ಜೈಲಲಿತಾ ನಟಿ ಮನಸ್ವಿ ಎಕ್ಸ್‌ಕ್ಲೂಸಿವ್ ಇಂಟರ್ವ್ಯೂ

'ಜೈಲಲಿತ' ಸೀರಿಯಲ್ನಲ್ಲಿ ಬಿಂದಾಸ್ ಲಲಿತಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿರುವ ನಟಿ ಮನಸ್ವಿ

Photo Credits: @manasvi_maanu11 (Instagram)

‘ಜೈಲಲಿತ’ ಸೀರಿಯಲ್‌ನಲ್ಲಿ ಬಿಂದಾಸ್ ಲಲಿತಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿರುವ ನಟಿ ಮನಸ್ವಿ ತಮ್ಮ ಸೀರಿಯಲ್ ಜರ್ನಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆರಂಭದಲ್ಲಿ ತಮ್ಮ ನೈಜ ವ್ಯಕ್ತಿತ್ವಕ್ಕೆ ತೀರಾ ಅಪೋಸಿಟ್ ಅನಿಸಿದ್ದ ಲಲಿತಾ ಪಾತ್ರ, ಹೋಗ್ತಾ ಹೋಗ್ತಾ ತಮ್ಮ ಮನಸ್ಸಿಗೆ ತುಂಬಾ ಹತ್ತಿರವಾಯಿತು ಎಂದು ಹೇಳಿಕೊಂಡಿದ್ದಾರೆ. ಸೀರಿಯಲ್‌ನಲ್ಲಿ ಯಶ್ ಫ್ಯಾನ್ ಆಗಿದ್ದ ಲಲಿತಾಗೆ ಈಗ ಜೈ ಮೇಲೆ ಪ್ರೀತಿ ಶುರುವಾಗಿದ್ದು, ಈ ಲವ್ ಟ್ರ್ಯಾಕ್ ಹಾಗೂ ಅತ್ತೆಯ ಆಟಗಳ ಮಧ್ಯೆ ಸಾಗುತ್ತಿರುವ ಕಥೆಯನ್ನು ವೀಕ್ಷಕರು ತುಂಬಾ ಇಷ್ಟಪಡುತ್ತಿದ್ದಾರೆ.

ಕಾಂಪಿಟೇಷನ್‌ಗಾಗಿ ನಡೆದ ಮದುವೆಯಾದರೂ ಜೈ ಮನಸ್ಸಿನಲ್ಲಿ ತಮಗಾಗಿ ಸಾಫ್ಟ್ ಕಾರ್ನರ್ ಇದೆ ಎಂಬ ನಂಬಿಕೆಯಲ್ಲಿರುವ ಮಾನಸ್ವಿ, ಶೂಟಿಂಗ್ ಮಧ್ಯೆಯೂ ಕಾಲೇಜು ಸ್ಟಡೀಸ್ ಮ್ಯಾನೇಜ್ ಮಾಡುತ್ತಿದ್ದಾರೆ. ‘ನಾತಿಚರಾಮಿ’ ಸಿನಿಮಾ ನಂತರ ಸೀರಿಯಲ್‌ಗೆ ಬಂದಾಗ ಸಿಕ್ಕ ಅನುಭವ, ವಿಶೇಷವಾಗಿ ಉತ್ತರ ಕರ್ನಾಟಕದ ಜನರಿಂದ ಸಿಗುತ್ತಿರುವ ಅದ್ಭುತ ಪ್ರೀತಿ ಹಾಗೂ ಪ್ರತಿದಿನ ಶೂಟಿಂಗ್‌ಗೆ ಜೊತೆಯಾಗಿ ಬಂದು ಬೆಂಬಲ ನೀಡುವ ಅಪ್ಪ-ಅಮ್ಮನ ಪ್ರೋತ್ಸಾಹವನ್ನು ಅವರು ನೆನೆದಿದ್ದಾರೆ.

