Image: cinehub.ca/Instagram
Jailer 2: ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನ ‘ಜೈಲರ್ 2’ ಸಿನಿಮಾ ಇಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ. ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಇರುವಾಗಲೇ, ಈ ಸಿನಿಮಾದ ಒಟಿಟಿ ಬಿಡುಗಡೆ ಹಾಗೂ ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ದೊಡ್ಡ ತಾರಾಗಣ ಹಾಗೂ ಸೂಪರ್‌ಸ್ಟಾರ್‌ಗಳ ಮಿಂಚಿಂಗ್
‘ಜೈಲರ್ 2’ ಚಿತ್ರದಲ್ಲಿ ನಿರ್ದೇಶಕ ನೆಲ್ಸನ್ ಬೃಹತ್ ತಾರಾಗಣವನ್ನೇ ತೆರೆಗೆ ತಂದಿದ್ದಾರೆ. ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಹಾಗೂ ರಮ್ಯಾ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಹೃತಿಕ್ ರೋಷನ್ ಮತ್ತು ವಿಜಯ್ ಸೇತುಪತಿ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ.
350 ಕೋಟಿ ರೂ. ಬಜೆಟ್ ಮತ್ತು ದಂಗುಬಡಿಸುವ ಪ್ರಿ-ಬಿಸಿನೆಸ್
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ಈ ಚಿತ್ರವನ್ನು ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಬರೋಬ್ಬರಿ 302 ಕೋಟಿ ರೂಪಾಯಿಗಳ ಭಾರಿ ಪ್ರಿ-ರಿಲೀಸ್ ಬಿಸಿನೆಸ್ ಮಾಡಿದೆ. ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ಹಾಗೂ ಬಿಜಿಎಂ ಚಿತ್ರದ ಪ್ರಮುಖ ಶಕ್ತಿಯಾಗಿ ಮೂಡಿಬಂದಿದೆ.
ಇದನ್ನು ಓದಿ: Jailer 2: ಒನ್ಗಿಂತಲೂ ಸಖತ್ ಆಗಿದೆ ಜೈಲರ್ 2; ಶಿವಣ್ಣ-ರಜಿನಿ ಅಬ್ಬರಕ್ಕೆ ಫ್ಯಾನ್ಸ್ ಖುಷ್
ದಾಖಲೆ ಬೆಲೆಗೆ ಒಟಿಟಿ ಹಕ್ಕುಗಳನ್ನು ಪಡೆದ ಅಮೆಜಾನ್ ಪ್ರೈಮ್
‘ಜೈಲರ್ 2’ ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕುಗಳಿಗಾಗಿ ಪ್ರಮುಖ ಒಟಿಟಿ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಜಾಗತಿಕ ದೈತ್ಯ ಸಂಸ್ಥೆಯಾದ ‘ಅಮೆಜಾನ್ ಪ್ರೈಮ್ ವಿಡಿಯೋ’ ದಾಖಲೆಯ ಬೆಲೆಗೆ ಈ ಚಿತ್ರದ ಒಟಿಟಿ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಶೀಘ್ರದಲ್ಲೇ ಪ್ರೈಮ್ ವಿಡಿಯೋ ಸಂಸ್ಥೆಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಿದೆ.
Jailer 2: ಒಟಿಟಿಯಲ್ಲಿ ಸಿನಿಮಾ ಯಾವಾಗ ಸ್ಟ್ರೀಮಿಂಗ್ ಆಗಲಿದೆ?
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 4 ವಾರಗಳ ನಂತರ ಒಟಿಟಿಯಲ್ಲಿ ಪ್ರಸಾರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಲೆಕ್ಕಾಚಾರದ ಪ್ರಕಾರ ನವೆಂಬರ್ ಮಧ್ಯಭಾಗದಲ್ಲಿ ‘ಜೈಲರ್ 2’ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆಯಿದೆ. ಆದರೆ ಥಿಯೇಟರ್‌ನಲ್ಲಿ ಕಲೆಕ್ಷನ್ ಭರ್ಜರಿಯಾಗಿದ್ದರೆ ಒಟಿಟಿ ಬಿಡುಗಡೆ ದಿನಾಂಕ ಕೊಂಚ ಮುಂದೂಡಲ್ಪಡಬಹುದು.




