ಸುದೀಪ್ (Kichcha Sudeepa) ಕಳೆದ 13 ವರ್ಷಗಳಿಂದಲೂ ಬಿಗ್ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಅವರನ್ನು ಹೊರತುಪಡಿಸಿದರೆ ಇನ್ಯಾರೂ ಸಹ ಈ ಶೋ ನಡೆಸಿಕೊಡಲಾರರು ಎಂಬಷ್ಟರ ಮಟ್ಟಿಗೆ ಅವರು ಶೋನ ಭಾಗವೇ ಆಗಿಬಿಟ್ಟಿದ್ದಾರೆ. ಈ 13 ಸೀಸನ್ಗಳಲ್ಲಿ ಹಲವಾರು ಥರಹದ ಸ್ಪರ್ಧಿಗಳನ್ನು ಅವರು ನೋಡಿದ್ದಾರೆ. ಹಲವಾರು ಕಠಿಣ ಸಂದರ್ಭಗಳನ್ನು, ಪರಿಸ್ಥಿತಿಗಳನ್ನು ನಿರೂಪಕರಾಗಿ ಎದುರಿಸಿದ್ದಾರೆ. ಹಲವಾರು ಬಾರಿ ವೇದಿಕೆ ಮೇಲೆ ಸಿಟ್ಟಾಗಿದ್ದಾರೆ. ಕಠಿಣವಾಗಿ ಮಾತನಾಡಿಯೂ ಇದ್ದಾರೆ. ಆದರೆ ಎಂದಿಗೂ ಭಾವುಕರಾಗದ್ದಿಲ್ಲ, ಕಣ್ಣೀರು ಹಾಕಿದ್ದಿಲ್ಲ. ಆದರೆ ನಿನ್ನೆಯ (ಅಕ್ಟೋಬರ್ 10) ಎಪಿಸೋಡಿನಲ್ಲಿ ಸುದೀಪ್ ಭಾವುಕರಾಗಿಬಿಟ್ಟರು.
ಹೌದು, ಸುದೀಪ್ ಅವರು ಶನಿವಾರದ ಎಪಿಸೋಡಿನಲ್ಲಿ ತುಸು ಭಾವುಕರಾಗಿಬಿಟ್ಟರು. ವೇದಿಕೆ ಮೇಲೆ ಗದ್ಗದಿತರಾದರು, ಅವರ ಕಣ್ಣಿಂದ ಅಪ್ರಯತ್ನಪೂರ್ವಕವಾಗಿ ಕಣ್ಣೀರು ಹರಿದು ಬಂತು. ಸುದೀಪ್ ಭಾವುಕರಾಗಿದ್ದು ನೋಡಿ ಅಲ್ಲಿ ಕೂತಿದ್ದ ಪ್ರೇಕ್ಷಕರು ಸಹ ಭಾವುಕರಾದರು. ಮೌನಕ್ಕೆ ಜಾರಿದ ಸುದೀಪ್, ಕಣ್ಣೀರು ಒರೆಸಿಕೊಂಡರು, ಮತ್ತೆ ಅದೇ ಗತ್ತಿನಿಂದ ನಿರೂಪಣೆ ಆರಂಭಿಸಿದರು. ಆದರೆ ಸುದೀಪ್ ಭಾವುಕರಾಗಿದ್ದು ಏಕೆ? ಅಂಥಹದ್ದೇನು ನಡೆಯಿತು? ಮಾಹಿತಿ ಇಲ್ಲಿದೆ ನೋಡಿ…
ಇದನ್ನೂ ಓದಿ: ತಿದ್ದುವ ಸಮಯ ಮುಗಿಯಿತು, ತಾಯಿಯ ಮಾತು ಕೇಳಿ ಕನ್ಫೆಷನ್ ರೂಮಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಂಜು
ನಡೆದಿದ್ದೇನು?