‘ಜೈಲಲಿತ’ ಸೀರಿಯಲ್‌ನ ಈ ಬಿಂದಾಸ್ ಲಲಿತಾ ಪಾತ್ರ ನಿಮಗೆ ಎಷ್ಟು ಹತ್ತಿರ?

ಮನಸ್ವಿ: ನನಗೆ ಬಿಗಿನಿಂಗ್‌ನಲ್ಲಿ ತುಂಬಾ ಹತ್ತಿರ ಏನು ಅನಿಸಿರಲಿಲ್ಲ, ಬಿಕಾಸ್ ನನ್ನದು ಒಂದು ಡೆಡ್ ಆಪೋಸಿಟ್ ಕ್ಯಾರಕ್ಟರ್ ಅದಕ್ಕೆ. ಬಟ್ ಅದಾದ ಮೇಲೆ ತುಂಬಾ ಹತ್ತಿರ ಆಯ್ತು. ನಾನು ಇವಾಗ ಮದುವೆ ಆದ ಮೇಲಿಂದ, ಬಿಗಿನಿಂಗ್ ಎಪಿಸೋಡ್‌ನಲ್ಲಿ ಏನಿತ್ತು ಅದನ್ನೆಲ್ಲ ಮಿಸ್ ಮಾಡಿಕೊಳ್ಳೋದಕ್ಕೆ ಸ್ಟಾರ್ಟ್ ಮಾಡಿದೆ. ಪರ್ಸನಲಿ ನಾನೇ ಮಿಸ್ ಮಾಡಿಕೊಳ್ಳೋದಕ್ಕೆ ಸ್ಟಾರ್ಟ್ ಮಾಡಿದೆ, ಅಷ್ಟು ಹತ್ತಿರ ಆಗಿತ್ತು ನನಗೆ ಆ ಪಾತ್ರ.

ಯಶ್ ಫ್ಯಾನ್ ಆಗಿದ್ದ ಲಲಿತಾಗೆ ಈಗ ಜೈ ಮೇಲೆ ಪ್ರೀತಿ ಶುರುವಾಗಿದೆ. ಈ ಲವ್ ಟ್ರ್ಯಾಕ್ ಅನುಭವ ಹೇಗಿದೆ?

ಮನಸ್ವಿ: ಒಂತರ ಚೆನ್ನಾಗಿದೆ! ಹೆಂಗಂದ್ರೆ ನಾನು ಯಾವಾಗ್ಲೂ ಯಶ್‌ನಾ ಅಂತೂ ಪಡ್ಕೊಳ್ಳೋದಕ್ಕೆ ಆಗಲ್ಲ, ಬಟ್ ಯಶ್ ತರ ಇರೋ ಹುಡುಗನ್ನೇ ಹುಡುಕ್ತಿದ್ದೆ. ಸೋ ಅದೇ ತರ ಇರೋ ಹುಡುಗ ಸಿಕ್ಕಿದ್ದು, ಅಂಡ್ ಅದಾದ ಮೇಲೆ ಒಂದು ಸ್ವಲ್ಪ ದಿನ ಲವ್ ಅಲ್ಲಿ ಬೀಳಿಸಿಕೊಳ್ಳೋದಕ್ಕೆ ತುಂಬಾ ಪ್ರಯತ್ನ ಪಟ್ಟೆ, ಆದ್ರೆ ಅವರೂ ಬೀಳ್ತಿರಲಿಲ್ಲ. ಬಟ್ ಕೊನೆಗೆ ಇವಾಗ ಅವರೂ ನನ್ನ ಮೇಲೆ ಫೀಲಿಂಗ್ಸ್ ವ್ಯಕ್ತಪಡಿಸಿಕೊಂಡಿದ್ದಾರೆ. ಇವಾಗ ಒಂತರ ಚೆನ್ನಾಗಿದೆ ಟ್ರ್ಯಾಕ್, ಚೆನ್ನಾಗ್ ಹೋಗ್ತಾ ಇದೆ.

