☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

CJP : ತಿರಂಗಾ ಮೆರವಣಿಗೆಗೆ ತಡೆ, 2ನೇ ಬಾರಿ ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ !

Image of CJP Abhijith dipke

ನವದೆಹಲಿ : ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ಅ .16 ರಂದು ಅವರ ನಿವಾಸದಲ್ಲಿಯೇ ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಕನ್ನಾಟ್ ಪ್ಲೇಸ್ ನ ಸೆಂಟ್ರಲ್ ಪಾರ್ಕ್ ನಲ್ಲಿ ಲೆಹ್ರಾ ದೋ ತಿರಂಗಾ ಹೆಸರಿನಲ್ಲಿ ರಾಷ್ಟ್ರಧ್ವಜ ಮೆರವಣಿಗೆ ನಡೆಸಲು ಅವರು ಹೊರಡಲು ಸಿದ್ಧತೆ ನಡೆಸಿದ್ದ ವೇಳೆಯಲ್ಲೇ ಈ ಬೆಳವಣಿಗೆ ನಡೆದಿದೆ. ಎನ್.ಸಿ.ಪಿ.ಎಸ್.ಸಿ.ಪಿ ವಕ್ತಾರ ಅನೀಶ್ ಗವಾಂಡೆ ಅವರ ನಿವಾಸದಿಂದ ಹೊರಬರುತ್ತಿದ್ದಾಗ ಪೊಲೀಸರು ಅವರನ್ನು ತಡೆದು ಮುನ್ನೆಚ್ಚರಿಕೆ ಬಂಧನದಲ್ಲಿಡುತ್ತಿರುವುದಾಗಿ ತಿಳಿಸಿರುವ ದೃಶ್ಯ ಎಎನ್ಐ ವಿಡಿಯೋದಲ್ಲಿ ದಾಖಲಾಗಿದೆ.

ಒಂದು ವಾರದಲ್ಲೇ ಎರಡನೇ ಬಾರಿ ವಶಕ್ಕೆ !

ಇದು ಕಳೆದ ಒಂದು ವಾರದಲ್ಲಿ ದೀಪ್ಕೆ ಅವರನ್ನು ಬಂಧಿಸುತ್ತಿರುವ ಎರಡನೇ ಪ್ರಕರಣವಾಗಿದೆ. ಇದಕ್ಕೂ ಮೊದಲು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟಿಸಲು ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಬಂದಿಳಿದ ತಕ್ಷಣ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅಕ್ಟೋಬರ್ 13 ರಂದು ಜಂತರ್ ಮಂತರ್ ನಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ ಸಿಜೆಪಿ ಕಾರ್ಯಕರ್ತರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟ ಮರುದಿನವೇ ಈ ಬಂಧನ ನಡೆದಿದ್ದು, ಅದರ ವಿರೋಧವಾಗಿ ಈ ತಿರಂಗಾ ಯಾತ್ರೆಯನ್ನು ಆಯೋಜಿಸಲಾಗಿತ್ತು.

ಈ ಬಗ್ಗೆ ಪೊಲೀಸರು ನೀಡಿರುವ ನೋಟಿಸ್ ನಲ್ಲಿ ಕನ್ನಾಟ್ ಪ್ಲೇಸ್ ಸುತ್ತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಯಾತ್ರೆಗೆ ಅನುಮತಿ ನೀಡಿಲ್ಲ ಎಂದು ಉಲ್ಲೇಖಿಸಲಾಗಿದೆ. ರಾಷ್ಟ್ರಧ್ವಜ ಹಾರಿಸುವುದು ಅಪರಾಧವಲ್ಲ, ಆದರೆ ಅನುಮತಿ ಇಲ್ಲದೆ ಜನರನ್ನು ಸೇರಿಸಿ ಮೆರವಣಿಗೆ ಮಾಡುವುದು ನಿಯಮ ಉಲ್ಲಂಘನೆಯಾಗುತ್ತದೆ ಮತ್ತು ಫ್ಲ್ಯಾಗ್ ಕೋಡ್ ಪ್ರಕಾರ ಧ್ವಜಕ್ಕೆ ಗೌರವ ನೀಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಬಂಧನದ ವೇಳೆ ಬಿಳಿ ಟಿ ಶರ್ಟ್ ನಲ್ಲಿ ಮಹಾತ್ಮ ಗಾಂಧಿ ಚಿತ್ರ, ಜೀನ್ಸ್ ಮತ್ತು ಭುಜದ ಮೇಲೆ ಸಣ್ಣ ತ್ರಿವರ್ಣ ಧ್ವಜ ಹೊದ್ದುಕೊಂಡಿದ್ದ ದೀಪ್ಕೆ ನೋಟಿಸ್ ನಲ್ಲಿನ ಅಂಶಗಳನ್ನು ಓದಿ ತಮ್ಮ ಮೇಲಿನ ಆರೋಪವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನಿಂದ ಸಿಇಸಿ ಭಾವಚಿತ್ರದ ಅಣಕು ದಹನ, ಚಿತಾಭಸ್ಮ ಶೌಚಾಲಯಕ್ಕೆ ಸುರಿದು ವಿವಾದ

