Photo Credits: @ashwinigowda_actress (Instagram)
‘ಬಿಗ್ ಬಾಸ್ ಕನ್ನಡ ಸೀಸನ್-12’ರಲ್ಲಿ ರನ್ನರ್ ಅಪ್ ಪಟ್ಟ ಗೆದ್ದಿದ್ದ ನಟಿ ಅಶ್ವಿನಿ ಗೌಡ ಇದೀಗ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ರಿಯಾಲಿಟಿ ಶೋ ಮುಗಿದ ನಂತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅವರು, ಬರೋಬ್ಬರಿ ಐದು ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಹೊಸ ಧಾರಾವಾಹಿಯಲ್ಲಿ ಪವರ್ಫುಲ್ ಪಾತ್ರದ ಮೂಲಕ ಅವರು ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದು, ಸಖತ್ ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಸೀಸನ್ 12ರಲ್ಲಿ ಕಂಟೆಂಟ್ ಕ್ವೀನ್ ಆಗಿದ್ದ ಅಶ್ವಿನಿ ಗೌಡ…
ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಅಶ್ವಿನಿ ಗೌಡ ಪ್ರತಿಯೊಂದು ವಿಚಾರದಲ್ಲೂ ತಮ್ಮದೇ ಆದ ಸ್ಪಷ್ಟ ನಿಲುವು ತೆಗೆದುಕೊಂಡಿದ್ದರು. ಹಾಸ್ಯನಟ ಗಿಲ್ಲಿ ನಟರಾಜ್ ಅವರೊಂದಿಗಿನ ಜಿದ್ದಾಜಿದ್ದಿ ಹಾಗೂ ಮ್ಯುಟೆಂಟ್ ರಘು ಜೊತೆಗಿನ ಡ್ಯಾನ್ಸ್ ಪ್ರೇಕ್ಷಕರ ಗಮನ ಸೆಳೆದಿತ್ತು. ರಕ್ಷಿತಾ ಶೆಟ್ಟಿ ಅವರೊಂದಿಗಿನ ಕಿರಿಕ್ಗಳ ನಡುವೆಯೂ ತಮ್ಮ ಬೋಲ್ಡ್ ಆಟದ ಮೂಲಕವೇ ಅವರು ‘ಸ್ಟಾಂಡ್ಔಟ್’ ಸ್ಪರ್ಧಿಯಾಗಿದ್ದರು. ತಮ್ಮ ರಗಡ್ ಆಟದ ಮೂಲಕ ಕನ್ನಡಿಗರ ಮನಗೆದ್ದು ಅಂತಿಮವಾಗಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ರಿಯಾಲಿಟಿ ಶೋ ಮೂಲಕ ಬಿಗ್ ಫ್ಯಾನ್ ಬೇಸ್ ಸಂಪಾದಿಸಿಕೊಂಡ ಅಶ್ವಿನಿ, ಈಗ ಮತ್ತೆ ಧಾರಾವಾಹಿಗೆ ಎಂಟ್ರಿ ಕೊಡುತ್ತಿದ್ದಾರೆ.
‘ಭಾರ್ಗವಿ ಎಲ್ಎಲ್ಬಿ’ಯಲ್ಲಿ ಲಾಯರ್ ಧಮಾಕಾ ಮತ್ತು ‘ರಾಧೆ ಶ್ಯಾಮ’ ನೆನಪು…
ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಕಲರ್ಸ್ ಕನ್ನಡದ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಕೋರ್ಟ್ ಅಂಗಳದಲ್ಲಿ ಖಡಕ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಛಾಪು ಮೂಡಿಸಿದ್ದರು. ಇದಕ್ಕೂ ಮುನ್ನ 2021ರಲ್ಲಿ ಸ್ಟಾರ್ ಸುವರ್ಣದ ಹಿಟ್ ಧಾರಾವಾಹಿ ‘ರಾಧೆ ಶ್ಯಾಮ’ದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ತನ್ವಿ ರಾವ್ ಹಾಗೂ ಅನೂಪ್ ಗೌಡ ಅಭಿನಯದ ಈ ಸೀರಿಯಲ್ನಲ್ಲಿ ನಾಯಕನ ತಾಯಿಯಾಗಿ ಖಡಕ್ ಅತ್ತೆ ಪಾತ್ರ ಮಾಡಿದ್ದರು. ಹಳ್ಳಿ ಸಂಪ್ರದಾಯ ಹಾಗೂ ಸಂಸ್ಕೃತಿಗೆ ಒತ್ತು ನೀಡುವ ಆ ಪಾತ್ರ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತ್ತು.
ಐದು ವರ್ಷಗಳ ಬಳಿಕ ಸ್ಟಾರ್ ಸುವರ್ಣಗೆ ರಿ-ಎಂಟ್ರಿ: ಸೀರಿಯಲ್ ವಲಯದಲ್ಲಿ ಭಾರಿ ಹೈಪ್…
ಇದೀಗ ಬರೋಬ್ಬರಿ 5 ವರ್ಷಗಳ ಬಳಿಕ ಮತ್ತೆ ಅದೇ ಸ್ಟಾರ್ ಸುವರ್ಣ ವಾಹಿನಿಗೆ ಮರಳುತ್ತಿರುವುದು ವಿಶೇಷ. ಹೊಸ ಧಾರಾವಾಹಿಯಲ್ಲಿ ಮತ್ತೊಮ್ಮೆ ಪವರ್ಫುಲ್ ಹಾಗೂ ಖಡಕ್ ಲುಕ್ನಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಹೊಸ ಪ್ರಾಜೆಕ್ಟ್ ಕುರಿತು ಕಿರುತೆರೆ ಅಂಗಳದಲ್ಲಿ ಈಗಾಗಲೇ ಭಾರಿ ಚರ್ಚೆ ಹಾಗೂ ನಿರೀಕ್ಷೆ ಶುರುವಾಗಿದೆ. ಧಾರಾವಾಹಿಯ ಹೆಸರು ಹಾಗೂ ಅವರ ಪಾತ್ರದ ವಿವರಗಳ ಬಗ್ಗೆ ಅಧಿಕೃತ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ. ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟಿಯನ್ನು ಮತ್ತೆ ಪೂರ್ಣಪ್ರಮಾಣದಲ್ಲಿ ಕಿರುತೆರೆಯಲ್ಲಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.