ಈ ವಾರ ಮನೆಯಲ್ಲಿ ಹಲವಾರು ಗಲಾಟೆಗಳು ನಡೆದಿದ್ದು. ಅದರಲ್ಲೂ ಗಾನವಿ ಕೆಲವರ ಮೇಲೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಗಗನ್ ಹಾಗೂ ಗಾನವಿ ನಡುವೆ ದೊಡ್ಡ ಜಗಳವೇ ಏರ್ಪಟ್ಟಿತ್ತು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುವಾಗ ಗಾನವಿ, ‘ನಿನ್ನ ತಾಯಿಯ ರೇಟೆಷ್ಟು?’ ಎಂದು ಕೇಳಿದ್ದರು. ಇದು ಗಗನ್ ಅವರನ್ನು ಅತಿಯಾಗಿ ಕೆರಳಿಸಿತ್ತು. ಇದೇ ವಿಷಯವನ್ನು ಸುದೀಪ್ ನಿನ್ನೆಯ ಎಪಿಸೋಡಿನಲ್ಲಿ ಚರ್ಚೆಗೆ ಎತ್ತಿಕೊಂಡರು.
ಸುದೀಪ್ ಹೇಳಿದ್ದೇನು?
ಸ್ಪರ್ಧಿಗಳನ್ನು ಬೈಯ್ಯಿರಿ ಆದರೆ ಅವರ ಕುಟುಂಬದವರ ಬಗ್ಗೆ ಮಾತನಾಡಬೇಡಿ ಎಂದ ಸುದೀಪ್, ನೀವು ಅದು ಹೇಗೆ ಅವರ ತಾಯಿಯ ಬಗ್ಗೆ ಮಾತನಾಡಿದಿರಿ ಎಂದು ಗಾನವಿಗೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ‘ತಾಯಿಗೆ ಬೆಲೆ ಕಟ್ಟಲು ನಿಮ್ಮಿಂದ ಸಾಧ್ಯವಾದರೂ ಆಗುತ್ತಾ?’ ಎಂದು ಪ್ರಶ್ನಿಸಿದ ಸುದೀಪ್, ‘ತಾಯಿಯ ಬಗ್ಗೆ ಹಾಗೆಲ್ಲ ಮಾತನಾಡಬೇಡಿ, ನಾನೂ ಸಹ ತಾಯಿಯನ್ನು ಕಳೆದುಕೊಂಡಿದ್ದೇನೆ’ ಎನ್ನುತ್ತಿದ್ದಂತೆ ಅವರಿಗೆ ದುಃಖ ಉಮ್ಮಳಿಸಿ ಬಂದು ಬಿಟ್ಟಿತು, ಸುದೀಪ್ ಅವರು ವೇದಿಕೆ ಮೇಲೆ ಕೆಲ ಕ್ಷಣ ಮೌನವಾಗಿಬಿಟ್ಟರು. ಸುದೀಪ್ ಅವರು ಕಣ್ಣೀರು ಹಾಕಿದ್ದು ನೋಡಿ ನೆರೆದಿದ್ದ ಪ್ರೇಕ್ಷಕರು ಹಲವರು ಭಾವುಕರಾಗಿಬಿಟ್ಟರು. ಸ್ಪರ್ಧಿಗಳು ಸಹ ಕಣ್ಣೀರು ಹಾಕಿದರು. ಕೊನೆಗೆ ಗಾನವಿ ಅವರು ಎಲ್ಲರ ಬಳಿ ಕೈಮುಗಿದು ಕ್ಷಮೆ ಕೇಳಿದರು.
ಬಳಿಕ ಸುದೀಪ್ ಸಹ, ಗಗನ್ ಅವರ ತಾಯಿಯ ಬಳಿ ಕ್ಷಮೆ ಕೇಳಿದರು. ನಮ್ಮ ಸ್ಪರ್ಧಿಗಳು ನಿಮ್ಮ ಬಗ್ಗೆ ಆಡಿರುವ ಮಾತಿಗೆ ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ, ದಯವಿಟ್ಟು ಕ್ಷಮಿಸಿ ಎಂದರು.




