INTERVIEW: ಶ್ರೀದೇವೀ ಮಹಾತ್ಮೆ ದೇವೀ ಟು ಮರ್ಯಾದೆ ರಾಮಣ್ಣನ ಐಶು; ವಿಶೇಷ ಸಂದರ್ಶನದಲ್ಲಿ ಜೀವಿತಾ ವಸಿಷ್ಠ

ವಿಶೇಷ ಸಂದರ್ಶನದಲ್ಲಿ ಜೀವಿತಾ ವಸಿಷ್ಠ

Photo Credits: AI Generated

ಕಿರುತೆರೆಯ ಜನಪ್ರಿಯ ನಟಿ ಜೀವಿತಾ ವಸಿಷ್ಠ ಅವರು ‘ಶ್ರೀದೇವೀ ಮಹಾತ್ಮೆ’ ಧಾರಾವಾಹಿಯ ಶಾಂತ ಹಾಗೂ ಸಾತ್ವಿಕ ದೇವಿ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದವರು. ಇದೀಗ ‘ಮರ್ಯಾದೆ ರಾಮಣ್ಣ’ ಧಾರಾವಾಹಿಯಲ್ಲಿ ಪಕ್ಕಾ ಬೋಲ್ಡ್ ಹಾಗೂ ಬಬ್ಲಿ ಸಿಟಿ ಹುಡುಗಿ ‘ಐಶ್ವರ್ಯಾ’ (ಐಶು) ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಪೌರಾಣಿಕ ಪಾತ್ರದಿಂದ ಮಾಡರ್ನ್ ಐಶು ಪಾತ್ರಕ್ಕೆ ಆದ ಟ್ರಾನ್ಸಿಷನ್, ಹಳ್ಳಿ ಜೀವನದ ಸವಾಲುಗಳು, ರಾಮಣ್ಣನ ಜೊತೆಗಿನ ಕಾಂಬಿನೇಷನ್ ಹಾಗೂ ತಮ್ಮ ರಿಯಲ್ ಲೈಫ್ ಜರ್ನಿ ಕುರಿತು ಜೀವಿತಾ ವಸಿಷ್ಠ ಅವರು ಹಂಚಿಕೊಂಡ ವಿಶೇಷ ಮಾತುಕತೆ ಇಲ್ಲಿದೆ.

‘ದೇವೀ’ ಪಾತ್ರದ ನಂತರ ಈ ತರ ಬೋಲ್ಡ್ ಕ್ಯಾರೆಕ್ಟರ್ ಸಿಕ್ಕಾಗ ಮೊದಲನಿಸಿದ್ದು ಏನು?