ಅತ್ತೆ ವಿರೋಧದ ಮಧ್ಯೆ ಚಕ್ರವರ್ತಿ ಮನೆತನದ ಮನ ಗೆಲ್ಲೋಕೆ ಲಲಿತಾ ಪ್ಲಾನ್ ಏನು?

ಮನಸ್ವಿ: ಸದ್ಯಕ್ಕೆ ಏನು ಪ್ಲಾನ್ ಮಾಡಿಲ್ಲ. ಸದ್ಯಕ್ಕೆ ನಮ್ಮ ಅತ್ತೇನೆ ನನ್ನನ್ನ ಆಟ ಆಡಿಸ್ತಾ ಇದ್ದಾರೆ, ನನ್ನ ಹತ್ರ ಇವಾಗ ಪ್ಲಾನ್ ಗಳೆಲ್ಲ ಫ್ಲಾಪ್ ಆಗ್ಬಿಟ್ಟಿದೆ. ನಮ್ಮ ಅತ್ತೆ ಕಾಲ ನಡೀತಾ ಇದೆ ಇವಾಗ, ನೆಕ್ಸ್ಟ್ ಅದಾದ ಮೇಲೆ ನನ್ನ ಸರ್ದಿ ಬಂದಾಗ ಪ್ಲಾನ್ ಮಾಡ್ತೀನಿ.

ಕಾಂಪಿಟೇಷನ್‌ಗಾಗಿ ನಡೆದ ಮದುವೆ ಮುಂದೆ ನಿಜವಾದ ಸಂಸಾರವಾಗೋದು ಹೇಗೆ?

ಮನಸ್ವಿ: ಕಾಂಪಿಟೇಷನ್ ಅವರಿಗೆ ನಡೀತು ಮದುವೆ, ಅಂದ್ರೆ ಅವರ ಪ್ರಕಾರ ಅವರಿಗೆ ಕಾಂಪಿಟೇಷನ್. ಬಟ್ ನಾನು ಮದುವೆ ಆಗ್ಬೇಕಾದ್ರೆ ನಾನು ಫುಲ್ಲು ಎಮೋಷನ್ಸ್ ಇಂದ, ಫೀಲಿಂಗ್ಸ್ ಇಂದಾನೇ ನಾನು ಮದುವೆ ಆದೆ. ಒಂದು ರಿಯಲ್ ಮದುವೆ ನಡೀತಿದೆ, ನನ್ನ ಲೈಫ್‌ನಲ್ಲಿ ನಾನು ಇಷ್ಟಪಟ್ಟಿದ್ದ ಹುಡುಗನ್ ಜೊತೆ ನನ್ನ ಮದುವೆ ನಡೀತಿದೆ, ಜೀವನ ಪೂರ್ತಿ ಇವರ ಜೊತೇನೇ ಸಂಸಾರ ಮಾಡೋದು, ಇವರ ಜೊತೇನೇ ಇರೋದು ಅನ್ಕೊಂಡು ನಾನು ಮದುವೆ ಆದೆ. ನನಗೆ ಕಾಂಪಿಟೇಷನ್ ಅನ್ಸ್ಲಿಲ್ಲ. ನಾನು ಆಸೆ ಪಟ್ಟಿದ್ದು ನನಗೆ ಸಿಕ್ತು. ನಾನು ಸಂಸಾರ ಮಾಡ್ಬೇಕು ಅಂತ ಅನ್ಕೊಂಡಿದ್ದೆ, ಬಟ್ ಅದು ಬೇರೆ ರೀತಿ. ಇವರ ಕಾಂಪಿಟೇಷನ್ ಇಂದ ಅದು ನನಗೆ ತೊಂದರೆ ಆಯ್ತು. ಅಂಡ್ ಅದಾದ ಮೇಲೆ ಪರವಾಗಿಲ್ಲ, ಇವರೆಲ್ಲ ಕಾಂಪಿಟೇಷನ್ ಇದ್ರೂ ಪರವಾಗಿಲ್ಲ, ನನ್ನ ದೊರೆಗೆ ಎಲ್ಲೋ ಒಂದು ಕಡೆ ನನ್ನ ಬಗ್ಗೆ ಸಾಫ್ಟ್ ಕಾರ್ನರ್ ಇದೆ, ನೋಡೋಣ ಅವರಿಗೆ ಮುಂದೆ ನನ್ನ ಬಗ್ಗೆ ಪ್ರೀತಿ ಆಗ ಬಹುದೇನೋ ಅಂತ ನಾನು ಇನ್ನು ಅದೇ ಮನೆಯಲ್ಲಿ ಕಂಟಿನ್ಯೂ ಮಾಡ್ದೆ.

