☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

CJP : ಕಾಕ್ರೋಚ್ ಪಾರ್ಟಿ ಮುಖಂಡ ಅಭಿಜಿತ್ ದೀಪ್ಕೆ ಮುಂಬೈನಲ್ಲಿ ಅರೆಸ್ಟ್

Image of CJP Abhijith deepke

ಮಹಾರಾಷ್ಟ್ರ : ಮುಂಬೈನಲ್ಲಿ ಕಾಕ್ರೋಚ್ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅರೆಸ್ಟ್ ಆಗಿರುವ ಪ್ರಕರಣ ಮರೀನ್ ಡ್ರೈವ್ ನಲ್ಲಿ ನಡೆದಿದೆ. ಮರೀನ್ ಡ್ರೈವ್ ಪ್ರದೇಶದಲ್ಲಿ ಫಲಕಗಳನ್ನು ಹಿಡಿದು ಸಾರ್ವಜನಿಕರೊಂದಿಗೆ ಮಾತನಾಡುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಗಾಂಧಿ ಜಯಂತಿಯಂದು ತಮ್ಮ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲು ಯೋಜಿಸಿದ್ದಕ್ಕೂ ಮುನ್ನವೇ ಈ ಬೆಳವಣಿಗೆ ನಡೆದಿರುವುದು ಚರ್ಚೆಗೆ ಕಾರಣವಾಗಿದೆ.

ದೀಪ್ಕೆ ತಮ್ಮ ಬೆಂಬಲಿಗರೊಂದಿಗೆ ಪ್ಲೇಕಾರ್ಡ್ ಹಿಡಿದು ಜನರನ್ನು ಭೇಟಿಯಾಗುತ್ತಿದ್ದ ವೇಳೆ ಮಹಿಳಾ ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಅವರನ್ನು ವಾಹನದಲ್ಲಿ ಮರೀನ್ ಡ್ರೈವ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ. ಇದು ಬಂಧನವಲ್ಲ, ಕೇವಲ ವಿಚಾರಣೆಗಾಗಿ ಕರೆತಂದಿದ್ದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನೇ ಪ್ರಶ್ನಿಸುತ್ತಾ ಸಾರ್ವಜನಿಕರೊಂದಿಗೆ ಚರ್ಚಿಸುತ್ತಿದ್ದ ಕಾರಣ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೀಪ್ಕೆ ಅವರು, ಮಹಿಳಾ ಅಧಿಕಾರಿಯೊಬ್ಬರು ಚಹಾ ಕುಡಿಯಲು ಬನ್ನಿ ಎಂದು ಕರೆದು ಠಾಣೆಯಲ್ಲಿ ಕೂರಿಸಿ ಯಾವುದೇ ಚಹಾ ನೀಡದೆ ಸಮಯ ವ್ಯರ್ಥ ಮಾಡಿದರು, ನಂತರ ಹಿರಿಯ ಅಧಿಕಾರಿಗಳ ಸೂಚನೆ ಬಂದ ಮೇಲೆಯೇ ಬಿಡುಗಡೆ ಮಾಡಲಾಯಿತು ಎಂದು ಆರೋಪಿಸಿದ್ದಾರೆ.

ಎಸ್.ಐ.ಆರ್ ವಿರೋಧಿಸಿ ಪ್ರೊಟೆಸ್ಟ್ !

ಇನ್ನು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆಗೆ ಕರೆ ನೀಡಿತ್ತು, ಆದರೆ ಸಂಚಾರ ಅಡಚಣೆ, ಸಾರ್ವಜನಿಕರಿಗೆ ತೊಂದರೆ ಮತ್ತು ಅಗತ್ಯ ಅನುಮತಿ ಇಲ್ಲ ಎಂಬ ಕಾರಣಕ್ಕೆ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಎಸ್.ಐ.ಆರ್ ಹೈಡ್ರಾಮ : ಫಾರಂ-7 ಗೋಲ್ ಮಾಲ್ ವಿರುದ್ಧ ಕ್ರಮಕ್ಕೆ ಸಿಇಒ ಆದೇಶ

ಈ ಪ್ರಕರಣ ಕೇವಲ ಒಬ್ಬ ಕಾರ್ಯಕರ್ತನನ್ನು ಠಾಣೆಗೆ ಕರೆದೊಯ್ದ ಸಣ್ಣ ಘಟನೆಯಾಗಿ ಕಾಣಿಸಬಹುದಾದರೂ, ಇಂತಹ ವಿಡಂಬನಾತ್ಮಕ ರಾಜಕೀಯ ಪಕ್ಷಗಳು ಇತ್ತೀಚೆಗೆ ದೇಶಾದ್ಯಂತ ಹೆಚ್ಚಾಗುತ್ತಿದ್ದು, ಯುವ ಮತದಾರರನ್ನು ಸೆಳೆಯುತ್ತಿವೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ಅವರ ಪ್ರಮುಖ ಆರೋಪವಾಗಿದ್ದು, ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಸಂಬಂಧಿಸಿದ ವಿಚಾರ. ಈ ಆರೋಪದಲ್ಲಿ ಹುರುಳಿದ್ದರೆ ಆಯೋಗ ದಾಖಲೆ ಸಮೇತ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ಇಂತಹ ಅನುಮಾನಗಳು ಮತ್ತಷ್ಟು ಪ್ರತಿಭಟನೆಗಳಿಗೆ ಕಾರಣವಾಗುತ್ತವೆ. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುವುದು ಪ್ರತಿಭಟನೆಯ ಒಂದು ಭಾಗವಾಗಿದ್ದರೂ, ಗಾಂಧಿ ಜಯಂತಿಯಂದು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು ಸಾಂಕೇತಿಕ ಮಹತ್ವ ಹೊಂದಿದೆ.