ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಇರುವುದು ಸುಲಭದ ಕಾರ್ಯವಲ್ಲ. ಮನೆಯಿಂದ ದೂರ, ಹೊಗಿನ ಪ್ರಪಂಚದಿಂದ ದೂರ, ಸಮಯ ಎಷ್ಟಾಗಿದೆಯೋ ತಿಳಿಯುವುದಿಲ್ಲ ಒಂದು ರೀತಿ ಜೈಲು ವಾಸವೇ. ಇಂಥಹ ಸನ್ನಿವೇಶಗಳಲ್ಲಿ ವ್ಯಕ್ತಿಯ ಒಳಗೆ ಸಾಕಷ್ಟು ಭಾವನಾತ್ಮಕ ಬದಲಾವಣೆಗಳು ಆಗುತ್ತವೆ. ಮನೆಯ ನೆನಪು ವಿಪರೀತ ಕಾಡುತ್ತದೆ. ಆದರೆ ಬಿಗ್‌ಬಾಸ್, ಸಾಧ್ಯವಾದಷ್ಟೂ ಸ್ಪರ್ಧಿಗಳು ಸಮಚಿತ್ತದಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಇದಕ್ಕೆ ತಾಜಾ ಉದಾಹರಣೆ, ಕಿರಣ್ ಶಾಸ್ತ್ರಿ ಮಾಡಿದ ಕಾರ್ಯಕ್ಕೆ ಬಿಗ್‌ಬಾಸ್ ಪ್ರತಿಕ್ರಿಯಿಸಿದ ರೀತಿ, ನೀಡಿದ ಧೈರ್ಯ.
ಕಿರಣ್ ಶಾಸ್ತ್ರಿ ಅವರ ತಾಯಿ ಅನಾರೋಗ್ಯ ಪೀಡಿತರಾಗಿದ್ದರಂತೆ. ಶಾಸ್ತ್ರಿ ಬಿಗ್‌ಬಾಸ್ ಮನೆಗೆ ಬರುವ ಮುಂಚೆಯೇ ಅವರಿಗೆ ಅನಾರೋಗ್ಯ ಆಗಿತ್ತು. ಈ ವಾರ ಕಿರಣ್ ಶಾಸ್ತ್ರಿ ಅವರಿಗೆ ಮನೆಯ ನೆನಪು ತೀವ್ರವಾಗಿ ಕಾಡಿದ್ದಲ್ಲದೆ, ತಮ್ಮ ತಾಯಿ ಅನಾರೋಗ್ಯದ ಸಮಯದಲ್ಲಿ ತಾವು ಇಲ್ಲಿರುವುದರ ಬಗ್ಗೆ ಖುದ್ದು ಅವರಿಗೇ ವಿಷಾಧ ಎನಿಸಿದೆ. ತಾಯಿಗೆ ಆಪರೇಷನ್ ಸಹ ಆಗಬೇಕಿತ್ತು ಎಂದು ನೆನಪು ಮಾಡಿಕೊಂಡ ಶಾಸ್ತ್ರಿ, ಕಣ್ಣೀರು ಹಾಕಿದರು. ಬಳಿಕ ವಸ್ತುಗಳು ಬರುವ ಕೋಣೆಗೆ ಹೋಗಿ, ತಮ್ಮ ಚಿನ್ನದ ಓಲೆಗಳನ್ನು ತೆಗೆದು ಅಲ್ಲಿ ಟೇಬಲ್ ಮೇಲೆ ಇರಿಸಿ, ಈ ಚಿನ್ನದ ಓಲೆಗಳನ್ನು ನಮ್ಮ ಅಮ್ಮನಿಗೆ ತಲುಪಿಸಿಬಿಡಿ ಅವರಿಗೆ ಸಹಾಯ ಆಗುತ್ತದೆ ಎಂದು ಬಿಗ್‌ಬಾಸ್ ಬಳಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: Aryavardhan Prediction: ಕನ್ನಡದ ಆ ಟಾಪ್ ನಟನ ಮಾರ್ಕೆಟ್ ಧೂಳೀಪಟ?
ಅದಾದ ಸ್ವಲ್ಪ ಹೊತ್ತಿಗೆ ಬಿಗ್‌ಬಾಸ್, ಕಿರಣ್ ಅವರನ್ನು ಸೀಕ್ರೆಟ್ ರೂಮಿಗೆ ಕರೆದರು. ‘ನಿಮ್ಮ ತಾಯಿ ಅವರೊಟ್ಟಿಗೆ ನಮ್ಮ ತಂಡ ನಿರಂತರ ಸಂಪರ್ಕದಲ್ಲಿದೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ನೀವು ಯಾವುದೇ ಕಾರಣಕ್ಕೂ ಚಿಂತೆ ಮಾಡುವುದು ಬೇಡ’ ಎಂದರು. ಬಳಿಕ ಕಿರಣ್, ‘ಆದರೆ ನಾನು ಇಲ್ಲಿಗೆ ಬರುವಾಗ ತಾಯಿಗೆ ಯಾವುದೇ ಹಣ ನೀಡಿಲ್ಲ, ನಾನು ನಿಮಗೆ ಕೊಟ್ಟಿರುವ ಓಲೆಯನ್ನು ಅಮ್ಮನಿಗೆ ತಲುಪಿಸಿಬಿಡಿ, ಅವರಿಗೆ ಸಹಾಯ ಆಗುತ್ತದೆ’ ಎಂದರು ಶಾಸ್ತ್ರಿ.
ಅಭಯ ನೀಡಿದ ಬಿಗ್‌ಬಾಸ್
ಅದಕ್ಕೆ ಪ್ರತಿಕ್ರಿಯಿಸಿದ ಬಿಗ್‌ಬಾಸ್, ‘ನಾವು ಈಗಾಗಲೇ ಹೇಳಿರುವಂತೆ ನಿಮ್ಮ ತಾಯಿ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಅವರ ಹಣಕಾಸಿನ ಸಮಸ್ಯೆ ಬಗ್ಗೆ ಸಹ ನೀವು ಚಿಂತೆ ಮಾಡುವ ಅಗತ್ಯ ಇಲ್ಲ’ ಎಂದರು. ಬಿಗ್‌ಬಾಸ್ ನೀಡಿದ ಅಭಯದಿಂದ ಕಿರಣ್ ಶಾಸ್ತ್ರಿ ಕಣ್ಣೀರು ಹಾಕಿದರು. ‘ಹಣಕ್ಕಾಗಿ ಚಿಂತೆ ಮಾಡುವ ಅಗತ್ಯ ಇಲ್ಲ’ ಎಂದು ಬಿಗ್‌ಬಾಸ್ ಹೇಳಿದ್ದು, ಕಿರಣ್ ಶಾಸ್ತ್ರಿಗೆ ಅಪಾರ ಧೈರ್ಯ ನೀಡಿತು ಹಾಗೂ ಮನೆಯಲ್ಲಿ ನೆಮ್ಮದಿಯಿಂದ ಆಟ ಆಡಲು ಸಹಾಯ ಮಾಡಿತು.