ನಾತಿಚರಾಮಿ ನಂತರ ಇವಾಗ ಬಂದಿರೋ ಜೈಲಲಿತಾಗೆ ಜನರ ರೆಸ್ಪಾನ್ಸ್ ಹೇಗಿದೆ?

ಮನಸ್ವಿ: ತುಂಬಾ ಚೆನ್ನಾಗಿದೆ. ನನಗೆ ಈ ವಿಷಯದಲ್ಲಿ ಉತ್ತರ ಕರ್ನಾಟಕದವರಿಗೆ ತುಂಬಾ ಥ್ಯಾಂಕ್ಸ್ ಹೇಳೋದಕ್ಕೆ ಇಷ್ಟ ಪಡ್ತೀನಿ. ಯಾಕಂದ್ರೆ ನಾನು ಎಲ್ಲೇ ಹೋದ್ರುನು ನನ್ನನ್ನ 100% ಅಲ್ಲಿ 90% ಪೀಪಲ್ ಉತ್ತರ ಕರ್ನಾಟಕದವರೇ ಕಂಡುಹಿಡಿದಿರೋದು. ಉತ್ತರ ಕರ್ನಾಟಕದವರು ಪ್ರತಿಯೊಬ್ಬರೂ ನಮ್ಮ ಸೀರಿಯಲ್ ನೋಡ್ತಾರೆ. ಎಲ್ಲೇ ಒಂದು ದೇವಸ್ಥಾನಕ್ಕೆ ಹೋಗ್ಲಿ, ಯಾರಾದ್ರೂ ಉತ್ತರ ಕರ್ನಾಟಕದವರು ಇದ್ರೆ “ನಾನು ನಿಮ್ಮ ಸೀರಿಯಲ್ ಮೇಡಂ, ನಾನು ನಿಮ್ಮ ಸೀರಿಯಲ್ ಫ್ಯಾನ್, ಜೈಲಲಿತಾ ಅಲ್ವಾ, ನಿಮ್ಮನ್ನ ತುಂಬಾ ಇಷ್ಟಪಡ್ತೀವಿ” ಅಂತಾರೆ. ಅಂಡ್ ನಮ್ಮ ಅತ್ತೆಗೂ ಕೂಡ ಯಾವುದೋ ಒಂದು 81 ವರ್ಷದ ಉತ್ತರ ಕರ್ನಾಟಕದ ಅಜ್ಜಿ ಬಾಯಿಗೆ ಬಂದಂಗೆ ಬೈದಿದ್ದಾರೆ. ಅದು ಅವರೆಲ್ಲೋ ಶಿರಸಿಗೆ ಹೋದಾಗ, ಅವರ ಅಪ್ಪ ಅಂದ್ರೆ ಅವರ ಮಕ್ಕಳು ಅದೇ ಪ್ಲೇಸ್‌ಗೆ ಹೋದಾಗ ವಿಡಿಯೋ ಕಾಲ್ ಮಾಡಿ ಕೊಟ್ಟಿದ್ರಂತೆ ಅವರಿಗೆ, ಅವರು ಅಲ್ಲಿ ವಿಡಿಯೋ ಕಾಲ್‌ನಲ್ಲಿ ಬೈದಿದ್ದಾರಂತೆ. ತುಂಬಾ ಜನರ ರೆಸ್ಪಾನ್ಸ್ ಸಿಕ್ಕಿದೆ ನನಗೆ ತುಂಬಾ ಜನರಿಂದ.