ಜೀವಿತಾ ವಸಿಷ್ಠ: ಆಕ್ಚುಲಿ ಖುಷಿ ಆಯ್ತು. ಬಿಕಾಸ್ ಐ ವಾಂಟೆಡ್ ದಿಸ್ ಚೇಂಜ್. ‘ದೇವೀ’ಯಲ್ಲಿ ಎಲ್ಲರೂ ನೋಡಿ ನೋಡಿ, ಇವಳು ಬರಿ ಟ್ರೆಡಿಷನಲ್ ಕ್ಯಾರೆಕ್ಟರ್‌ಗೆ ಅಷ್ಟೇ ಸೆಟ್ ಆಗೋದು, ದೇವೀ ಪಾತ್ರಗಳಿಗೆ ಅಷ್ಟೇ ಸೂಟ್ ಆಗೋದು ಅನ್ನೋ ತರ ಟಾಕ್ಸ್ ಬಂದಿತ್ತು. ಯಾರೂ ನನ್ನ ಈ ತರ ಟ್ರಾನ್ಸಿಷನ್‌ನಲ್ಲಿ ನೋಡಿರಲಿಲ್ಲ, ಅಂದ್ರೆ ಬೋಲ್ಡ್ ಲುಕ್ ಅಥವಾ ವೆಸ್ಟರ್ನ್ ಲುಕ್‌ನಲ್ಲಿ ನೋಡಿರಲಿಲ್ಲ. ಅದ್ರಲ್ಲೂ ತುಂಬಾ ಸಾತ್ವಿಕ ಸ್ವಭಾವ, ಸಾಫ್ಟ್ ಕ್ಯಾರೆಕ್ಟರ್… ಪಾರ್ವತಿ ಅಂದ್ರೇನೆ ಸಾಫ್ಟ್, ಕಾಳಿ ಬಂತು ಅಂದ್ರೆ ವೈಲೆಂಟ್ ಆಗ್ತಾಳೆ ಅಷ್ಟೇ, ಬಾಕಿ ಟೈಮ್‌ನಲ್ಲೆಲ್ಲಾ ಸಾಫ್ಟ್ ಇರ್ತಿದ್ಲು. ನನಗೂನು ಐಷು ಕ್ಯಾರೆಕ್ಟರ್‌ನಲ್ಲಿ ಏನು ಅಂದ್ರೆ ಶಿ ಈಸ್ ಮಿಕ್ಸ್ಚರ್ ಆಫ್ ಎವ್ರಿಥಿಂಗ್. ಫನ್ನಿ ಆಗಿರ್ತಾಳೆ, ನಗ್ತಾಳೆ, ಜಗಳ ಮಾಡ್ತಾಳೆ, ಬಜಾರಿ, ಪಟಪಟ ಮಾತಾಡ್ತಾಳೆ, ಕೋಪ ಬಂದಾಗ ಕೋಪ ತೋರಿಸ್ತಾಳೆ, ಬೇರೆಯವರಿಗೆ ಸಹಾಯನು ಮಾಡ್ತಾಳೆ. ಸೋ ಎಲ್ಲಾ ಎಮೋಷನ್ಸ್‌ನ್ನು ಒಂದೇ ಕ್ಯಾರೆಕ್ಟರ್‌ನಲ್ಲಿ ತೋರಿಸಬಹುದು, ಮತ್ತೆ ಇನ್ನೇಕೆ ಬೇಡ ಅನ್ನೋ ತರ ಐ ಹ್ಯಾಪಿಲಿ ಅಕ್ಸೆಪ್ಟೆಡ್ ದಿಸ್ ಕ್ಯಾರೆಕ್ಟರ್.

ಪಕ್ಕಾ ಸಿಟಿ ಹುಡುಗಿ ಐಶ್ವರ್ಯಾಗೆ ಹಳ್ಳಿ ಮನೆ; ಈ ಮದುವೆ ಲೈಫ್ ಸೆಟ್ ಆಗ್ತಿದ್ಯಾ?

ಜೀವಿತಾ ವಸಿಷ್ಠ: ಕಷ್ಟ ಆಗ್ತಿದೆ. ಐಶ್ವರ್ಯನ್ ತಂದೆ ಮನೆಯಲ್ಲಿ ಏನೇ ಇದ್ರೂ ಎಲ್ಲಾ ಆಳು-ಕಾಳು ಇದ್ರು. ಸ್ನ್ಯಾಪ್ ಆಫ್ ಎ ಸೆಕೆಂಡ್‌ನಲ್ಲಿ ಎಲ್ಲಾ ಬಂದುಬಿಡ್ತಾ ಇತ್ತು. ಬಟ್ ಇಲ್ಲಿ ಎಲ್ಲಾ ನಾನೇ ಮಾಡ್ಕೋಬೇಕು. ಕೋಳಿ ಕೂಗಿದ್ರೆ ಸಾಕು ಎಚ್ಚರಿಕೆ ಆಗ್ಬಿಡುತ್ತೆ. ನೆಲದ ಮೇಲೆ ಮಲ್ಕೋಬೇಕು, ಎಸಿ ಇಲ್ಲ, ಫ್ಯಾನ್ ಕೂಡ ಇಲ್ಲ ಇಲ್ಲಿ. ಸೋ ತುಂಬಾ ಕಷ್ಟ ಆಗ್ತಿದೆ ಐಷುಗೆ, ಬಟ್ ಇಷ್ಟ ಪಡೋಕೆ ಸ್ಟಾರ್ಟ್ ಮಾಡ್ತಿದ್ದಾಳೆ.

ಅತ್ತ ರಾಮಣ್ಣನಿಗೆ ಅಮ್ಮನಿಗೆ ಕೊಟ್ಟ ಮಾತು, ಇತ್ತ ಐಶ್ವರ್ಯಾಗೆ ಈ ಮದುವೆ ಇಷ್ಟವಿಲ್ಲ—ಮುಂದೆ ಈ ಸಂಸಾರದಲ್ಲಿ ಏನೆಲ್ಲಾ ಟ್ವಿಸ್ಟ್ ಕಾಯ್ದಿದೆ?

