ಬೆಂಗಳೂರು: ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಚುನಾಯಿತ ಪ್ರತಿನಿಧಿಗಳನ್ನು ದೆಹಲಿ ಪೊಲೀಸರು ಎಳೆದಾಡಿ, ಬಂಧಿಸಿ, ದೌರ್ಜನ್ಯ ನಡೆಸಿದ ರೀತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಪೋಸ್ಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವರ್ತನೆಯ ವಿರುದ್ಧ ಕಿಡಿಕಾರಿದ್ದಾರೆ.
ಪ್ರಶ್ನಿಸುವುದು & ಪ್ರತಿಭಟಿಸುವುದು ನಮ್ಮ ಹಕ್ಕು !
ದೆಹಲಿಯಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ಇತರ ನಾಯಕರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, “ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಇಂಡಿಯಾ ನಾಯಕರು ಪ್ರಜಾಪ್ರಭುತ್ವದ ಮೂಲಭೂತ ಹಕ್ಕನ್ನು ಚಲಾಯಿಸುತ್ತಿದ್ದರು. ನಮ್ಮ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಶ್ನಿಸುವುದು, ಹೊಣೆಗಾರಿಕೆ ಕೇಳುವುದು ಮತ್ತು ಉತ್ತರಗಳನ್ನು ಬಯಸುವುದು ಅವರ ಹಕ್ಕು” ಎಂದು ಹೇಳಿದ್ದಾರೆ.
ಅದರಲ್ಲೂ ವಿಶೇಷವಾಗಿ ಮಹಿಳಾ ನಾಯಕಿಯರ ಮೇಲಿನ ದೌರ್ಜನ್ಯವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. “ಶ್ರೀಮತಿ ಪ್ರಿಯಾಂಕಾ ಗಾಂಧಿ ಮತ್ತು ಇತರ ಮಹಿಳಾ ನಾಯಕಿಯರನ್ನು ನಡೆಸಿಕೊಂಡ ರೀತಿ ಅತ್ಯಂತ ಕಳವಳಕಾರಿಯಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ಚುನಾಯಿತ ಪ್ರತಿನಿಧಿಗಳ ವಿರುದ್ಧ ಬಲಪ್ರಯೋಗಕ್ಕೆ ಎಂದಿಗೂ ಕಾರಣವಾಗಬಾರದು” ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಜನಪಥ್ ಧರಣಿ ವೇಳೆ ಸಂಘರ್ಷ: ಪ್ರಿಯಾಂಕಾ ಗಾಂಧಿ ತಳ್ಳಾಡಿ ಪರಚಿದ್ರಾ ಪೊಲೀಸರು..?
ಚುನಾವಣಾ ಆಯೋಗದ SIR, ಮತದಾರರ ಪಟ್ಟಿ ಮತ್ತು ಪ್ರತಿಯೊಬ್ಬ ನಾಗರಿಕನ ಮತದ ರಕ್ಷಣೆಯ ಸುತ್ತ ಇರುವ ಪ್ರಶ್ನೆಗಳಿಗೆ ಪಾರದರ್ಶಕತೆ ಮತ್ತು ಉತ್ತರಗಳು ಬೇಕು, ಬಲಪ್ರಯೋಗ ಮತ್ತು ದೌರ್ಜನ್ಯವಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಭಿನ್ನಮತವನ್ನು ಹತ್ತಿಕ್ಕುವುದರಿಂದ ಪ್ರಜಾಪ್ರಭುತ್ವ ಬಲಗೊಳ್ಳುವುದಿಲ್ಲ. ಅಧಿಕಾರದಲ್ಲಿರುವವರು ಆಲಿಸುವ ಮತ್ತು ಉತ್ತರಿಸುವ ಧೈರ್ಯವನ್ನು ತೋರಿದಾಗ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ನಮ್ಮ ದೃಢ ನಂಬಿಕೆ ಅಚಲವಾಗಿದೆ. ಸತ್ಯವು ನಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ಯಾವುದೇ ಬಲ ಪ್ರಯೋಗ ಅಥವಾ ಬೆದರಿಕೆ ನಮ್ಮ ಸಂಕಲ್ಪವನ್ನು ಮುರಿಯಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇನ್ನು ಪ್ರತಿಯೊಂದು ಮತದ ಪಾವಿತ್ರ್ಯತೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆಯನ್ನು ಯಾವಾಗಲೂ ರಕ್ಷಿಸಬೇಕು ಎಂದು ಹೇಳುವ ಮೂಲಕ ಅವರು “ಜೈ ಸಂವಿಧಾನ್!” ಎಂಬ ಸಾಲು ಬರೆದುಕೊಂಡಿದ್ದಾರೆ.