ಸ್ಟಡೀಸ್ ಮತ್ತೆ ಶೂಟಿಂಗ್ ಎರಡನ್ನೂ ಹೇಗೆ ಮ್ಯಾನೇಜ್ ಮಾಡ್ತಿದ್ದೀರಾ?

ಮನಸ್ವಿ: ಸ್ಟಡೀಸ್, ಶೂಟಿಂಗ್ ಇಂದ ಸ್ವಲ್ಪ ಈ ವರ್ಷ ಕಷ್ಟ ಆಗಿದೆ, ನಾನು ಕಾಲೇಜಿಗೆ ಹೋಗಿಲ್ಲ. ಬಟ್ ಯಾವ್ದೋ ಬ್ಯಾಕ್‌ಲಾಗ್ಸ್ ಉಳಿಸ್ಕೊಳ್ಳದೇ ಮ್ಯಾನೇಜ್ ಮಾಡ್ತಾ ಇದ್ದೀನಿ. ಪರ್ಮಿಷನ್ ಎಲ್ಲಾ ಕೇಳಿದ್ದೀನಿ, ನಮ್ಮ ಕಾಲೇಜ್‌ನವರು ಕೂಡ ತುಂಬಾ ಸಪೋರ್ಟಿವ್ ಇದ್ದಾರೆ. ಇಷ್ಟು ದಿನ ಕಾಲೇಜಿಗೆ ಹೋಗಿಲ್ಲ ಅಂದ್ರೂ ಏನು ಕೇಳಲಿಲ್ಲ ನನ್ನನ್ನ. ಬಟ್ ಮ್ಯಾನೇಜ್ ಮಾಡ್ತಾ ಇದ್ದೀನಿ ಹೆಂಗೋ.

Photo Credits: @manasvi_maanu11 (Instagram)

ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ ನಂತರ, ಸೀರಿಯಲ್‌ಗೆ ಬಂದಾಗ ಕಂಡ ವ್ಯತ್ಯಾಸ ಏನು?

ಮನಸ್ವಿ: ಸಿನಿಮಾ, ಸೀರಿಯಲ್… ನಾನು ಫಸ್ಟ್ ಕನಸು ಕಂಡಿದ್ದೆ ಲೈಕ್ ಸಿನಿಮಾ ಮಾಡ್ಬೇಕು ಅಂತ. ಅದಾದ ಮೇಲೆ ಬಟ್ ನನಗೆ ಸ್ಟೇಜ್ ಫಿಯರ್ ಸ್ವಲ್ಪ ಕಮ್ಮಿ ಇತ್ತು. ನಾನು ಜಾಸ್ತಿ ಜನರ ಮಧ್ಯೆ ಬರ್ತಿದ್ದಾಗ ಚಿಕ್ಕವಯಸ್ಸಿಂದನೂ ಅಷ್ಟೇ, ಎಲ್ಲೇ ಹೋದ್ರೂ ಅಪ್ಪ-ಅಮ್ಮನ ಜೊತೇನೇ ಅಥವಾ ಮನೆಯಲ್ಲೇ ಇರೋದು, ಬಾಗಿಲಿಂದ ಹೊರಗಡೆನೂ ಹೋಗ್ತಿರ್ಲಿಲ್ಲ ಹಂಗಿದ್ದೆ. ಸೋ ಅದಕ್ಕೆ ಜನರ ಜೊತೆ ಬೆರೆಯೋದು ಸ್ವಲ್ಪ ಕಷ್ಟ ಆಯ್ತು ನನಗೆ.

