Image: tseries.official/Instagram
Ramayana Movie: ಬಾಲಿವುಡ್ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈ ಬಹುಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಚಿತ್ರವು ನವೆಂಬರ್ 5ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಚಿತ್ರದ ಬಿಡುಗಡೆಯ ದಿನದಂದೇ ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನ ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಭವನದಲ್ಲಿ ಗಣ್ಯರಿಗಾಗಿ ವಿಶೇಷ ಪ್ರದರ್ಶನ
ಸಾಮಾನ್ಯವಾಗಿ ಇಂತಹ ಪ್ರತಿಷ್ಠಿತ ಸಿನಿಮಾಗಳ ವಿಶೇಷ ಪ್ರದರ್ಶನವನ್ನು ರಾಜಕೀಯ ಗಣ್ಯರಿಗಾಗಿ ಆಯೋಜಿಸಲಾಗುತ್ತದೆ. ಅದೇ ರೀತಿ ಸದ್ಯ ‘ರಾಮಾಯಣ’ ಚಿತ್ರವನ್ನು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶಿಸಲು ಅನುಮತಿ ಕೋರಲಾಗಿದೆ ಎನ್ನಲಾಗಿದೆ. ಈ ವಿಶೇಷ ಪ್ರದರ್ಶನದ ವೇಳೆ ನಟರಾದ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸುವ ನಿರೀಕ್ಷೆಯಿದೆ.
ಜಟಾಯು ಪಾತ್ರದ ಪೋಸ್ಟರ್ ಮತ್ತು ಅನುಪಮ್ ಖೇರ್ ಧ್ವನಿ
ಪೌರಾಣಿಕ ಕಥೆಯ ಪ್ರಮುಖ ಪಾತ್ರವಾದ ಜಟಾಯುವಿನ ವಿಶೇಷ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪೂಜ್ಯ ಪಕ್ಷಿಯ ಪಾತ್ರಕ್ಕೆ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಧ್ವನಿ ನೀಡಿದ್ದಾರೆ. ರಾವಣನು ಸೀತೆಯನ್ನು ಅಪಹರಿಸಿದಾಗ ಜಟಾಯು ಎದುರಿಸಿ ಪ್ರಾಣ ಬಿಡುವ ಮಹ ತ್ಯಾಗವು ಈ ಕಾವ್ಯದ ಪ್ರಮುಖ ಘಟ್ಟವಾಗಿದೆ.
ಬಾಲಿವುಡ್ ಮತ್ತು ಸೌತ್ ನಟರ ದೊಡ್ಡ ತಾರಾಗಣ
ಪೌರಾಣಿಕ ಕಥಾಹಂದರದ ಈ ಸಿನಿಮಾದಲ್ಲಿ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇವರೊಂದಿಗೆ ರವಿ ದುಬೆ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್ ಹಾಗೂ ಲಾರಾ ದತ್ತಾ ಮುಂತಾದ ದಿಗ್ಗಜರು ಅಭಿನಯಿಸಿದ್ದಾರೆ.

ಎರಡು ಭಾಗಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ
ಈ ಬ್ರಹ್ಮಾಂಡ ಸಿನಿಮಾವನ್ನು ಎರಡು ಭಾಗಗಳ ಸರಣಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ‘ರಾಮಾಯಣ: ಭಾಗ 1’ ಸಿನಿಮಾ ನವೆಂಬರ್ 5ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ. ಎರಡನೇ ಭಾಗವು 2027ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.
Ramayana Movie: ಬಹುಭಾಷೆಗಳಲ್ಲಿ ತೆರೆಕಾಣಲಿರುವ ಮಹಾಕಾವ್ಯ
ಈ ಚಿತ್ರವು ಭಾರತದ ಪ್ರಮುಖ ಭಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆಯಿದೆ.




