☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Bigg Boss Kannada: ‘ರೌಡಿʼ ಮಂಜನ ಮನೆಯಿಂದ ಹೊರಹಾಕಿದ ಬಿಗ್​​ಬಾಸ್: ಸಿಹಿ ತಿಂದ ಸ್ಪರ್ಧಿಗಳು

Bigg Boss Kannada

ನ್ಯಾಯದಾನದಲ್ಲಿ ವಿಳಂಬ ಆಗಬಹುದು ಆದರೆ ಅನ್ಯಾಯ ಆಗದು ಎಂಬುದನ್ನು ಬಿಗ್​​ಬಾಸ್ (Bigg Boss Kannada) ಸಾಬೀತು ಮಾಡಿದ್ದಾರೆ. ನಿನ್ನೆ (ಶನಿವಾರ) ಎಪಿಸೋಡಿನಲ್ಲಿ ಮಂಜನಿಗೆ ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ, ಮಂಜ ಮಾಡಿರುವ ಕೃತ್ಯಕ್ಕೆ, ಆಡಿರುವ ಮಾತುಗಳಿಗೆ ಅವನನ್ನು ಹೊರಗೆ ಕಳಿಸಲಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡುತ್ತಿದ್ದವು. ಜನರ ಭಾವನೆಗಳು ಸಹ ಮಂಜನ ವಿರುದ್ಧವಾಗಿಯೇ ಇದ್ದವು. ಆದರೆ ಆಶ್ಚರ್ಯಕರ ರೀತಿಯಲ್ಲಿ ಸುದೀಪ್ ಅವರು ಮಂಜನ ವಿಷಯವಾಗಿ ಹೆಚ್ಚು ಚರ್ಚಿಸಲೇ ಇಲ್ಲ. ಬದಲಿಗೆ ಅವರಿಗೆ ಪಶ್ಚಾತ್ತಾಪಕ್ಕೆ ಅವಕಾಶ ಮಾಡಿಕೊಟ್ಟಂತಿತ್ತು. ತಪ್ಪು ಮಾಡಿದವನಿಗೆ ಶಿಕ್ಷೆ ಏಕಿಲ್ಲ ಎಂಬ ಅನುಮಾನವೂ ಸಹ ಪ್ರೇಕ್ಷಕರಲ್ಲಿ ಮೂಡಿದ್ದುಂಟು ಆದರೆ ಇಂದು ಮಂಜನಿಗೆ ಶಿಕ್ಷೆ ದೊರೆತಿದೆ.

ಪದೇ ಪದೇ ಎಚ್ಚರಿಕೆ

ಸುದೀಪ್ ಅವರ ಎಪಿಸೋಡ್ ಮುಗಿದ ಕೂಡಲೇ ಮಂಜನನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ‘ಪದೇ ಪದೇ ಎಚ್ಚರಿಕೆ ನೀಡಿದರೂ ಸಹ ನೀವು ಅವಾಚ್ಯ ಶಬ್ದಗಳನ್ನು ಬಳಸಿ ಮನೆ ಮಂದಿಯ ಚಾರಿತ್ಯಕ್ಕೆ ಹಾನಿ ಮಾಡಿದ್ದೀರಿ ಹಾಗಾಗಿ ನೀವು ಮನೆಯಿಂದ ಹೊರಗೆ ಹೋಗಬೇಕಾಗಿದೆ’ ಎಂದಿದ್ದಾರೆ ಬಿಗ್​​ಬಾಸ್. ಅದರಂತೆ ಮಂಜನೂ ಸಹ ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಗೆ ಹೋಗಿದ್ದಾನೆ. ಮಂಜನನ್ನು ಮನೆಯಿಂದ ಹೊರಗೆ ಹಾಕಿದ್ದು ಮನೆಯ ಕೆಲ ಸ್ಪರ್ಧಿಗಳಿಗೆ ಖುಷಿ ತಂದಿದೆ. ವಿಶೇಷವಾಗಿ ಯಶಸ್​​ ಅಂತೂ ಮಂಜ ಮನೆಯಿಂದ ಹೊರಗೆ ಹೋದ ಕೂಡಲೇ ಸಿಹಿ ತಿಂದು ಸಂಭ್ರಮಿಸಿದ್ದಾರೆ. ಆಸಿಯಾ. ಪ್ರಶಾಂತ್ ಇನ್ನೂ ಕೆಲವರು ಸಹ ಸಂಭ್ರಮಪಟ್ಟಿದ್ದಾರೆ.

