ಕೇಂದ್ರ ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ಎಸ್ಐಆರ್ ಕ್ರಮಗಳು ಹಾಗೂ ಅದರ ಹಿಂದಿರುವ ನಿರ್ಧಾರಗಳ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವ್ಯವಸ್ಥೆಯ ಹಿಂದೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನೇರ ಪ್ರಭಾವವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಲಬುರಗಿಯ ರಾಮನಗರ ಕೊಳೆಗೇರಿ ಪ್ರದೇಶದಲ್ಲಿ ‘ಎಸ್ಐಆರ್ ಪರಿಶೋಧ ಹಾಗೂ ಪ್ರತಿರೋಧ’ ಹೆಸರಿನ ನೂತನ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಯೋಗದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ದೂರಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರ ಜೊತೆಗಿರುವ ಇತರ ಆಯುಕ್ತರ ಸ್ವತಂತ್ರ ನಿಲುವನ್ನು ಪ್ರಶ್ನಿಸಿದ ಅವರು, ಪ್ರಸ್ತುತ ಚುನಾವಣಾ ಆಯೋಗ ರಾಜಕೀಯ ನಾಯಕರ ಕೈಗೊಂಬೆಯಂತೆ ಎಂದು ಟೀಕಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಎಂಬುದು ನಾಗರಿಕರನ್ನು ಒಳಗೊಳ್ಳುವ ಬದಲು ಬಡವರನ್ನು ಹಕ್ಕಿನಿಂದ ಹೊರಗಿಡುವ ತಂತ್ರವಾಗಿ ಬದಲಾಗಿದೆ ಎಂದು ಪ್ರಕಾಶ್ ರಾಜ್ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಭಾವಿ ರಾಜಕಾರಣಿಗಳು ಮತ್ತು ಶ್ರೀಮಂತ ವರ್ಗದವರ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸುವ ಆಯೋಗ, ಶ್ರಮಿಕ ಹಾಗೂ ಬಡ ವರ್ಗದ ಜನರನ್ನು ನಿರ್ಲಕ್ಷಿಸುತ್ತಿದೆ. ಈ ತಾರತಮ್ಯದ ವಿರುದ್ಧ ರಾಜ್ಯದ ಸುಮಾರು ನೂರು ಮತಗಟ್ಟೆಗಳಲ್ಲಿ ತನಿಖಾತ್ಮಕ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಕಲೆಹಾಕಲು ನಿರ್ಧರಿಸಲಾಗಿದೆ. ಸಂಗ್ರಹಿಸಿದ ಪುರಾವೆಗಳನ್ನು ಒಳಗೊಂಡ ವರದಿಯನ್ನು ಸೆಪ್ಟೆಂಬರ್ 30 ರಂದು ರಾಜ್ಯ ಸರ್ಕಾರದ ಗಮನಕ್ಕೆ ತಂದು, ಅಕ್ಟೋಬರ್ 1 ರಂದು ನವದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿ ನ್ಯಾಯಾಲಯಕ್ಕೂ ಸಲ್ಲಿಸಲಾಗುವುದು. ಅಲ್ಲದೆ, ಅಕ್ಟೋಬರ್ 15 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ದೇಶವ್ಯಾಪಿ ಸಂತ್ರಸ್ತರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಧಿಕಾರವಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್ಐಆರ್ ನಂತಹ ತಾಂತ್ರಿಕ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕಾದದ್ದು ಅತ್ಯಗತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕ್ರಿಯೆಗಳ ಮೇಲೆ ರಾಜಕೀಯ ಹಸ್ತಕ್ಷೇಪ, ನಿರಂತರ ಆರೋಪಗಳು ಕೇಳಿಬರುತ್ತಿರುವುದು ಕೂಡ ರಾಜಕೀಯದ ಭಾಗವೇ ಆಗಿದೆ.ಆದ್ರೆ ಆಡಳಿತಾರೂಢ ಸರ್ಕಾರಗಳು ಮತ್ತು ಸ್ವತಂತ್ರ ಆಯೋಗಗಳು ಸಾರ್ವಜನಿಕರ ಸಂಶಯಗಳನ್ನು ನಿವಾರಿಸಿ, ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಸಿಗುವಂತೆ ನೋಡಿಕೊಳ್ಳುವುದು ಯಾವುದೇ ಸರ್ಕಾರದ ಪರ ಕರ್ತವ್ಯವಾಗಿದೆ.




