ಹಾಸನ : ನೈಸ್ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ನೈಸ್ ಯೋಜನೆ ತಮ್ಮ ಕೂಸು ಎಂಬ ಟೀಕೆಗೆ ತೀಕ್ಷ್ಣ ಪ್ರಶ್ನೆ ಎಸೆದರು. ನೈಸ್ ನನ್ನ ಕೂಸಾದರೆ ಅದನ್ನು ಹೆರಿಗೆ ಮಾಡಿಸಿದ ಸೂಲಗಿತ್ತಿ ಯಾರು ಎಂದು ಹೇಳಬೇಕು ಎಂದು ತಿರುಗೇಟು ನೀಡಿದರು. 1992ರ ಆರ್ಥಿಕ ಸುಧಾರಣೆ ಸಂದರ್ಭದಲ್ಲಿ ಅಮೆರಿಕದ ಕಂಪನಿ ಸೇರಿದಂತೆ ಮೂರು ಸಂಸ್ಥೆಗಳ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು ಮಾತ್ರ ತಮ್ಮ ಪಾತ್ರ, ಬಳಿಕ ತಾವು ದೆಹಲಿ ರಾಜಕಾರಣಕ್ಕೆ ಹೋದೆವು, ನಂತರ ನಡೆದ ಬೆಳವಣಿಗೆಗಳು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ನೈಸ್ ಆಸ್ತಿ ವಿಚಾರದಲ್ಲಿ ಸತ್ಯವನ್ನು ಎಷ್ಟೇ ಪ್ರಯತ್ನಿಸಿದರೂ ಮುಚ್ಚಿಡಲು ಆಗದು. ಸಿದ್ದರಾಮಯ್ಯ ದೀಪದ ಬೆಳಕಿನಲ್ಲಿ ಓದಿದೆ ಎನ್ನುತ್ತಾರೆ, ತಾವು ವಿದ್ಯುತ್ ಇಲ್ಲದ ಹಳ್ಳಿಯಲ್ಲಿ ಓದಿ ಬಂದವರು, ದೇವೇಗೌಡ ಸಾಯಬಹುದು ಆದರೆ ಅವರ ಕೆಲಸವನ್ನು ಇತಿಹಾಸ ಮರೆಯುವುದಿಲ್ಲ ಎಂದರು.
ಇದನ್ನೂ ಓದಿ : ರಾಜಕಾರಣಿಗಳಿಗೆ ಹಣ ಕೊಟ್ಟು ಕೊಟ್ಟು ಅಧಿಕಾರಿಗಳು ಸಾಲಗಾರರಾಗಿದ್ದಾರೆ – ಸಿ.ಎಸ್. ಪುಟ್ಟರಾಜು
ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ದೇವೇಗೌಡರು, ಮೂತ್ರಪಿಂಡದ ಸಮಸ್ಯೆ ಇರುವುದು ನಿಜ, ಆದರೆ ಡಯಾಲಿಸಿಸ್ ನಡೆಯುವುದು ಕಿಡ್ನಿಗೆ ಹೊರತು ಮೆದುಳಿಗಲ್ಲ, ತಮ್ಮ ಮೆದುಳು ಸಂಪೂರ್ಣ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಬಾರಿಯ ಪಿತೃಪಕ್ಷ ಆಚರಣೆಯನ್ನು ಸ್ವಗ್ರಾಮ ಹರದನಹಳ್ಳಿಯಲ್ಲಿ ನಾಲ್ವರು ಪುತ್ರರು ಮತ್ತು ಮೊಮ್ಮಕ್ಕಳ ಜೊತೆ ನೆರವೇರಿಸಿ, ಅದು ಮುಗಿದ ಕೂಡಲೇ ಸಕ್ರಿಯ ರಾಜಕಾರಣದಲ್ಲಿ ಮತ್ತಷ್ಟು ತೊಡಗಿಕೊಳ್ಳುವುದಾಗಿ ಹೇಳಿದರು. ಎಸ್ಐಆರ್ ವಿಚಾರ ಸುಪ್ರೀಂ ಕೋರ್ಟ್ನಲ್ಲಿದ್ದು ತೀರ್ಪಿನ ನಂತರ ಹಿರಿಯ ನಾಗರಿಕನಾಗಿ ಪ್ರತಿಕ್ರಿಯಿಸುವುದಾಗಿ ತಿಳಿಸಿದರು. ರಾಹುಲ್ ಗಾಂಧಿ ಯುವಕರಾಗಿದ್ದು ವೇಗವಾಗಿ ಹೋಗುವ ಆತುರದಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮುಂಬರುವ ಪರಿಷತ್ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ, ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಬದುಕು ರೈತರಿಗೆ ಸೀಮಿತ !