ಮಂಜ ಮಾಡಿದ್ದೇನು?

ಮಂಜನಿಗೆ ಅಗತ್ಯವಾದ ಶಿಕ್ಷೆಯೇ ದೊರೆತಿದೆ. ಮಂಜ ಆಡಿದ್ದ ಮಾತುಗಳು, ಮಾಡಿದ ಆಟಾಟೋಪ, ತೀರಾ ಕ್ರೌರ್ಯವನ್ನು ಆತ ಕೆಲ ಸ್ಪರ್ಧಿಗಳ ಮೇಲೆ ಮೆರೆದಿದ್ದ. ಕಿರಣ್ ಅನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಕೊಂಡು ಅವನ ಕಣ್ಣಿಗೆ ಹಾನಿ ಮಾಡಿದ್ದು ಮಾತ್ರವಲ್ಲದೆ ವೈದ್ಯರು ಕೊಟ್ಟಿದ್ದ ಕಣ್ಣಿಗೆ ಹಾಕುವ ಔಷಧವನ್ನು ಬಿಸಾಡಿದ್ದ. ಯಶಸ್​​ ಮೇಲಂತೂ ತೀರಾ ವೈಯಕ್ತಿಕ ದಾಳಿ ಮಾಡಿದ್ದ. ಅವರ ಕುಟುಂಬದವರ ಬಗ್ಗೆ ಎಲ್ಲ ಕೆಟ್ಟದಾಗಿ ಮಾತನಾಡಿದ್ದ. ಯಶಸ್​​ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದ. ಟಾಸ್ಕ್​​ಗಳ ಸಂದರ್ಭದಲ್ಲಿ ಸಹ ಪ್ರಾಪರ್ಟಿಗಳನ್ನು ಮುರಿದು, ಬಿಗ್​​ಬಾಸ್​​ಗೆ ಅಗೌರವದಿಂದ ನಡೆದುಕೊಂಡಿದ್ದ. ಮಂಜನ ವರ್ತನೆ ಪ್ರೇಕ್ಷಕರಿಗೆ ಅತ್ಯಂತ ಬೇಸರ ತರಿಸಿತ್ತು. ಈಗ ಮಂಜ ಮಾಡಿದ ಕಾರ್ಯಕ್ಕೆ ಅವನಿಗೆ ತಕ್ಕ ಶಿಕ್ಷೆ ಆಗಿದ್ದು, ಮಂಜನನ್ನು ಬಿಗ್​​ಬಾಸ್ ಹೊರಗೆ ಕಳಿಸಿದ್ದಾರೆ.

ಮಂಜ ಮನೆಯಿಂದ ಹೊರಗೆ ಹೋಗುತ್ತಿರುವ ಪ್ರೋಮೊ ಅನ್ನು ಕಲರ್ಸ್ ವಾಹಿನಿ ಪ್ರಸಾರ ಮಾಡಿದೆ. ಮಂಜ ಹೊರಗೆ ಹೋಗುತ್ತಿದ್ದಂತೆ ಮನೆಯ ಕೆಲವರು ಸಂಭ್ರಮಾಚರಣೆ ಮಾಡಿದ್ದಾರೆ. ಅಂದಹಾಗೆ ಕೆಲ ಮೂಲಗಳ ಪ್ರಕಾರ, ಇಂದು (ಭಾನುವಾರ) ಕೆಲ ಹೊಸ ಸ್ಪರ್ಧಿಗಳ ಎಂಟ್ರಿ ಸಹ ಬಿಗ್​​ಬಾಸ್ ಮನೆಗೆ ಆಗಲಿದೆಯಂತೆ. ಹೊಸ ಸೆಲೆಬ್ರಿಟಿಗಳು ಬರಲಿದ್ದಾರಾ ಅಥವಾ ಅಗ್ನಿ ಪರೀಕ್ಷೆಗೆ ಹಾಜರಾಗಿದ್ದ ಸ್ಪರ್ಧಿಗಳು ಬರಲಿದ್ದಾರಾ ಕಾದು ನೋಡಬೇಕಿದೆ.