☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

SIR : ಎಸ್‌ಐಆರ್ ನಡುವೆ ಫಾರಂ-7 ವಿವಾದ: ರಾಜ್ಯಪಾಲರ ಅಂಗಳಕ್ಕೆ ಬಿಜೆಪಿ-ಜೆಡಿಎಸ್ ದೂರು

Image of SIR politics in Karnataka

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ಎಸ್‌ಐಆರ್ ವರ್ಸಸ್ ಎಫ್‌ಐಆರ್ ಎಂಬ ರಾಜಕೀಯ ಸಂಘರ್ಷಕ್ಕೆ ತಿರುಗಿದೆ. ಈ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ ಮತ್ತು ಸರ್ಕಾರ ಬೆದರಿಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ಇಂದು ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

ಫಾರಂ-7 ದುರ್ಬಳಕೆ ಆರೋಪ !

ಈ ವಿವಾದದ ಕೇಂದ್ರಬಿಂದು ಮತದಾರರ ಹೆಸರು ಕೈಬಿಡಲು ಬಳಸುವ ಫಾರಂ-7 ದುರ್ಬಳಕೆ. ಈ ನಮೂನೆಯನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಅದರ ಬೆನ್ನಲ್ಲೇ ಬಳ್ಳಾರಿಯಲ್ಲಿ 7500ಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆಯಲು ಯತ್ನಿಸಿದ ಆರೋಪದಲ್ಲಿ ಬಿಜೆಪಿ ಬೂತ್ ಮಟ್ಟದ ಏಜೆಂಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕ್ರಮವನ್ನು ಅಧಿಕಾರದ ದುರುಪಯೋಗ ಎಂದು ಖಂಡಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎನ್‌ಡಿಎ ನಾಯಕರು, ಕಾರ್ಯಕರ್ತರಲ್ಲಿ ಭಯ ಹುಟ್ಟಿಸಲು ಸರ್ಕಾರ ಎಫ್‌ಐಆರ್ ಅಸ್ತ್ರ ಬಳಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯದ ಗಂಭೀರತೆ ಹಿನ್ನೆಲೆಯಲ್ಲಿ ಮೈತ್ರಿ ನಾಯಕರು ಈಗಾಗಲೇ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಲಿಖಿತ ದೂರು ನೀಡಿ ನಿಷ್ಪಕ್ಷಪಾತ ತನಿಖೆ ಮತ್ತು ಮತದಾರರ ಹಕ್ಕು ರಕ್ಷಣೆಗೆ ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಜಾಪ್ರಭುತ್ವದ ಅತ್ಯಂತ ಮೂಲಭೂತ ಪ್ರಕ್ರಿಯೆ. ಮೃತಪಟ್ಟವರು, ಶಾಶ್ವತವಾಗಿ ಬೇರೆಡೆಗೆ ವಲಸೆ ಹೋದವರು, ನಕಲಿ ಮತ್ತು ಪುನರಾವರ್ತಿತ ನಮೂದುಗಳನ್ನು ತೆಗೆದುಹಾಕಿ ನಿಜವಾದ ಮತ್ತು ಅರ್ಹ ಮತದಾರರ ಹಕ್ಕನ್ನು ಕಾಪಾಡುವುದು ಇದರ ಪ್ರಧಾನ ಉದ್ದೇಶ. ಆದರೆ ಈ ಉದ್ದೇಶಕ್ಕಾಗಿ ಇರುವ ಫಾರಂ-7 ನಂತಹ ಕಾನೂನುಬದ್ಧ ಸಾಧನವೇ ರಾಜಕೀಯ ಅಸ್ತ್ರವಾಗಿ ಬಳಕೆಯಾಗಲು ಆರಂಭಿಸಿದಾಗ ಇಡೀ ಪ್ರಕ್ರಿಯೆಯ ವಿಶ್ವಾಸಾರ್ಹತೆ ಗಂಭೀರ ಪ್ರಶ್ನೆಗೆ ಒಳಗಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಬಾರಿ ಏಳು ಸಾವಿರದ ಐನೂರಕ್ಕೂ ಹೆಚ್ಚು ಮತದಾರರ ಹೆಸರನ್ನು ತೆಗೆಯಲು ಪ್ರಯತ್ನ ನಡೆದಿರುವುದು ಸಾಮಾನ್ಯ ತಪ್ಪಲ್ಲ, ಇದು ವ್ಯವಸ್ಥಿತ ಮತ್ತು ಉದ್ದೇಶಪೂರ್ವಕ ಪ್ರಯತ್ನ ಎಂಬ ವಾದ ಕಾಂಗ್ರೆಸ್ ನವರದ್ದು.

