ವಿಶ್ವದ ಮೂಲೆ ಮೂಲೆಯಲ್ಲಿ ಮೈಕ್ರೋಡ್ರಾಮಾಗಳು (Micro Drama) ಜೋರಾಗಿಯೇ ಸದ್ದು ಮಾಡುತ್ತಿವೆ. ಚೀನಾ, ದಕ್ಷಿಣ ಕೊರಿಯಾದಲ್ಲಿ ಮೈಕ್ರೋಡ್ರಾಮಾಗಳು ಈಗಾಗಲೇ ಜನರನ್ನು ಸೆಳೆದಿದ್ದು, ತನ್ನದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಈಗ ಈ ಮೈಕ್ರೋಡ್ರಾಮಾಗಳು ಭಾರತಕ್ಕೂ ಲಗ್ಗೆ ಇಟ್ಟಿದೆ. ಮೊಬೈಲ್ ಬಳಕೆದಾರರನ್ನು ಈ ಮೈಕ್ರೋ ಸೀರಿಸ್ಗಳು ತನ್ನೆಡೆಗೆ ಸೆಳೆಯುತ್ತಿವೆ.
ಭಾರತದ ಜನಪ್ರಿಯ ಓಟಿಟಿ ಪ್ಲಾಟ್ಫಾರ್ಮ್ಗಳು ಮೈಕ್ರೋಡ್ರಾಮಾಗಳಿಗಾಗಿಯೇ ಪ್ರತ್ಯೇಕ ಆ್ಯಪ್ ಹೊರತಂದಿವೆ. ಅದರಲ್ಲಿ ‘ಬುಲೆಟ್’ (BULLET) ಮೈಕ್ರೋಡ್ರಾಮಾ ಆ್ಯಪ್ ಕೂಡ ಒಂದು. ಇದು ಈಗ ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಅದರ ದಕ್ಷಿಣ ಭಾರತದ ಭಾಷೆಗಳಲ್ಲಿ ಮೂಡಿ ಬಂದಿರೋ ಕಿರು ಸರಣಿಗಳು ಭಾಷೆ ಮತ್ತು ರಾಜ್ಯಗಳ ಗಡಿಗಳನ್ನು ಮೀರಿ ಜನರನ್ನು ತಲುಪುತ್ತಿವೆ.
‘ಬುಲೆಟ್’ನಲ್ಲಿ ಲವ್ ಸ್ಟೋರಿ, ಫ್ಯಾಮಿಲಿ ಡ್ರಾಮಾ, ಕ್ರೀಡೆ ಸೇರಿದಂತೆ ಕ್ರೈಮ್ ಥ್ರಿಲ್ಲರ್ ಕಥೆಗಳು ಸದ್ದು ಮಾಡುತ್ತಿವೆ. ಬುಲೆಟ್ ಆ್ಯಪ್ನಲ್ಲಿರುವ ದಕ್ಷಿಣ ಭಾರತದ ಮೈಕ್ರೋಡ್ರಾಮಗಳು ಬೇರೆ ಬೇರೆ ಕಡೆಗೆ ಸದ್ದು ಮಾಡುತ್ತಿವೆ. ‘ಆಟೋ ರಾಜ’ ಕನ್ನಡದ ಕಿರು ಚರಣಿ ಕರ್ನಾಟಕ ಅಷ್ಟೇ ಅಲ್ಲದೆ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲೂ ಸದ್ದು ಮಾಡುತ್ತಿದೆ. ಹಾಗೇ ‘ಮೈ ಡಿಯರ್ ಸಿಇಒ’ ಕರ್ನಾಟಕ, ಕೇರಳ ಮತ್ತು ದೆಹಲಿವರೆಗೂ ಜನಪ್ರಿಯತೆ ಗಳಿಸಿದೆ. ಅದರಲ್ಲೂ ‘ಆಟೋ ರಾಜ’ ಮತ್ತು ‘ಮೈ ಡಿಯರ್ ಸಿಇಒ’ ಕಿರು ಸರಣಿಯನ್ನು ಮಹಿಳಾ ಪ್ರೇಕ್ಷಕರು ಹೆಚ್ಚು ಇಷ್ಟ ಪಡುತ್ತಿದ್ದಾರೆ.
ಬುಲೆಟ್ ಆ್ಯಪ್ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿ ಸದ್ದು ಮಾಡಿದ ಪ್ರಮುಖ ದಕ್ಷಿಣ ಭಾರತೀಯ ಸರಣಿಗಳ ವಿವರ ಇಲ್ಲಿದೆ.
