Drummer Deva: ‘ಕನ್ನಡದ ಶಿವಮಣಿ’ (Kannada Sivamani)ಎಂದೇ ಪ್ರಸಿದ್ಧಿ ಪಡೆದಿದ್ದ ಹಿರಿಯ ಹಾಗೂ ಖ್ಯಾತ ಡ್ರಮ್ಮರ್ ದೇವ ಅವರು ಶನಿವಾರ (ಸೆಪ್ಟೆಂಬರ್ 26) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 64ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಮೂರೂವರೆ ವರ್ಷಗಳಿಂದ ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಗ್ಯಾಂಗ್ರಿನ್ ಸಮಸ್ಯೆಯಿಂದಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೂ ಧೃತಿಗೆಡದೆ ಕೃತಕ ಕಾಲಿನ ಸಹಾಯದಿಂದಲೇ ಡ್ರಮ್ಸ್ ನುಡಿಸುವುದನ್ನು ಮುಂದುವರಿಸಿದ್ದರು.
ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಮನೆಗೆ ಮರಳಿದ್ದರು. ಆದರೆ ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
300ಕ್ಕೂ ಹೆಚ್ಚು ಹಾಡುಗಳಿಗೆ ಡ್ರಮ್ಸ್ ನುಡಿಸಿದ್ದ ದೇವ
ಡ್ರಮ್ಮರ್ ದೇವ ಅವರು ಕನ್ನಡ ಚಿತ್ರರಂಗದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ವರನಟ ಡಾ. ರಾಜ್ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವು ನಟರ 300ಕ್ಕೂ ಹೆಚ್ಚು ಹಾಡುಗಳಿಗೆ ಅವರು ಡ್ರಮ್ಸ್ ಬಾರಿಸಿದ್ದಾರೆ.
ಸಾಧುಕೋಕಿಲ ಮತ್ತು ಗುರುಕಿರಣ್ ಅವರಂತಹ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಇವರು ಕೆಲಸ ಮಾಡಿದ್ದಾರೆ. ಕೇವಲ ಡ್ರಮ್ಮರ್ ಆಗಿ ಮಾತ್ರವಲ್ಲದೆ, ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹಿಂಗ್ಯಾಕೆ’ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.
Drummer Deva: ಕೊನೆ ಗಳಿಗೆಯಲ್ಲೂ ಬಿಡದ ಡ್ರಮ್ಸ್ ಪ್ರೀತಿ
ದೇವ ಅವರ ಮಗಳು ರಿಶೋನಾ ಅವರು ತಂದೆಯ ಅಗಲಿಕೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ನನ್ನ ತಂದೆಗೆ ಡ್ರಮ್ಸ್ ಎಂದರೆ ಅತ್ಯಂತ ಪ್ರಾಣವಾಗಿತ್ತು. ಆಸ್ಪತ್ರೆಯ ಬೆಡ್ ಮೇಲಿದ್ದಾಗಲೂ ಅವರು ಕೈಗೆ ಸ್ಟಿಕ್ಸ್ ಕೊಡಿ ಎಂದು ಕೇಳುತ್ತಿದ್ದರು. ಕೈಯಲ್ಲೇ ಡ್ರಮ್ಸ್ ನುಡಿಸುವ ಅಭ್ಯಾಸ ಮಾಡುತ್ತಿದ್ದರು’ ಎಂದು ಮಗಳು ಭಾವುಕರಾಗಿ ನೆನೆದಿದ್ದಾರೆ.
ಇಂದು ಕ್ರೈಸ್ತ ಪದ್ಧತಿಯಂತೆ ಅಂತ್ಯಕ್ರಿಯೆ
ಸಾಧಕ ಡ್ರಮ್ಮರ್ ದೇವ ಅವರ ಅಂತ್ಯಕ್ರಿಯೆಯನ್ನು ಭಾನುವಾರ (ಸೆಪ್ಟೆಂಬರ್ 27) ಮಧ್ಯಾಹ್ನ 3 ಗಂಟೆಗೆ ನೆರವೇರಿಸಲಾಗುತ್ತದೆ. ಬೆಂಗಳೂರಿನಲ್ಲಿ ಕ್ರೈಸ್ತ ಪದ್ಧತಿಯಂತೆ ಅವರ ಅಂತಿಮ ಸಂಸ್ಕಾರ ಕಾರ್ಯಗಳು ನಡೆಯಲಿವೆ.




