ಬೆಂಗಳೂರು: ಫ್ರೀಡಂ ಪಾರ್ಕ್ನಲ್ಲಿ ಇಂದು ಬೆಳಿಗ್ಗೆ 10:30ಕ್ಕೆ ಸಿಜೆಪಿ (CJP) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ತೆಗೆದುಹಾಕಬೇಕು ಮತ್ತು ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ವಿಶೇಷ ತೀವ್ರ ಪರಿಷ್ಕರಣೆ SIR ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂಬುದು ಈ ಹೋರಾಟದ ಪ್ರಮುಖ ಆಗ್ರಹವಾಗಿದೆ. ದೇಶದ ಹಲವು ನಗರಗಳಲ್ಲಿ ನಡೆಯುತ್ತಿರುವ ಈ ಅಭಿಯಾನದ ಭಾಗವಾಗಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ದೀಪ್ಕೆ..ಧ್ರುವ್ ರಾಠಿ..ಪ್ರಕಾಶ್ ರಾಜ್ !
ಈ ಪ್ರತಿಭಟನೆಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ಮೊದಲ ಬಾರಿಗೆ ಬೆಂಗಳೂರಿನ ಹೋರಾಟದಲ್ಲಿ ನೇರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಕೇಂದ್ರ ಸರ್ಕಾರದ ನೀತಿಗಳನ್ನು ನಿರಂತರವಾಗಿ ಪ್ರಶ್ನಿಸುತ್ತಿರುವ ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ ಕೂಡ ಮೊದಲ ಬಾರಿಗೆ ಸಿಜೆಪಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಪಕ್ಷದ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ, ಬಹುಭಾಷಾ ನಟರಾದ ಪ್ರಕಾಶ್ ರಾಜ್, ಕಿಶೋರ್ ಕುಮಾರ್, ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಸೇರಿದಂತೆ ಹಲವು ಸಾಹಿತಿಗಳು, ಕಲಾವಿದರು ಮತ್ತು ಸಾಮಾಜಿಕ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ನಟ ಪ್ರಕಾಶ್ ರಾಜ್ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೋರಾಟದ ಸ್ಥಳದಲ್ಲೇ ಜನತಾ ನ್ಯಾಯಾಲಯ ಆಯೋಜಿಸಲಾಗಿದ್ದು, ಸುಪ್ರೀಂ ಕೋರ್ಟ್ನ ಮೂವರು ನಿವೃತ್ತ ನ್ಯಾಯಮೂರ್ತಿಗಳು SIR ನಿಂದ ತೊಂದರೆಗೀಡಾದವರ ದೂರುಗಳನ್ನು ಆಲಿಸಿ ಅಭಿಪ್ರಾಯ ಮಂಡಿಸಲಿದ್ದಾರೆ.
ಇದನ್ನೂ ಓದಿ : ಜನಪಥ್ ಧರಣಿ ವೇಳೆ ಸಂಘರ್ಷ: ಪ್ರಿಯಾಂಕಾ ಗಾಂಧಿ ತಳ್ಳಾಡಿ ಪರಚಿದ್ರಾ ಪೊಲೀಸರು..?
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಈಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆ ತನ್ನ ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಆದರೆ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಡುವುದು, ದಾಖಲೆಗಳ ಪರಿಶೀಲನೆ ಹೆಸರಿನಲ್ಲಿ ಸಾಮಾನ್ಯ ಜನರನ್ನು ಅಲೆದಾಡಿಸುವುದು ಮತದಾನದ ಹಕ್ಕನ್ನೇ ಮೊಟಕುಗೊಳಿಸಿದಂತೆ ಆಗುತ್ತದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ಜಾಗೃತ ನಗರದಲ್ಲಿ ಈ ಪ್ರತಿಭಟನೆ ನಡೆಯುತ್ತಿರುವುದು ಕೇವಲ ಒಂದು ಪಕ್ಷದ ಕಾರ್ಯಕ್ರಮವಾಗಿ ಉಳಿದಿಲ್ಲ.
ಧ್ರುವ್ ರಾಠಿ ಅವರಂತಹ ಡಿಜಿಟಲ್ ಮಾಧ್ಯಮದ ಪ್ರಭಾವಿ ಧ್ವನಿ ಮತ್ತು ಪ್ರಕಾಶ್ ರಾಜ್ ಅವರಂತಹ ನೇರ ನಿಲುವಿನ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು, ಈ ವಿಷಯವನ್ನು ಯುವಜನತೆ ಮತ್ತು ಮಧ್ಯಮ ವರ್ಗದ ನಡುವೆ ಹೆಚ್ಚು ತಲುಪಿಸುವ ಪ್ರಯತ್ನವಾಗಿದೆ. ಜನತಾ ನ್ಯಾಯಾಲಯದಂತಹ ಸಾಂಕೇತಿಕ ಮಾದರಿ ಮೂಲಕ ನ್ಯಾಯಾಂಗದ ನಿವೃತ್ತ ನ್ಯಾಯಮೂರ್ತಿಗಳಿಂದಲೇ ವಿಚಾರಣೆ ನಡೆಸುವುದು, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವ ಒತ್ತಡ ಹೇರುವ ತಂತ್ರವಾಗಿದೆ. ಇದು ಸರ್ಕಾರದ ವಿರುದ್ಧದ ನೇರ ಹೋರಾಟಕ್ಕಿಂತ ಹೆಚ್ಚಾಗಿ, ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗಾಗಿ ನಡೆಯುವ ನಾಗರಿಕ ಒತ್ತಾಯವಾಗಿ ರೂಪುಗೊಳ್ಳುತ್ತಿದೆ.




