹಳೆಯ ಬಲವಾದ ಅಡಿಪಾಯವಿದೆ. 2004-05ರ ಅವಧಿಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ ಧಾರಾವಾಹಿ ‘ನಂದಗೋಕುಲ’ ಸೆಟ್‌ನಲ್ಲಿ ಇವರಿಬ್ಬರ ಪರಿಚಯ ಮೊದಲ ಬಾರಿಗೆ ಆಗಿತ್ತು. ಗಮನಾರ್ಹ ವಿಚಾರವೆಂದರೆ ಆ ಸೀರಿಯಲ್‌ನಲ್ಲಿ ಇಬ್ಬರೂ ಒಂದೇ ಮನೆಯ ಜಗಳವಾಡುವ ಸಹೋದರ-ಸಹೋದರಿಯರ ಪಾತ್ರದಲ್ಲಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಯಶ್ ಆರಂಭದಲ್ಲಿ ನವೀನ್ ಎಂಬ ಹೆಸರಿನಿಂದಲೇ ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿ ಹಾಗೂ ‘ಮೊಗ್ಗಿನ ಮನಸು’ ಚಿತ್ರದಲ್ಲಿ ಇಬ್ಬರ ನಟನೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿತ್ತು. ಶೂಟಿಂಗ್ ಸೆಟ್‌ನಲ್ಲಿ ಸಹನಟರಾಗಿ ಶುರುವಾದ ಈ ಬಾಂಧವ್ಯ ಕಾಲಕ್ರಮೇಣ ಗಟ್ಟಿಯಾದ ಸ್ನೇಹವಾಗಿ ಬೆಳೆದು ನಂತರ ಪ್ರೀತಿಗೆ ತಿರುಗಿತು.

ಗಾಂಧಿನಗರದ ರಿಯಲ್ ‘ರಾಮಾಚಾರಿ-ಜೋಡಿ’ಯ ಯಶಸ್ಸಿನ ಪಯಣ…

ಕಿರುತೆರೆಯಿಂದ ಪ್ರಯಾಣ ಬೆಳೆಸಿ ಬೆಳ್ಳಿಪರದೆ ಮೇಲೆ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ ಈ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಯಿತು. ಅಂದು ಸೀರಿಯಲ್ ಶೂಟಿಂಗ್ ದಿನಗಳಲ್ಲಿ ಇವರೊಂದಿಗಿದ್ದ ಆಪ್ತ ಸ್ನೇಹಿತರ ಬಳಗವನ್ನು ಇಂದಿಗೂ ಅಷ್ಟೇ ಮುತವರ್ಜಿಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಯಶ್ ಅವರ ಪ್ರತಿಯೊಂದು ಜಾಗತಿಕ ಮಟ್ಟದ ಕನಸುಗಳಿಗೂ ರಾಧಿಕಾ ಬೆನ್ನೆಲುಬಾಗಿ ನಿಂತು ಸಂಸಾರ ಹಾಗೂ ಮಕ್ಕಳನ್ನು ಪ್ರೀತಿಯಿಂದ ನಿಭಾಯಿಸುತ್ತಿದ್ದಾರೆ. ಇದೀಗ ಬೃಹತ್ ಬಜೆಟ್‌ನ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಯಶ್ ಈ ವಿಶೇಷ ಕ್ಷಣವನ್ನು ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ತಾರೆಯರು ಈ ಕ್ಯೂಟ್ ಜೋಡಿಗೆ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.