☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Grama panchayat election: ಪಂಚಾಯಿತಿ ಚುನಾವಣೆಗೆ ತಯಾರಾಗಿ: ಆಯೋಗದಿಂದ ಮಹತ್ವದ ಸಭೆ

Grama panchayat election

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು (Grama panchayat election) ನಡೆದು ವರ್ಷಗಳೇ ಆಗಿವೆ. ಬಹುತೇಕ ಪಂಚಾಯಿತಿಗಳ ಅವಧಿಗಳು ಮುಗಿದಿದ್ದು, ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ಹೈಕೋರ್ಟ್ ಸಹ ರಾಜ್ಯ ಸರ್ಕಾರಕ್ಕೆ ಈ ಕುರಿತಾಗಿ ತಪರಾಕಿ ಹಾಕಿದ್ದು, ಸರ್ಕಾರವು ಪಂಚಾಯಿತಿ ಚುನಾವಣೆಗಳನ್ನು ನಡೆಸುವುದಾಗಿ ವಾಗ್ದಾನವನ್ನು ನ್ಯಾಯಾಲಯದಲ್ಲಿ ನಿಡಿತ್ತು. ಅದಕ್ಕೆ ಪೂರಕವಾಗಿ ಇದೀಗ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.

ರಾಜ್ಯ ಚುನಾವಣಾ ಆಯೋಗದ ಮಾಹಿತಿಯಂತೆ ಪಂಚಾಯಿತಿಗಳ ಮೀಸಲಾತಿ ಮತ್ತು ವಾರ್ಡ್ ವಿಂಗಡಣೆ ಈಗಾಗಲೇ ಸಂಪೂರ್ಣವಾಗಿದ್ದು, ಮುಂದಿನ ಹಂತದ ತಯಾರಿಯತ್ತ ಗಮನ ಹರಿಸಿದೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಗಳು 2020ರಲ್ಲಿ ನಡೆದಿದ್ದವು, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆದು ಅದಕ್ಕೂ ಹೆಚ್ಚು ಸಮಯ ಆಗಿದೆ. ಬಿಬಿಎಂಪಿ ಚುನಾವಣೆ ಬಗ್ಗೆಯಂತೂ ಕೇಳುವಂತೆಯೇ ಇಲ್ಲ. ಹಾಗಾಗಿ ಇದೀಗ ರಾಜ್ಯದಲ್ಲಿ ಬಾಕಿ ಉಳಿದಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾಡಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದ್ದು, ಪಂಚಾಯಿತಿ ಚುನಾವಣೆಗಳಿಂದ ಕಾರ್ಯವನ್ನು ಪ್ರಾರಂಭ ಮಾಡುತ್ತಿದೆ.

ಸಭೆ ಯಾವಾಗ?

ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 29ಕ್ಕೆ ಮಹತ್ವದ ಸಭೆಯೊಂದನ್ನು ಕರೆಯಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆ ಇದಾಗಿದ್ದು, ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ತಹಶೀಲ್ದಾರ್​​ಗಳು ಇನ್ನೂ ಕೆಲವು ಪ್ರಮುಖ ಅಧಿಕಾರಿಗಳು ಭಾಗಿ ಆಗಲಿದ್ದು, ಈ ಸಭೆಯಲ್ಲಿ ಮತಗಟ್ಟೆಗಳ ವಿವರ, ಮತಪೆಟ್ಟಿಗೆಗಳ ವಿವರಗಳನ್ನು ಚುನಾವಣಾ ಆಯೋಗವು ಪಡೆದುಕೊಳ್ಳಲಿದೆ. ಜೊತೆಗೆ ಚುನಾವಣಾ ಪ್ರಕ್ರಿಯೆ ಆರಂಭ ಮಾಡಲು ಕೆಲವು ಅಗತ್ಯ ಸೂಚನೆಗಳನ್ನು ಸಹ ಈ ಸಭೆಯಲ್ಲಿ ಆಯೋಗವು ಅಧಿಕಾರಿಗಳಿಗೆ ನೀಡಲಿದೆ.

ರಾಜ್ಯದಲ್ಲಿ ಸುಮಾರು 5950 ಗ್ರಾಮ ಪಂಚಾಯಿತಿಗಳಿದ್ದು, ಕಳೆದ ಬಾರಿ ಎರಡು ಹಂತದಲ್ಲಿ ಪಂಚಾಯಿತಿ ಚುನಾವಣೆಗಳನ್ನು ಮಾಡಲಾಗಿತ್ತು. ಈ ಬಾರಿಯೂ ಸಹ ಎರಡು ಹಂತದಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆ. ಅದರ ಜೊತೆಗೆ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನೂ ನಡೆಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.