ದೆಹಲಿಯಲ್ಲಿ ರಾಷ್ಟ್ರಧ್ವಜದ ಹೆಸರಿನಲ್ಲಿಯೇ ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಮುನ್ನೆಚ್ಚರಿಕೆ ಬಂಧನಕ್ಕೆ ಮುಂದಾಗಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ತ್ರಿವರ್ಣ ಧ್ವಜ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದ್ದು ಅದನ್ನು ಹಿಡಿದು ಶಾಂತಿಯುತವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಚಲಾಯಿಸುವುದನ್ನು ತಡೆಯುವುದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧ ಎಂಬ ವಾದ ಸಿಜೆಪಿಗೆ ಅಸ್ತ್ರವಾಗಿದೆ. ಸೆಕ್ಷನ್ 163 ರಂತಹ ನಿಷೇಧಾಜ್ಞೆಗಳನ್ನು ಬಳಸಿ ಕನ್ನಾಟ್ ಪ್ಲೇಸ್ ನಂತಹ ಕೇಂದ್ರ ಸ್ಥಳಗಳಲ್ಲಿ ಪ್ರತಿಭಟನೆಗೆ ನಿರಂತರವಾಗಿ ಅಡ್ಡಿಪಡಿಸುವುದು ಆಡಳಿತದ ರೂಢಿಯಾಗಿದೆ. ಜಂತರ್ ಮಂತರ್ ನಂತಹ ಐತಿಹಾಸಿಕ ಪ್ರತಿಭಟನಾ ತಾಣವನ್ನು ಪಟ್ಟಿಯಿಂದ ತೆಗೆದುಹಾಕಿದ ನಂತರ ಪರ್ಯಾಯ ಸ್ಥಳಗಳಿಗೆ ಅವಕಾಶ ನೀಡದೆ ಇರುವುದು ಪ್ರತಿಭಟನಾಕಾರರಿಗೆ ದಾರಿ ಇಲ್ಲದಂತೆ ಮಾಡುತ್ತದೆ.

ಸಿಜೆಪಿಯಂತಹ ಹೊಸ ರಾಜಕೀಯ ವೇದಿಕೆಗಳು ಮತದಾರರ ಪಟ್ಟಿ ಪರಿಷ್ಕರಣೆಯಂತಹ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಎತ್ತಿದಾಗ ಅದನ್ನು ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಿ ಪರಿಗಣಿಸಿ ಬಂಧಿಸುವುದು ಸರ್ಕಾರದ ಅಸಹಿಷ್ಣುತೆಯನ್ನು ತೋರಿಸುತ್ತದೆ. ಮತ್ತೊಂದೆಡೆ ಪೊಲೀಸರ ದೃಷ್ಟಿಕೋನದಲ್ಲಿ ಅನುಮತಿ ಇಲ್ಲದೆ ಜನಸಂದಣಿ ಸೇರಿಸುವುದು ಭದ್ರತೆ ಮತ್ತು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಆದರೆ ರಾಷ್ಟ್ರಧ್ವಜ ಯಾತ್ರೆಯಂತಹ ಸಾಂಕೇತಿಕ ಕಾರ್ಯಕ್ರಮವನ್ನು ಕೇವಲ ನೋಟಿಸ್ ನೀಡಿ ತಡೆಯುವ ಬದಲು ಷರತ್ತುಬದ್ಧ ಅನುಮತಿ ನೀಡಿ ನಿಯಂತ್ರಿತವಾಗಿ ನಡೆಸಲು ಅವಕಾಶ ಮಾಡಿಕೊಡುವುದು ಪ್ರಜಾಸತ್ತಾತ್ಮಕ ಮಾರ್ಗವಾಗಬಹುದಿತ್ತು. ಈ ಘಟನೆ ದೆಹಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪ್ರತಿಭಟನೆಯ ಹಕ್ಕು ಮತ್ತು ನಿರ್ಬಂಧಗಳ ನಡುವಿನ ಸಮತೋಲನದ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.