ಜೀವಿತಾ ವಸಿಷ್ಠ: ಅದು ಪ್ರೋಬಬ್ಲಿ ಎಪಿಸೋಡ್ ನೋಡಬೇಕು ನೀವು. ಬಿಕಾಸ್ ನಮ್ಗೂನು ಸೀನ್ ಪೇಪರ್ ಬಂದಾಗ್ರೇನೆ ಏನ್ ನಡಿತಾ ಇದೆ ಅಂತ ಗೊತ್ತಾಗೋದು. ಅಲ್ಲಿವರ್ಗೂ ನಮ್ಗೂ ಐಡಿಯಾ ಇರಲ್ಲ. ಬಟ್ ಎನಿವೇ ರಾಮು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡ್ತಾ ಇದ್ದಾರೆ. ಈ ಕಡೆ ನನ್ನ ಕನಸುಗಳಿಗೂ ಅವರು ಸಪೋರ್ಟ್ ಮಾಡ್ತಾ ಇದ್ದಾರೆ ಅವರ ಅಮ್ಮಂಗೆ ಗೊತ್ತಿಲ್ದೆಲೆ. ಇವಾಗ ವೀಸಾ ಇಂಟರ್ವ್ಯೂಗೆಲ್ಲ ಕರ್ಕೊಂಡು ಹೋಗೋಕೆ ರೆಡಿಯಾಗಿದ್ದಾರೆ, ಅದು ಅವರ ಅಮ್ಮಂಗೆ ಗೊತ್ತಿಲ್ದೆಲೆ… ಅಮ್ಮಂಗೆ ಗೊತ್ತಾದ್ರೆ ಅಲ್ಲಿ ಬೇಜಾರ್ ಮಾಡ್ಕೊಳ್ತಾರೆ ಅಂತ. ಸೋ ಅಮ್ಮಂಗೆ ಗೊತ್ತಿಲ್ದೆಲೆ ನನ್ನ ಮ್ಯಾನೇಜ್ ಮಾಡ್ತಾ ಇದ್ದಾರೆ. ನಾನುನು ‘ಹೋಗ್ಲಿ ಬಿಡೋ ನನಗೆ ಸಪೋರ್ಟ್ ಮಾಡ್ತಾ ಇದ್ದಾನಲ್ವಾ, ಅವರ ಅಮ್ಮಂಗೂ ಬೇಜಾರ್ ಮಾಡೋದು ಬೇಡ’ ಅನ್ನೋ ತರ ನನ್ನ ಮೈಂಡ್‌ಸೆಟ್ಟು ಇದೆ. ಸೋ ನಾನು ಅವನಿಗೆ ಅವರ ಅಮ್ಮಂಗೆ ಯು ನೋ… ಮೋಸ ಮಾಡೋದ್ರಲ್ಲಿ ಸ್ವಲ್ಪ ಹೆಲ್ಪ್ ಮಾಡ್ತಾ ಇದೀನಿ. ನನಗೆ ಹೆಲ್ಪ್ ಮಾಡ್ತಾ ಇದ್ದಾನಲ್ವಾ, ಸೋ ಪರವಾಗಿಲ್ಲ ಅವರ ಅಮ್ಮಂಗೆ ಸ್ವಲ್ಪ ಮೋಸ ಮಾಡ್ಲಿ ಅಂತ ನಾನೇ ಹೆಲ್ಪ್ ಮಾಡ್ತಾ ಇದೀನಿ ನಿಮ್ಮಮ್ಮಂಗೆ ಮೋಸ ಮಾಡು ಅಂತ.

ರಾಮಣ್ಣ – ಐಶ್ವರ್ಯ ಕಾಂಬಿನೇಷನ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ?