ಅದಾದ ಮೇಲೆ ಸಿನಿಮಾ ಮಾಡಿ ಆದಮೇಲೆ ಸೀರಿಯಲ್ ಮಾಡೋಣ, ನನಗೊಂದು ಎಕ್ಸ್‌ಪೀರಿಯನ್ಸ್… ಏಕಂದ್ರೆ ನಾನು ಯಾವ ಆಕ್ಟಿಂಗ್ ಕ್ಲಾಸ್‌ಗೂ ಹೋಗಿಲ್ಲ. ಏನು ಈ ಕಲೆ ಅಂದ್ರೆ ಏನು, ನನ್ನ ಡೆಡಿಕೇಷನ್ ಹೆಂಗ್ ಮಾಡ್ಬೇಕು, ನಾನು ಈ ಕೆಲಸನಾ ಹೆಂಗ್ ಮಾಡ್ಬೇಕು, ಬಿಕಾಸ್ ನಾನು ಅನ್ಕೊಂಡು ಬಂದಿರ್ಲಿಲ್ಲ ನಾನು ಈ ಫೀಲ್ಡಿಗೆ ಬರ್ಬೇಕು ಅಥವಾ ಹೀರೋಯಿನ್ ಆಗ್ಬೇಕು ಅಂತ ನಾನೇನು ಅನ್ಕೊಂಡಿರ್ಲಿಲ್ಲ. ಸೋ ಅದು ಹೆಂಗೋ ಸಿಕ್ತು ನನಗೆ ಅವಕಾಶ. ಸೋ ಈ ಸೀರಿಯಲ್ ಇಂದ ನಾನು ಅದನ್ನ ಕಲ್ತುಕೊಂಡೆ, ಹೆಂಗೆಂಗ್ ಇರ್ಬೇಕು ಅಂತ.

ಅಂಡ್ ಇನ್ನೊಂದು ಡಿಫರೆನ್ಸ್ ಏನಂದ್ರೆ ಸಿನಿಮಾ ಒಂದು ಸ್ಟ್ರೆಚ್‌ನಲ್ಲಿ ಮುಗ್ದೋಗ್ಬಿಡುತ್ತೆ, ನಾಲ್ಕು ದಿನ ಸಿಗ್ತಾರೆ ಆರ್ಟಿಸ್ಟ್‌ಗಳು, ಆಮೇಲೆ ಒಂದು 10 ದಿನದಷ್ಟು ಮೆಮೊರೀಸ್ ಇರುತ್ತೆ, ಆಮೇಲೆ ನಾವೆಲ್ಲೋ ಅವರೇಲ್ಲೋ ಆಗ್ಬಿಡ್ತೀವಿ. ಬಟ್ ಸೀರಿಯಲ್ ಬಂದು ನಮ್ಮ ಮನೆಯವರಿಗಿಂತ ಜಾಸ್ತಿ ಆ ಫ್ಯಾಮಿಲಿ ಜೊತೆನೆ ಟೈಮ್ ಸ್ಪೆಂಡ್ ಮಾಡ್ತೀವಿ. ಬೆಳಿಗ್ಗೆ ಎದ್ರೆ ಶೂಟಿಂಗ್‌ಗೆ, ರಾತ್ರಿ ಮಲ್ಕೊಂಡ್ರೆ ಮನೆಗೆ ಅಷ್ಟೇ. ಸೋ ತುಂಬಾ ಚೆನ್ನಾಗಿರುತ್ತೆ ಸೀರಿಯಲ್‌ನಲ್ಲಿ ವರ್ಕ್ ಮಾಡೋದಕ್ಕೆ, ಎಲ್ಲಾ ಒಂದು ತಿಂಗಳು ಆದಮೇಲೆ ಎಲ್ಲಾ ಕಂಫರ್ಟಬಲ್ ಆಗಿರ್ತೀವಿ, ತುಂಬಾ ಖುಷಿ-ಖುಷಿಯಾಗಿ ವರ್ಕ್ ಮಾಡಬಹುದು. ಅಂಡ್ ಆಕ್ಟಿಂಗ್‌ನಲ್ಲೂ ಒಂದಷ್ಟು ಡಿಫರೆನ್ಸ್ ಇದೆ, ಅದು ತುಂಬಾ ಲ್ಯಾಗ್, ಸಿನಿಮಾ ಶಾರ್ಪ್.