ಇದನ್ನೂ ಓದಿ : ಸುಪ್ರೀಂ ನೋಟಿಸ್ ಬೆನ್ನಲ್ಲೇ ಸಿಇಸಿ ಜ್ಞಾನೇಶ್ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ

ಇಂತಹ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವುದು ಕಾನೂನಾತ್ಮಕವಾಗಿ ಸಂಪೂರ್ಣ ಸಮರ್ಥನೀಯ ಕ್ರಮ. ಆದರೆ ಮತ್ತೊಂದೆಡೆ ರಾಜ್ಯ ಸರ್ಕಾರದ ಸೂಚನೆಯಂತೆ ವಿರೋಧ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳನ್ನು ಮಾತ್ರ ಆಯ್ದು ಗುರಿಯಾಗಿಸಲಾಗುತ್ತಿದೆ ಎಂಬ ಬಿಜೆಪಿ-ಜೆಡಿಎಸ್ ಆರೋಪವನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು. ಕರ್ನಾಟಕದಲ್ಲಿ ಮತದಾರರ ಪಟ್ಟಿ ಯಾವಾಗಲೂ ಅತ್ಯಂತ ಸೂಕ್ಷ್ಮ ರಾಜಕೀಯ ವಿಷಯ. ಆಡಳಿತ ಪಕ್ಷ ಅಧಿಕಾರದ ಬಲದಿಂದ ತಮಗೆ ಅನುಕೂಲಕರ ಮತಗಳನ್ನು ಉಳಿಸಿಕೊಂಡು ವಿರೋಧಿ ನೆಲೆಯ ಮತಗಳನ್ನು ತಂತ್ರಗಾರಿಕೆಯಿಂದ ತೆಗೆಯುತ್ತದೆ ಎಂಬ ದೂರು ಪ್ರತಿ ಚುನಾವಣೆಯಲ್ಲೂ ಕೇಳಿಬರುವ ಸಾಮಾನ್ಯ ಆರೋಪ. ಈ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಇಂದು ರಾಜ್ಯಪಾಲರ ಮೊರೆ ಹೋಗುತ್ತಿರುವುದು ಕೇವಲ ರಾಜಕೀಯ ಪ್ರದರ್ಶನವಲ್ಲ, ಅದು ಸಾಂವಿಧಾನಿಕ ಒತ್ತಡ ಹೇರುವ ತಂತ್ರವೂ ಹೌದು.

ರಾಜ್ಯಪಾಲರಿಗೆ ನೇರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಇಲ್ಲದಿದ್ದರೂ ಅವರಿಗೆ ಸಲ್ಲಿಸುವ ದೂರು ಚುನಾವಣಾ ಆಯೋಗದ ಮೇಲೆ ನೈತಿಕ ಮತ್ತು ಆಡಳಿತಾತ್ಮಕ ಪ್ರಭಾವ ಬೀರುತ್ತದೆ. ಪ್ರತಿ ಫಾರಂ-7 ಅರ್ಜಿಯ ಹಿಂದೆ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ, ಸಂಬಂಧಿತ ಮತದಾರನಿಗೆ ನೋಟಿಸ್ ಜಾರಿ ಮತ್ತು ಮುಕ್ತ ವಿಚಾರಣೆ ನಡೆಯಲೇಬೇಕು. ಈ ಎಲ್ಲ ಪ್ರಕ್ರಿಯೆಯನ್ನು ಎಲ್ಲ ರಾಜಕೀಯ ಪಕ್ಷಗಳ ಬೂತ್ ಏಜೆಂಟ್‌ಗಳ ಸಮ್ಮುಖದಲ್ಲಿ, ವಿಡಿಯೋ ದಾಖಲೀಕರಣದೊಂದಿಗೆ ನಡೆಸಿದರೆ ಮಾತ್ರ ಅನುಮಾನ ಸಂಪೂರ್ಣವಾಗಿ ದೂರವಾಗುತ್ತದೆ. ಜೊತೆಗೆ ಡಿಜಿಟಲ್ ಪರಿಶೀಲನೆ, ಆಧಾರ್ ಜೋಡಣೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದರೆ ದುರುಪಯೋಗ ತಡೆಯಬಹುದು.