ಜೀವಿತಾ ವಸಿಷ್ಠ: ನಾನೇನಾದ್ರೂ ಆಚೆ ಹೋದ್ರೆ, ‘ನಮ್ಮ ಹುಡುಗಂಗೆ ಯಾಕೆ ಅಷ್ಟೊಂದು ಗೋಳು ಕೊಡ್ತ್ಯಾ?’ ಅಂತ ಕೇಳ್ತಾರೆ. ಲಿಟ್ರಲಿ ದಾಬಸ್‌ಪೇಟೆಯ ಟೆಂಪಲ್‌ನಲ್ಲಿ ನಮ್ಮದೊಂದು ಶೂಟಿಂಗ್ ಇತ್ತು. ಅಲ್ಲಿದ್ದ ಜನರೆಲ್ಲಾ ನನ್ನ ನೋಡಿ, ‘ಏನಿಕ್ಕೆ ನಮ್ಮ ಹುಡುಗಂಗೆ ಅಷ್ಟೊಂದು ಗೋಳು ಕೊಡ್ತ್ಯಾ? ನಿನಗೇನು ಅನ್ಸಲ್ವಾ? ಅವನು ಎಷ್ಟು ಪಾಪ, ಎಷ್ಟು ಸಾಫ್ಟ್’ ಅಂತ ಮಾತಾಡಿಸಿದ್ರು. ಆಫ್ ಕೋರ್ಸ್ ತುಂಬಾ ಜನ ನಮ್ಮಿಬ್ಬರ ಈ ಕೋಳಿ ಜಗಳ ಕಾಂಬಿನೇಷನ್ ಅನ್ನು ಎಂಜಾಯ್ ಮಾಡ್ತಿದ್ದಾರೆ. ಅಪಾರ್ಟ್ ಫ್ರಮ್ ದಟ್, ಪಬ್ಲಿಕ್‌ನಲ್ಲಿ ದೊಡ್ಡವರೆಲ್ಲಾ ಬಂದು ‘ಏನಿಕ್ಕೆ ಚಿಕ್ಕವನಿಗೆ ಅಷ್ಟೊಂದು ಗೋಳು ಕೊಡ್ತ್ಯಾ’ ಅಂತ ತಮಾಷೆಯಾಗಿ ಬಯ್ಯುತ್ತಾರೆ. ಅಟ್ ದಿ ಎಂಡ್ ಆಫ್ ದಿ ಡೇ ಆಡಿಯನ್ಸ್ ಎಂಜಾಯ್ ಮಾಡ್ತಿರೋದು ನಮಗೆ ತುಂಬಾ ಖುಷಿ ಕೊಟ್ಟಿದೆ.

‘ಶ್ರೀದೇವೀ ಮಹಾತ್ಮೆ’ಯಿಂದ ‘ಮರ್ಯಾದೆ ರಾಮಣ್ಣ’ ವರೆಗಿನ ಜರ್ನಿ ಹೇಗಿತ್ತು?

ಜೀವಿತಾ ವಸಿಷ್ಠ: ಬ್ಯೂಟಿಫುಲ್ ಜರ್ನಿ. ದೇವೀ ಪಾತ್ರ ಮಾಡ್ತಿದ್ದಾಗ ಎಲ್ಲರೂ ನನ್ನನ್ನು ದೇವರ ತರನೇ ನೋಡೋಕೆ ಸ್ಟಾರ್ಟ್ ಮಾಡಿದ್ರು. ಸೆಟ್‌ಗೆ ಹೋದ್ರೆ ಕೈ ಮುಗಿದು ಮಾತಾಡಿಸೋರು. ಬಟ್ ಮರ್ಯಾದೆ ರಾಮಣ್ಣ ಸೆಟ್‌ನಲ್ಲಿ ಬಬ್ಲಿ ಹುಡುಗಿ ತರ ನೋಡ್ತಾರೆ, ಜಾಲಿಯಾಗಿ ಮಾತಾಡಿಸ್ತಾರೆ. ಪೌರಾಣಿಕ ಧಾರಾವಾಹಿ ಮಾಡೋದು ಅಷ್ಟು ಈಜಿ ಅಲ್ಲ. ಬೆಳಿಗ್ಗೆ 7:30 ಗೆ ಸೆಟ್‌ಗೆ ಹೋದ್ರೆ ನೈಟ್ 9:30 – 10 ಗಂಟೆಯಾದ್ರೂ ಆ ಜ್ಯುವೆಲ್ಲರಿ, ಸೀರೆ, ವಿಗ್, ಕಿರೀಟ ಎಲ್ಲವನ್ನೂ ಹಾಕೊಂಡೇ ಇರಬೇಕಿತ್ತು. ಕೈಗೆಲ್ಲಾ ಅಲ್ತಾ ಇರೋದ್ರಿಂದ ಕೆಮಿಕಲ್ ಅಂತ ಅಮ್ಮನೇ ಬಂದು ಊಟ ಮಾಡಿಸ್ತಿದ್ರು. ಆದರೆ ಇಲ್ಲಿ ಆ ತರ ತೊಂದರೆ ಇಲ್ಲ, ಆರಾಮಾಗಿ ತಿನ್ಕೊಂಡು, ಆಟಾಡ್ಕೊಂಡು ಇರಬಹುದು. ಈ ಇಡೀ ಜರ್ನಿಯಲ್ಲಿ ದೇವೀ ಪಾತ್ರದಿಂದ ಹಿಡಿದು ಐಶು ಕ್ಯಾರೆಕ್ಟರ್‌ವರೆಗೆ ತುಂಬಾ ವಿಷಯಗಳನ್ನು ಕಲ್ತಿದ್ದೀನಿ, ಅದೊಂದಂತೂ ತುಂಬಾ ಖುಷಿ ಇದೆ.

