Tiger Shroff Attack: ಬಾಲಿವುಡ್ ಖ್ಯಾತ ನಟ ಟೈಗರ್ ಶ್ರಾಫ್ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಭಿಮಾನಿಗಳ ಜೊತೆ ನಿಂತಿದ್ದ ವೇಳೆ ನಡೆದ ಈ ಆಘಾತಕಾರಿ ಘಟನೆಯು ಇಡೀ ಚಿತ್ರರಂಗ ಹಾಗೂ ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಈ ಗುಂಡಿನ ದಾಳಿಯಲ್ಲಿ ನಟ ಟೈಗರ್ ಶ್ರಾಫ್ ಸುರಕ್ಷಿತವಾಗಿದ್ದಾರಾ ಇಲ್ಲವಾ ಎಂಬ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಟೈಗರ್ ಶ್ರಾಫ್ ಸೇಫ್, ಇಬ್ಬರಿಗೆ ಗಾಯ
ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಘಟನೆಯ ಬಗ್ಗೆ ಮುಂಬೈ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ನಟ ಟೈಗರ್ ಶ್ರಾಫ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆದರೆ ದಾಳಿಯ ಸಮಯದಲ್ಲಿ ನಟನ ಕಾರು ಚಾಲಕ ಹಾಗೂ ಅವರನ್ನು ನೋಡಲು ಬಂದಿದ್ದ ಓರ್ವ ಅಭಿಮಾನಿ ಗಾಯಗೊಂಡಿದ್ದಾರೆ. ಜುಹುವಿನ ಪುಷ್ಪಾ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ನಲ್ಲಿ ಬಂದ ಮೂವರಿಂದ ದಾಳಿ
ಮೋಟರ್ ಸೈಕಲ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಟೈಗರ್ ಶ್ರಾಫ್ ಅವರನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದಾರೆ. ಫುಟ್‌ಬಾಲ್ ಆಡಲು ಜುಹುಗೆ ಬಂದಿದ್ದ ಟೈಗರ್ ಶ್ರಾಫ್ ಜೊತೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಈ ದಾಳಿ ನಡೆದಿದೆ. ದುಷ್ಕರ್ಮಿಗಳು ಗುಂಡು ಹಾರಿಸಿ ಜನಸಂದಣಿಯಲ್ಲೇ ಪರಾರಿಯಾಗಿದ್ದಾರೆ. ಈ ಹಲ್ಲೆಯ ಹಿಂದಿನ ನಿಖರವಾದ ಉದ್ದೇಶವೇನು ಎಂಬುದು ಇನ್ನೂ ತನಿಖೆಯಿಂದ ತಿಳಿದುಬರಬೇಕಿದೆ.
Tiger Shroff Attack: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಶಂಕೆ
ಈ ಘಟನೆಯ ಕುರಿತು ತನಿಖೆು ತೀವ್ರಗೊಂಡಿದ್ದು, ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ವರದಿಯಾಗಿದೆ. ಗ್ಯಾಂಗ್‌ಸ್ಟರ್ ಅನಿಲ್ ಪಂಡಿತ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಈ ಘಟನೆಯು ರಾಜ್ಯದಲ್ಲಿ ರಾಜಕೀಯ ವಿವಾದಕ್ಕೂ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.




