Darshan: ನಟ ದರ್ಶನ್ ಅವರ ಹೆಸರನ್ನು ಸ್ವಹಿತಾಸಕ್ತಿಗಾಗಿ ಯಾರೂ ಬಳಸದಂತೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ಎಚ್ಚರಿಕೆ ನೀಡಿದ್ದಾರೆ. ದರ್ಶನ್ ಅಭಿಮಾನಿಗಳು ಹಾಗೂ ಅವರ ಹೆಸರನ್ನು ಬಳಸಿಕೊಳ್ಳುವವರಿಗೆ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟ ಹಾಗೂ ಕಟು ಸಂದೇಶ ರವಾನಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಧನ್ವೀರ್ ಅವರು ದರ್ಶನ್ ಪರವಾಗಿ ಆಡಿದ ಮಾತುಗಳ ಬೆನ್ನಲ್ಲೇ ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ನೀಡಿದ ಸಂದೇಶವೇನು?
ಪತಿ ದರ್ಶನ್ ಜೊತೆಗಿನ ಹಳೆಯ ಸುಂದರ ಫೋಟೋವನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ, ದರ್ಶನ್ ಹೆಸರಿನ ದುರ್ಬಳಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, “ನಿಮ್ಮ ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು” ಎಂದು ಬರೆಯುವ ಮೂಲಕ ಅನಗತ್ಯ ಹೇಳಿಕೆಗಳಿಗೆ ಬ್ರೇಕ್ ಹಾಕಿದ್ದಾರೆ.
ಚಾಮರಾಜನಗರದ ವೇದಿಕೆಯಲ್ಲಿ ಧನ್ವೀರ್ ಆಡಿದ ಮಾತುಗಳು
ಇತ್ತೀಚೆಗಷ್ಟೇ ಚಾಮರಾಜನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ಧನ್ವೀರ್ ಗೌಡ, ವೇದಿಕೆ ಮೇಲೆ ದರ್ಶನ್ ವಿರೋಧಿಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದರು. ಅಭಿಮಾನಿಗಳು ಡಿ ಬಾಸ್ ಎಂದು ಘೋಷಣೆ ಕೂಗುತ್ತಿದ್ದಾಗ ಮಾತನಾಡಿದ ಧನ್ವೀರ್, “ಎಷ್ಟೇ ಕೂಗಿರಿ, ಏನೇ ಮಾಡ್ರಿ. ದರ್ಶನ್‌ಗೆ ಏನೂ ಮಾಡಕ್ಕಾಗಲ್ಲ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಏನೂ ಮಾಡಕ್ಕಾಗಲ್ಲ. ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರೆ” ಎಂದು ಹೇಳಿದ್ದರು.
ಇದನ್ನು ಓದಿ: Darshan Case: ಸಾಕ್ಷ್ಯ ನುಡಿಯುವಾಗ ತೀವ್ರ ಟೆನ್ಶನ್; ನಟ ಚಿಕ್ಕಣ್ಣ ವಿಚಾರಣೆ ನಾಳೆಗೆ ಮುಂದೂಡಿಕೆ
Darshan: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ
ಧನ್ವೀರ್ ಅವರ ಈ ವಿವಾದಾತ್ಮಕ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತ್ತು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ದರ್ಶನ್ ಹೆಸರನ್ನು ಸ್ವಹಿತಾಸಕ್ತಿಗಾಗಿ ಹಾಗೂ ವಿವಾದ ಸೃಷ್ಟಿಸಲು ಬಳಸಬಾರದು ಎಂದು ಪೋಸ್ಟ್ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪರೋಕ್ಷವಾಗಿ ವಿಜಯಲಕ್ಷ್ಮಿ ಅವರು ಧನ್ವೀರ್ ನೀಡಿದ ಹೇಳಿಕೆಗೆ ಹಾಗೂ ದರ್ಶನ್ ಹೆಸರಿನಲ್ಲಿ ಪಬ್ಲಿಸಿಟಿ ಪಡೆಯುವವರಿಗೆ ಈ ರೀತಿ ಟಾಂಗ್ ಕೊಟ್ಟಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.