ಸಿನಿಮಾಗಳಲ್ಲೂ ಆಕ್ಟ್ ಮಾಡಿದ್ದೀರಿ. ಹಿರಿತೆರೆ ಮತ್ತು ಕಿರುತೆರೆ ನಡುವಿನ ವ್ಯತ್ಯಾಸ ಏನು ಅನಿಸುತ್ತದೆ?

ಜೀವಿತಾ ವಸಿಷ್ಠ: ಸಿನಿಮಾದಲ್ಲಿ ತುಂಬಾ ಓವರ್ ಎಕ್ಸ್‌ಪ್ರೆಶನ್ ಕೊಡಬೇಕಿಲ್ಲ, ಸಟಲ್ ಆಕ್ಟಿಂಗ್ ಇರುತ್ತೆ. ರಿಯಾಕ್ಷನ್ಸ್ ಒಂದೇ ಸಲ ಕೊಟ್ರೆ ಸಾಕು, ಕಣ್ಣಲ್ಲೇ ಆಕ್ಟ್ ಮಾಡಬಹುದು. ಆದರೆ ಸೀರಿಯಲ್ ಬಂದಾಗ ಜನರಿಗೆ ಎಂಟರ್‌ಟೈನ್‌ಮೆಂಟ್ ಕೊಡಬೇಕಿರೋದ್ರಿಂದ ಸ್ವಲ್ಪ ಎಕ್ಸ್ಟ್ರಾ ಆಕ್ಟ್ ಮಾಡ್ತೀವಿ. ಆಕ್ಟಿಂಗ್ ಮತ್ತು ಮೇಕಿಂಗ್ ವೈಸ್ ಸ್ವಲ್ಪ ವ್ಯತ್ಯಾಸ ಬಿಟ್ರೆ ನನಗೆ ದೊಡ್ಡ ವ್ಯತ್ಯಾಸ ಅನಿಸಲ್ಲ. ಯಾಕಂದ್ರೆ ಇತ್ತೀಚೆಗೆ ಶಾರ್ಟ್ ಬಜೆಟ್ ಸಿನಿಮಾಗಳನ್ನು ಹೇಗೆ ಮಾಡ್ತಾರೋ, ಹಾಗೆಯೇ ಸೀರಿಯಲ್‌ಗಳೂ ವರ್ಕ್ ಆಗ್ತಿವೆ. ಸಾಂಗ್ಸ್, ಫೈಟಿಂಗ್ಸ್, ಕ್ಲೋಸಪ್ ಶಾಟ್‌ಗಳು ಎಲ್ಲವೂ ಸೀರಿಯಲ್‌ನಲ್ಲೂ ಇವೆ. ಮುಂಚೆ ಬರಿ ಡೈಲಾಗ್ಸ್ ಮತ್ತು ಗೋಳಾಟ ಇರ್ತಿತ್ತು, ಹಾಗಾಗಿ ವ್ಯತ್ಯಾಸ ಅನಿಸ್ತಿತ್ತು. ಬಟ್ ಇವಾಗ ಸೀರಿಯಲ್ ಇಂಡಸ್ಟ್ರಿನೂ ಸ್ಮಾಲ್ ಬಜೆಟ್ ಮೂವಿ ತರಾನೇ ಆಗಿದೆ.

ರಿಯಲ್ ಲೈಫ್‌ನಲ್ಲೂ ಜೀವಿತಾ ಅವರು ಐಶ್ವರ್ಯ ತರಾನೇ ಎದೆಗೆ ಹೊಡೆದ ಹಾಗೆ ಮಾತಾಡ್ತಾರಾ?