ಶೂಟಿಂಗ್ ಸೆಟ್‌ನಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ಯಾರು? ಹೆಚ್ಚು ಕಾಮಿಡಿ ಮಾಡೋದು ಯಾರು?

ಮನಸ್ವಿ: ಶೂಟಿಂಗ್ ಸೆಟ್‌ನಲ್ಲಿ ಬಂದು ನನಗೆ ಮೀನಾಕ್ಷಿ ಅಕ್ಕ ತುಂಬಾ ಕ್ಲೋಸ್ ಇದ್ದಾರೆ. ಅದು ಬಿಟ್ರೆ ಜೈ ಸ್ವಲ್ಪ ಕ್ಲೋಸ್ ಇದ್ದಾರೆ. ಅಂಡ್ ಜಾಸ್ತಿ ನಾನು ಕಿತ್ತಾಡೋದೇ ಜೈ ಜೊತೆ, ಜಾಸ್ತಿ ಅಂದ್ರೆ ನಮ್ಮದೇ ಸೀನ್ಸ್ ಜಾಸ್ತಿ ನಡೀತಿರುತ್ತೆ ಅಲ್ವಾ, ಸೋ ನಾವ್‌ಗಳೇ ಕಾಮಿಡಿ ಮಾಡ್ಕೋತಾ ಇರ್ತೀವಿ ಯಾವಾಗ್ಲೂ. ಅಕ್ಕ ಬರೋದು ರೇರು, ಅಕ್ಕ ಬಂದ್ರೆ ಅಕ್ಕನ್ ಜೊತೆನೇ ಇರ್ತೀನಿ ಯಾವಾಗ್ಲೂ.

ಮನೆಯವರ ಪ್ರೋತ್ಸಾಹ ಹೇಗಿದೆ?

ಮನಸ್ವಿ: ಅವರಿಗೆ ಫಸ್ಟ್ ಆಫ್ ಆಲ್ ಥ್ಯಾಂಕ್ಸ್ ಹೇಳ್ಬೇಕು, ಯಾಕಂದ್ರೆ ನನ್ನ ಪ್ರತಿಯೊಂದರಲ್ಲೂ ಅವರೇ ಸಪೋರ್ಟ್ ಮಾಡಿ ನನ್ನ ಈ ಫೀಲ್ಡಿಗೆ ಪುಶ್ ಮಾಡಿದ್ದೇ ಅವರು. ನನ್ನ ಡೇ ಒನ್ ಇಂದ ನಾನು ಯಾವಾಗ ನನ್ನ ಜರ್ನಿ ಸ್ಟಾರ್ಟ್ ಮಾಡಿದ್ನೋ ಅವತ್ತಿಂದ ಅಮ್ಮ, ಅಪ್ಪ ಇಬ್ಬರೂ ನನ್ನ ಜೊತೆಲಿದ್ದಾರೆ. ಅಪ್ಪ ಇವತ್ತಿನವರೆಗೂ, ನಾನು ಯಾವಾಗ ಸ್ಟಾರ್ಟ್ ಮಾಡಿದ್ನೋ ಇವತ್ತಿನವರೆಗೂ ಪ್ರತಿದಿನ ನನ್ನ ಜೊತೆ ಸೆಟ್‌ಗೆ ಬರ್ತಾರೆ. ನನ್ನ ಕೆಲಸ ಮುಗಿಯೋವರೆಗೂ ನನ್ನ ಜೊತೆನೇ ಇರ್ತಾರೆ, ಅವರೇ ಕರ್ಕೊಂಡು ಹೋಗ್ತಾರೆ, ಅವರೇ ಕರ್ಕೊಂಡು ಬರ್ತಾರೆ, ಇಡೀ ದಿನ ನನ್ನ ಜೊತೆನೇ ಇರ್ತಾರೆ. ಅಂಡ್ ಏನೇ ನಾನು ಮಾಡ್ಲಿ ಎಲ್ಲದಕ್ಕೂ ಅವರೇ ನಿಂತು ಸಪೋರ್ಟ್ ಮಾಡ್ತಾರೆ. ನನ್ನದೇನಿದ್ರೂ ಅವರೇ ಮಾತಾಡೋದು, ನನ್ನ ಆಕ್ಟಿವಿಟೀಸ್, ನನ್ನ ಡೇಟ್ಸ್ ಆಗಿರ್ಬಹುದು ಅಥವಾ ಸಿನಿಮಾ ಬಗ್ಗೆ ಆಗಿರ್ಬಹುದು, ಅವರೇ ಎಲ್ಲಾ ಮಾಡೋದು.

