‘FATHER MOVIE TEASER’: ಅಪ್ಪ-ಮಗನ ಎಮೋಷನಲ್ ಜರ್ನಿ ಸ್ಟಾರ್ಟ್

'ಫಾದರ್' ಟೀಸರ್ ಔಟ್'

Photo Credits: @rcstudiosofficiall (Instagram)

ಕನ್ನಡದ ಬಹುನಿರೀಕ್ಷಿತ ‘ಫಾದರ್’ ಸಿನಿಮಾದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಅಪ್ಪ ಹಾಗೂ ಮಗನ ಭಾವನಾತ್ಮಕ ಅನುಬಂಧವನ್ನು ಸಾರುವ ಈ ಟೀಸರ್ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ.

ಸಿನಿಮಾಗಳಲ್ಲಿ ಹೆಚ್ಚಾಗಿ ಅಮ್ಮನ ಸೆಂಟಿಮೆಂಟ್ ಹೈಲೈಟ್ ಆಗುವುದು ಸಹಜ. ಆದರೆ ಈ ಚಿತ್ರದಲ್ಲಿ ಅಪ್ಪನ ಮಹತ್ವ ಹಾಗೂ ತ್ಯಾಗವನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ.

ಟೀಸರ್‌ನಲ್ಲಿರುವ ಪ್ರಕಾಶ್ ರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಎರಡು ಪ್ರಮುಖ ಡೈಲಾಗ್‌ಗಳು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಿವೆ. ಹೆಚ್ಚಾಗಿ ಎಕ್ಸ್‌ಪ್ರೆಶನ್ಸ್‌ ಮೂಲಕವೇ ಈ ಟೀಸರ್ ಗಮನ ಸೆಳೆಯುತ್ತಿದೆ.

ಅಪ್ಪನಾಗಿ ಸೌಮ್ಯ ಪಾತ್ರದಲ್ಲಿ ನಟಿಸಿದ ಪ್ರಕಾಶ್ ರಾಜ್

‘ಫಾದರ್’ ಸಿನಿಮಾದ ಟೀಸರ್ ಪ್ರಕಾಶ್ ರಾಜ್ ಅವರ ಪಾತ್ರದ ಮೂಲಕವೇ ಶುರುವಾಗುತ್ತದೆ. ಕನ್ನಡಕ, ಸ್ವೆಟರ್, ಕ್ಯಾಪ್ ಧರಿಸಿ ಪಕ್ಕಾ ಸಾಮಾನ್ಯ ಕುಟುಂಬದ ಸೌಮ್ಯ ಸ್ವಭಾವದ ಅಪ್ಪನಂತೆ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಪ್ರಕಾಶ್ ರಾಜ್ ಅವರು ತಮ್ಮ ಮಗನಿಗೆ ಒಂದು ಭಾವನಾತ್ಮಕ ಪತ್ರ ಬರೆಯುತ್ತಾರೆ. “ಮುಂದಿನ ಜನ್ಮ ಅಂತ ಇದ್ದರೆ ಮತ್ತೆ ನಾನು ನಿನ್ನ ಅಪ್ಪನಾಗಿಯೇ ಹುಟ್ಟುತ್ತೇನೆ” ಎನ್ನುವ ಸಾಲು ಎಲ್ಲರ ಹೃದಯ ತಟ್ಟುತ್ತದೆ.

ಇನ್ನೊಂದೆಡೆ ಮಳೆಯನ್ನೂ ಲೆಕ್ಕಿಸದೆ ಬೈಕ್‌ನಲ್ಲಿ ಅಪ್ಪನನ್ನು ಹುಡುಕಿಕೊಂಡು ರೇಲ್ವೆ ಸ್ಟೇಷನ್‌ಗೆ ಓಡುವ ಮಗನಾಗಿ ಡಾರ್ಲಿಂಗ್ ಕೃಷ್ಣ ಮಿಂಚಿದ್ದಾರೆ.

Photo Credits: @rcstudiosofficiall (Instagram)

“ನನ್ನ ಅಪ್ಪನಾಗಿ ಮುಂದಿನ ಜನ್ಮದಲ್ಲೂ ನೀನೇ ಬರ್ತಿಯಾ?”

ರೇಲ್ವೆ ಸ್ಟೇಷನ್‌ನ ಫ್ಲ್ಯಾಟ್‌ಫಾರ್ಮ್ ಬೆಂಚ್ ಮೇಲೆ ಕುಳಿತಿರುವ ಪ್ರಕಾಶ್ ರಾಜ್ ಪಕ್ಕ ಬಂದು ಕುಳಿತುಕೊಳ್ಳುವ ಕೃಷ್ಣ, ಒಂದು ಭಾವುಕ ಪ್ರಶ್ನೆ ಕೇಳುತ್ತಾರೆ.

“ಪತ್ರದಲ್ಲಿ ಮತ್ತೆ ಹುಟ್ಟಿ ಬರ್ತೀನಿ ಅಂತ ಬರೆದಿದ್ದೀಯ ಅಲ್ವಾ, ಮುಂದಿನ ಜನ್ಮದಲ್ಲೂ ನನ್ನ ಅಪ್ಪನಾಗಿ ನೀನೇ ಬರ್ತಿಯಾ ಅಂತ ಗ್ಯಾರಂಟಿ ಕೊಡು” ಎಂದು ಕೃಷ್ಣ ಕೇಳುವ ಸೀನ್ ಟೀಸರ್‌ನ ಹೈಲೈಟ್.

ಅಪ್ಪ-ಮಗನ ನಡುವಿನ ಈ ಅಪರೂಪದ ಅಟ್ಯಾಚ್‌ಮೆಂಟ್ ಪ್ರೇಕ್ಷಕರಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಚಿತ್ರತಂಡದ ಕಂಪ್ಲೀಟ್ ವಿವರ ಇಲ್ಲಿದೆ

ಈ ಭಾವನಾತ್ಮಕ ಕಥಾಹಂದರ ಹೊಂದಿರುವ ‘ಫಾದರ್’ ಸಿನಿಮಾವನ್ನು ರಾಜಮೋಹನ್ ನಿರ್ದೇಶನ ಮಾಡಿದ್ದಾರೆ. ಪ್ರಸಿದ್ಧ ನಿರ್ದೇಶಕ ಆರ್. ಚಂದ್ರು ತಮ್ಮ ‘ಆರ್ ಸಿ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ.

ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತವಿದ್ದು, ಸುಜ್ಞಾನ್ ಛಾಯಾಗ್ರಹಣ ಮಾಡಿದ್ದಾರೆ. ಪ್ರಕಾಶ್ ರಾಜ್, ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಆದಷ್ಟು ಬೇಗ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ತಿಳಿಸಿದೆ.