ಜೀವಿತಾ ವಸಿಷ್ಠ: ಇಲ್ಲವೇ ಇಲ್ಲ. ಕ್ಯಾಬ್ ಡ್ರೈವರ್‌ಗೆ ‘ಅಣ್ಣ ಇಲ್ಲಿ ರೈಟ್ ತಗೊಳ್ಳಿ’ ಅಂತ ಹೇಳೋದಕ್ಕೂ ಹೆದರಿಕೊಳ್ಳೋ ಸ್ವಭಾವ ನಮ್ದು. ಅದೇ ಐಶ್ವರ್ಯ ಆದ್ರೆ ‘ಏಯ್ ಮುಚ್ಕೊಂಡು ರೈಟ್ ತಗೊ’ ಅಂತಾಳೆ. ನಾನು ಜೀವಿತಾ ಆದ್ರೆ ‘ಅಣ್ಣ ಪ್ಲೀಸ್ ದಯವಿಟ್ಟು ರೈಟ್‌ಗೆ ಹೋಗಿ’ ಅಂತ ಕೇಳಿಕೊಳ್ತೀನಿ. ಪಟಪಟ ಅಂತ ಮಾತಾಡೋ ಒಂದೆರಡು ವಿಷಯ ಬಿಟ್ರೆ ಐಶುಗೂ ಜೀವಿತಾಗೂ ತುಂಬಾ ವ್ಯತ್ಯಾಸ ಇದೆ. ಐಶು ತರ ನಂಗೆ ಅಷ್ಟೊಂದು ಅಹಂಕಾರ ಇಲ್ಲ, ಅಷ್ಟು ಬೋಲ್ಡ್ ಇಲ್ಲ, ದೊಡ್ಡವರಿಗೆ ಗೌರವ ಕೊಟ್ಟು ಮಾತಾಡ್ತೀನಿ.

ಸೆಟ್‌ನಲ್ಲಿ ಕೋ-ಸ್ಟಾರ್‌ಗಳ ಜೊತೆ ಶೂಟಿಂಗ್ ಅನುಭವ ಹೇಗಿದೆ?

ಜೀವಿತಾ ವಸಿಷ್ಠ: ನಂಗೆ ಅವರ್ಯಾರೂ ಕೋ-ಸ್ಟಾರ್ಸ್ ಅಂತ ಅನಿಸೋದೇ ಇಲ್ಲ, ಎಲ್ಲರೂ ನನ್ನ ಫ್ಯಾಮಿಲಿ ತರ ಆಗಿದ್ದಾರೆ. ಸೆಟ್‌ನಿಂದ ಮನೆಗೆ ಬರೋಕೆ ಮನಸ್ಸೇ ಆಗಲ್ಲ. ‘ಅಯ್ಯೋ ಮನೆಗೆ ಯಾಕೆ ಹೋಗ್ಬೇಕು, ಇಲ್ಲೇ ಚಾಪೆ-ದಿಂಬು ಹಾಕ್ಕೊಂಡು ಮಲ್ಕೊಂಡು ಬಿಡೋಣ’ ಅನಿಸುವಷ್ಟು ಖುಷಿ ಸಿಗುತ್ತೆ. ರಾಮು, ಜಯಮ್ಮ, ವೀಣಮ್ಮ, ವಿದ್ಯಮ್ಮ, ಸುಂದರ್ ಸರ್ ಹೀಗೆ ಪ್ರತಿಯೊಬ್ಬರೂ ನನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತಾರೆ. ಸೀರಿಯಲ್‌ನಲ್ಲಿ ಐಶುನ ಎಷ್ಟು ಬೈತಾರೋ, ಸೆಟ್‌ನಲ್ಲಿ ಜೀವಿತಾನ ಅದರ ಹತ್ತರಷ್ಟು ಮುದ್ದು ಮಾಡ್ತಾರೆ. ಈ ಟೀಮ್ ಜೊತೆ ವರ್ಕ್ ಮಾಡ್ತಿರೋದು ತುಂಬಾ ಖುಷಿ ಇದೆ.

ನಿಮ್ಮ ಫ್ಯಾಮಿಲಿ ಸಪೋರ್ಟ್ ಎಲ್ಲ ಹೇಗಿದೆ?