ಆಟೋ ರಾಜ (Auto Raja)
ಅಭಿನವ್ ವಿಶ್ವನಾಥನ್ (ವಿಜಯ್) ಹಾಗೂ ಭೂಮಿಕಾ ರಮೇಶ್ (ದಿಯಾ) ಅಭಿನಯದ ‘ಆಟೋ ರಾಜ’ ಮೈಕ್ರೋಡ್ರಾಮ ಕೋಟ್ಯಾಧಿಪತಿ ಆಟೋ ಚಾಲಕನಾಗಿದ್ದೇಗೆ? ಅನ್ನೋದನ್ನು ಹೇಳುತ್ತಿದೆ. ಆಟೋ ಚಾಲಕ ವಿಜಯ್ ಹಾಗೂ ಕಾರ್ಪೊರೇಟ್ ಉದ್ಯೋಗಿ ದಿಯಾ ಇಬ್ಬರ ಲವ್ ಸ್ಟೋರಿ ಈ ಮೈಕ್ರೋಡ್ರಾಮಾದಲ್ಲಿದೆ. ಈ ರೋಮ್ಯಾಂಟಿಕ್ ಡ್ರಾಮಾವನ್ನು ವೀಕ್ಷಿಸಿದವರಲ್ಲಿ ಶೇ. 68 ರಷ್ಟು ಮಹಿಳೆಯರಿದ್ದಾರೆ.
ರಾಗ್ಸ್ ಟು ರಾಜಕುಮಾರಿ (Rags to Rajkumari)
ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಾದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ನಟಿಸಿರುವ ‘ರಾಗ್ಸ್ ಟು ರಾಜಕುಮಾರಿ’ ಸದ್ದು ಮಾಡುತ್ತಿದೆ. ಕನ್ನಡದ ಈ ರೋಮ್ಯಾಂಟಿಕ್-ಫ್ಯಾಮಿಲಿ ಡ್ರಾಮಾ, ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣದಲ್ಲೂ ಜನಪ್ರಿಯತೆ ಗಳಿಸಿದೆ.
ಕಿಟ್ ಬಾಯ್ ಟು ಕ್ರಿಕೆಟ್ ಕಿಂಗ್ (Kit Boy to Cricket King)
‘ಕಿಟ್ ಬಾಯ್ ಟು ಕ್ರಿಕೆಟ್ ಕಿಂಗ್’ ಕನ್ನಡದ ಸ್ಪೋರ್ಟ್ಸ್ ಡ್ರಾಮಾ. ಇದು ಕಿಟ್ ಬಾಯ್ ಕೆಲಸ ಮಾಡುತ್ತಾ ಕ್ರಿಕೆಟರ್ ಬೆಳೆಯುವ ‘ರಾಜಾ’ ಎಂಬ ಯುವಕನ ಕಥೆ. ವರುಣ್ ಆರಾಧ್ಯ, ತೇಜಸ್ ಗೌಡ ಮತ್ತು ಅಭೇಜ್ಞಾ ವಿಶ್ವನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಡ್ರಾಮಾ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.
ಮೈ ಡಿಯರ್ ಸಿಇಒ (My Dear CEO)
ಪ್ರಣಯ ಮತ್ತು ಕಾರ್ಪೊರೇಟ್ ಜಗತ್ತಿನ ಕಥೆಯೇ ‘ಮೈ ಡಿಯರ್ ಸಿಇಒ’. ಅಕ್ಷಯ್ ಕುಮಾರ್ ಮತ್ತು ಅಶ್ವಥಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಲಾ (ಅಶ್ವಥಿ) ತಾನು ವಿವಾಹವಾಗಿರುವ ಕಥಿರ್ (ಅಕ್ಷಯ್ ಕುಮಾರ್) ಒಬ್ಬ ಕೋಟ್ಯಧಿಪತಿ ಎಂಬ ಸಂಗತಿ ತಿಳಿಯದೆ ಪ್ರೀತಿಸುತ್ತಾಳೆ. ಆದರೆ, ಕಥಿರ್ನ ಮಾಜಿ ಲವರ್ ಆತನ ನಿಜವಾದ ರಹಸ್ಯವನ್ನು ರಟ್ಟು ಮಾಡುತ್ತಾಳೆ. ನಿಲಾಳ ಪ್ರೀತಿ ಉಳಿಸಿಕೊಳ್ಳಲು ಕಥಿರ್ ಏನೆಲ್ಲ ಮಾಡುತ್ತಾನೆ ಅನ್ನೋದೇ ಕಥೆ. ಈ ಸರಣಿಯು ತಮಿಳುನಾಡು, ಕರ್ನಾಟಕ, ಕೇರಳ ಮತ್ತು ದೆಹಲಿ ಜನಪ್ರಿಯತೆ ಕಂಡಿದೆ.