ಇದೇ ವೇಳೆ ತಮ್ಮ ಇಡೀ ರಾಜಕೀಯ ಬದುಕು ರೈತರಿಗಾಗಿ ಮೀಸಲು, 22 ವರ್ಷ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ್ದು, ತಮ್ಮ ಭಾಷಣಗಳಿರುವ ನೇಗಿನ ಗೆರೆಗಳು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿದ್ದು 15 ಸಾವಿರ ಪ್ರತಿಗಳು ಮಾರಾಟವಾಗಿವೆ ಎಂದು ಹೇಳಿದರು. ಬಂಗಾರಪ್ಪ ನದಿ ನೀರು ಬಿಡುವುದಿಲ್ಲ ಎಂದಾಗ ರಾಷ್ಟ್ರಪತಿಗಳು ಅದನ್ನು ಒಂಬತ್ತು ನ್ಯಾಯಮೂರ್ತಿಗಳ ಪೀಠಕ್ಕೆ ಕಳುಹಿಸಿದ್ದನ್ನು ಸ್ಮರಿಸಿದರು.
ನೈಸ್ ಯೋಜನೆ ಕರ್ನಾಟಕದಲ್ಲಿ ಮೂರು ದಶಕಗಳಿಂದ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಮೂಲ ಉದ್ದೇಶ ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್ ಆಗಿದ್ದರೂ ಭೂ ಸ್ವಾಧೀನ, ಹೆಚ್ಚುವರಿ ಭೂಮಿ ಬಳಕೆ ಮತ್ತು ಕಾನೂನು ಹೋರಾಟಗಳಿಂದಾಗಿ ವಿವಾದ ದೊಡ್ಡದಾಗಿದೆ. ಒಪ್ಪಂದಕ್ಕೆ ಸಹಿ ಹಾಕುವುದು ಮತ್ತು ಅನುಷ್ಠಾನ ಹಂತದಲ್ಲಿ ಭೂಮಿ ಮಂಜೂರು ಮಾಡುವುದು ಬೇರೆ ಬೇರೆ ಸರ್ಕಾರಗಳ ನಿರ್ಧಾರ ಎಂಬ ವ್ಯತ್ಯಾಸವನ್ನು ದೇವೇಗೌಡರು ಒತ್ತಿ ಹೇಳಲು ಯತ್ನಿಸಿದ್ದಾರೆ. ಕಾಂಗ್ರೆಸ್ ಇದನ್ನು ಭ್ರಷ್ಟಾಚಾರದ ಸಂಕೇತವಾಗಿ ಬಿಂಬಿಸಿದರೆ ಜೆಡಿಎಸ್ ಇದನ್ನು ಅಭಿವೃದ್ಧಿ ದೃಷ್ಟಿಕೋನದ ಯೋಜನೆ ಎಂದು ಸಮರ್ಥಿಸುತ್ತದೆ. ಬ್ರೇನ್ ಪಕ್ಕಾ ಇದೆ ಎಂಬ ಹೇಳಿಕೆ ಮೂಲಕ ವಯಸ್ಸಿನ ಕಾರಣಕ್ಕೆ ತಮ್ಮನ್ನು ಮೂಲೆಗುಂಪು ಮಾಡುವ ಚರ್ಚೆಗೆ ತಿರುಗೇಟು ನೀಡಿ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ.