ಜೀವಿತಾ ವಸಿಷ್ಠ: ನಮ್ಮ ತಾಯಿಯ ಸಪೋರ್ಟ್ ತುಂಬಾ ಇದೆ. ನಾನು ಕಿರುತೆರೆಗೆ ಬರೋದಕ್ಕೆ ಮೇನ್ ರೀಸನ್ ಅಮ್ಮ. ಮೂವಿ ಮಾಡಿದ್ರೆ ರಿಲೀಸ್ ಆಗೋಕೆ ವರ್ಷಗಟ್ಟಲೆ ಆಗಬಹುದು, ಥಿಯೇಟರ್‌ನಲ್ಲಿ ಎಷ್ಟು ದಿನ ಇರುತ್ತೋ ಗೊತ್ತಿಲ್ಲ, ಆದರೆ ನಿನ್ನನ್ನು ಪ್ರತಿದಿನ ಟಿವಿಯಲ್ಲಿ ನೋಡ್ಬೇಕು ಅಂದ್ರೆ ನೀನು ಸೀರಿಯಲ್ ಮಾಡು ಅಂತ ಅಮ್ಮ ಹೇಳಿದ್ರು. ಅವರಿಗೋಸ್ಕರ ಮೂವಿ ಬಿಟ್ಟು 3 ವರ್ಷಗಳಿಂದ ಸೀರಿಯಲ್ ಮಾಡ್ತಾ ಇದ್ದೀನಿ. ಈಗ ಮೂವಿ ಕಡೆ ಮಿಸ್ ಆಗ್ತಿರೋದ್ರಿಂದ ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಡೆಫಿನೇಟ್ಲಿ ಮತ್ತೆ ಹಿರಿತೆರೆಗೆ ಬರ್ತೀನಿ. ಇದು ಅಮ್ಮನ ಕನಸಾಗಿತ್ತು, ಅದ್ರಲ್ಲೇ ಅರ್ಥ ಮಾಡಿಕೊಳ್ಳಬಹುದು ನನ್ನ ಕುಟುಂಬ ನನಗೆ ಎಷ್ಟು ಸಪೋರ್ಟ್ ಮಾಡುತ್ತೆ ಅಂತ.

ಪ್ರತಿದಿನ ನಿಮ್ಮ ಸೀರಿಯಲ್ ನೋಡ್ತಿರೋ ನಿಮ್ಮ ವೀಕ್ಷಕರಿಗೆ ಏನು ಹೇಳ್ತೀರಾ?

ಜೀವಿತಾ ವಸಿಷ್ಠ: ಎಲ್ಲರಿಗೂ ಥ್ಯಾಂಕ್ ಯು ಸೋ ಮಚ್. ಪ್ರೇಕ್ಷಕರು ಅಷ್ಟೊಂದು ಪ್ರೀತಿ ಕೊಡ್ತಿರೋದಕ್ಕೆನೆ ನಾವು ಇಷ್ಟು ಹಾರ್ಡ್ ವರ್ಕ್ ಮಾಡಿ ಕೆಲಸ ಮಾಡೋಕೆ ಸಾಧ್ಯ ಆಗ್ತಿರೋದು. ಮೊನ್ನೆ ನಾನು ಕುಡಿದು ತೇಲಾಡೋ ಎಪಿಸೋಡ್ ಟೆಲಿಕಾಸ್ಟ್ ಆದಾಗ, ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವರು ‘ದೊಡ್ಡ ಕುಡುಕಿ ನೀನು, ಬಜಾರಿ, ನಿಮ್ಮ ಅತ್ತೆಗೆ ಹಂಗೆ ಮಾತಾಡ್ತ್ಯಾ, ರಾಮಣ್ಣನ ಹಂಗೆ ನೋಡ್ಕೊಳ್ತ್ಯಾ’ ಅಂತಲ್ಲ ಮೆಸೇಜ್ ಮಾಡಿದ್ರು. ಆ ರೀತಿ ಸಿಟ್ಟಿನಿಂದ ಬೈಯುವಾಗ ನನಗೆ ಖುಷಿಯಾಗುತ್ತೆ, ಯಾಕಂದ್ರೆ ನಾನು ನನ್ನ ಪಾತ್ರಕ್ಕೆ ಜಸ್ಟಿಸ್ ಮಾಡ್ತಾ ಇದ್ದೀನಿ ಅಂತ ಅನಿಸುತ್ತೆ. ಅವರಿಂದಾನೇ ನಾವು ಈ ಲೆವೆಲ್‌ನಲ್ಲಿ ಇರೋದು, ಎಲ್ಲರಿಗೂ ನನ್ನ ಮನಸಾರೆ ಧನ್ಯವಾದಗಳು.