ನಿಮ್ಮನ್ನ ಪ್ರೀತಿಯಿಂದ ನೋಡ್ತಿರೋ ವೀಕ್ಷಕರಿಗೆ ಏನು ಹೇಳ್ತೀರಾ?

ಮನಸ್ವಿ: ಪ್ರೀತಿಯಿಂದ ನೋಡ್ತಾ ಇದ್ದಾರೆ, ತುಂಬಾ ಪ್ರೀತಿ ಕೊಟ್ಟಿದ್ದಾರೆ. ಥ್ಯಾಂಕ್ ಯು ಸೋ ಮಚ್, ನಮ್ಮ ಸೀರಿಯಲ್ ಯಾರ್ಯಾರು ಅಷ್ಟು ಜನ ಇಷ್ಟಪಟ್ಟು ನೋಡ್ತಾ ಇದ್ದಾರಲ್ಲ ತುಂಬಾ ಥ್ಯಾಂಕ್ಸ್. ಏನಂದ್ರೆ ಕೊನೆ ಪಕ್ಷ ನಾವು ಪಟ್ಟ ಶ್ರಮಕ್ಕೆ ಅವರದ್ದು ರೆಸ್ಪಾನ್ಸ್ ಸಿಕ್ತಲ್ಲ ಅದೇ ಖುಷಿ ನಮಗೆ. ನಾವು ಅಷ್ಟು ಕಷ್ಟಪಟ್ಟು ಜನರು ನೋಡ್ಲಿ ಅಂತ ಮಾಡ್ತೀವಿ, ಜನರ ಪ್ರೀತಿ ಸಿಗ್ಲಿ ಅಂತ ಮಾಡ್ತೀವಿ. ಸೋ ಒಂದಷ್ಟು ಜನ ನಮ್ಮ ಸೀರಿಯಲ್‌ನ ನೋಡಿ ನನ್ನನ್ನ ಗುರುತಿಸ್ತಾ ಇದ್ದಾರೆ, ತುಂಬಾ ಅವರು ಅಕ್ಕಪಕ್ಕದ ಜನರಿಗೆ ಹೇಳ್ತಾರೆ, ತುಂಬಾ ಪ್ರೀತಿ ಕೊಟ್ಟಿದ್ದಾರೆ ನಾನು ಎಲ್ಲೇ ಹೋದ್ರುನು. ಹಿಂಗೆ ಇನ್ನು ಹೆಚ್ಚು ಹೆಚ್ಚು ಜನ ನನ್ನ ಸೀರಿಯಲ್ ನೋಡ್ಲಿ, ಅವರ ಆಶೀರ್ವಾದ ಪ್ರೀತಿ ಯಾವಾಗ್ಲೂ ಇರ್ಲಿ, ಅವರ ಪ್ರೀತಿಗೆ ಯಾವತ್ತೂ ಋಣಿ.