ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಕರ್ನಾಟಕದ ಬೆಳಗಾವಿ ಭಾಗದಲ್ಲಿ ಸುಮಾರು ಹದಿನೈದು ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸಲು ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಹಾಗೂ ಚುನಾವಣಾ ಆಯೋಗಗಳು ಜಂಟಿಯಾಗಿ ಈ ಅಕ್ರಮ ಎಸಗುತ್ತಿದ್ದು, ಆಡಳಿತಾರೂಢ ಪಕ್ಷಕ್ಕೆ ಬೆಂಬಲ ನೀಡದ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತದಾನದ ಹಕ್ಕಿನಿಂದ ವಂಚಿಸುವ ಕುತಂತ್ರ ನಡೆಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಫಾರಂ – 7 ಗೊಂದಲದ ಗೂಡು !
ಕೇವಲ ಮೂರು ದಿನಗಳ ಅಂತರದಲ್ಲಿ ಬೃಹತ್ ಸಂಖ್ಯೆಯ ಫಾರ್ಮ್-೭ ಅರ್ಜಿಗಳನ್ನು ಸಲ್ಲಿಸುವ ಮೂಲಕ ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತದಾರರ ಹೆಸರುಗಳನ್ನು ಕೈಬಿಡಲು ಒತ್ತಡ ಹೇರಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ. ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳ ಮೇಲೆಯೂ ಸಹಿ ಹಾಕುವಂತೆ ಪ್ರಭಾವ ಬೀರಲಾಗುತ್ತಿದೆ ಎಂದು ತಿಳಿಸಿರುವ ಅವರು, ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಮತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮತದಾರರ ಪಟ್ಟಿ ಪರಿಷ್ಕರಣೆ ಗೊಂದಲ: ಫಾರ್ಮ್-7 ದುರ್ಬಳಕೆ ವಿರುದ್ಧ ಸಮರಕ್ಕೆ ಸಿಎಂ ಡಿ.ಕೆ ಕರೆ
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಹಾಗೂ ಪ್ರಶಾಸನ ವ್ಯವಸ್ಥೆಯ ದುರ್ಬಳಕೆ ಆಗುತ್ತಿದೆ ಎಂಬ ಆರೋಪಗಳು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಪ್ರಶ್ನಿಸುವಂತೆ ಮಾಡಿವೆ. ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಕಾಯುವುದು ಚುನಾವಣಾ ಆಯೋಗದ ಮೂಲಭೂತ ಕರ್ತವ್ಯವಾಗಿದ್ದು, ಇಂತಹ ಆರೋಪಗಳು ಬಂದಾಗ ತಕ್ಷಣವೇ ಪಾರದರ್ಶಕ ತನಿಖೆ ನಡೆಸಿ ಸಾರ್ವಜನಿಕರ ಸಂಶಯಗಳನ್ನು ನಿವಾರಿಸುವುದು ಅಗತ್ಯ. ರಾಜಕೀಯ ಮೇಲಾಟಗಳ ನಡುವೆ ನೈಜ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಅತ್ಯಂತ ಮುಖ್ಯವಾಗಿದೆ.