ಮೀಟರ್ ಮೇಲ್ ಕಾದಲ್ (Meter Mel Kadhal)
ಪ್ರಭಾವಿ ಸಿಇಒ ಒಬ್ಬ ತಾನು ಪ್ರೀತಿಸುವ ಯುವತಿಯ ಮನಸ್ಸು ಗೆಲ್ಲಲು ಆಟೋ ಚಾಲಕನಾಗುತ್ತಾನೆ. ಇಬ್ಬರ ಬಾಂಧವ್ಯ ಬೆಳೆದಂತೆ ತನ್ನ ನಿಜವಾದ ಗುರುತನ್ನು ಮರೆಮಾಚಿ ತನ್ನದ್ದೇ ಸ್ವಂತ ಕಂಪನಿಯಲ್ಲೇ ಕೆಲಸ ಸಿಗುವಂತೆ ಮಾಡುತ್ತಾನೆ. ಈ ಸರಣಿಯು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಶೇ.57ರಷ್ಟು ಮಹಿಳೆಯರು ವೀಕ್ಷಕರನ್ನು ಹೊಂದಿದೆ.
ಡಿಯರ್ ಡಾನ್ (Dear Don)
‘ಡಿಯರ್ ಡಾನ್’ ಆಕ್ಷನ್ ಹಾಗೂ ರೊಮ್ಯಾನ್ಸ್ ಮೈಕ್ರೋಡ್ರಾಮಾ ಡಾ.ವೆಣ್ಬಾ ಎಂಬ ವೈದ್ಯೆಯ ಸುತ್ತ ಸಾಗುತ್ತದೆ. ಗಾಯಗೊಂಡ ಅಜ್ಞಾತ ವ್ಯಕ್ತಿಯೊಬ್ಬನಿಗೆ ಆಕೆ ಚಿಕಿತ್ಸೆ ನೀಡುತ್ತಾಳೆ. ಆತ ಮಾಫಿಯಾ ಡಾನ್ ಅರ್ಜುನ್ ಕುಮಾರ್ ಅನ್ನೋದು ಗೊತ್ತಿರೋಲ್ಲ. ಈ ವೇಳೆ ವೆಣ್ಬಾಳ ಧೈರ್ಯಕ್ಕೆ ಅರ್ಜುನ್ ಮನಸೋಲುತ್ತಾನೆ. ‘ಬುಲೆಟ್’ನ ತಮಿಳು ಲೈನ್-ಅಪ್ನಲ್ಲಿರುವ ಈ ಸರಣಿಯು ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ.
ಬೀರುವಾ (Beeruva)
ಸ್ವಲ್ಪ ಡಾರ್ಕ್ ಮತ್ತು ಥ್ರಿಲ್ಲರ್ ಶೈಲಿಯ ‘ಬೀರುವಾ’ ಸರಣಿಯು ಪ್ರೀತಿ ಎಂಬ ಆಂಟಿಕ್ ವಸ್ತುಗಳ ಸಂಗ್ರಾಹಕಿಯ ಮೇಲೆ ಸಾಗುತ್ತೆ. ತನ್ನ ಗಂಡನ ಮಾಜಿ ಪ್ರೇಯಸಿ ಶವ ತಾನು ತರಿಸಿದ ಕಬೋರ್ಡ್ (ಬೀರುವಾ) ಒಳಗೆ ಕಾಣಿಸುವುದರಿಂದ ಶುರುವಾಗುತ್ತೆ. ಈ ಘಟನೆಯ ಸುತ್ತ ‘ಬೀರುವಾ’ ಕಥೆ ಸಾಗುತ್ತೆ.
ವೀಕ್ಷಕರನ್ನು ಸೆಳೆಯುತ್ತಿರುವ ಪ್ರಮುಖ ಅಂಶಗಳು
ಈ ಎಲ್ಲಾ ಸರಣಿಗಳಲ್ಲಿನ ಸಾಮಾನ್ಯ ಅಂಶವೆಂದರೆ ಕೇವಲ ಜಾನರ್ ಮಾತ್ರವಲ್ಲ, ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಬಲವಾದ ಕಥಾಹಂದರ. ‘ಬುಲೆಟ್’ ಆ್ಯಪ್ನಲ್ಲಿ ಸರಾಸರಿ ಶೇ. 40 ರಿಂದ 45 ರಷ್ಟು ಎಪಿಸೋಡ್ ಕಂಪ್ಲೀಷನ್ ರೇಟ್ ಕಂಡುಬಂದಿದ್ದು, ಸಂಜೆ 6 ರಿಂದ 8 ಹಾಗೂ ರಾತ್ರಿ 10 ರಿಂದ 12 ಗಂಟೆಯ ಅವಧಿಯಲ್ಲಿ ವೀಕ್ಷಣೆ ಗರಿಷ್ಠ ಮಟ್ಟದಲ್ಲಿರುತ್ತದೆ.




