City Lights Movie review: ಚೆನ್ನಾಗಿದೆಯಾ “ಸಿಟಿಲೈಟ್ಸ್”? ಇಲ್ಲಿದೆ ವಿಮರ್ಶೆ

City Lights Movie review

ದುನಿಯಾ ವಿಜಯ್‌ ನಿರ್ದೇಶಿಸಿ, ವಿನಯ್‌ ರಾಜ್‌ಕುಮಾರ್‌ ಹಾಗೂ ಮೊನಿಷಾ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ʼಸಿಟಿಲೈಟ್ಸ್”‌ (City Lights Movie review) ಸಿನಿಮಾ ನಿನ್ನೆಯಷ್ಟೆ (ಸೆಪ್ಟೆಂಬರ್‌ 19) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ದುನಿಯಾ ವಿಜಯ್ ಅವರ ನಿರ್ದೇಶನದ ಮೂರನೇ ಸಿನಿಮಾ ಇದು. ದುನಿಯಾ ವಿಜಯ್‌ ಅವರು ತಮ್ಮದೇ ಆದ ಒಂದು ಶೈಲಿನಲ್ಲಿ ಸಿನಿಮಾ ನಿರ್ದೇಶನದಲ್ಲಿ ಕಂಡುಕೊಂಡಿದ್ದಾರೆ. ಬೆಂಗಳೂರಿನ ಕರಾಳ ಮುಖಗಳನ್ನು ಅವು ಇರುವಂತೆಯೇ ತೋರಿಸುತ್ತಾ ಬಂದಿದ್ದಾರೆ. ಅವರ ಸಿನಿಮಾಗಳಲ್ಲಿ ಬೆಂಗಳೂರಿನ ಕತ್ತಲ ಸಾಮ್ರಾಜ್ಯದ ಅನಾವರಣ ಆಗುತ್ತದೆ. ʼಸಿಟಿಲೈಟ್ಸ್”‌ ಸಿನಿಮಾ ಸಹ ಇದಕ್ಕೆ ಹೊರತಲ್ಲ. ಆದರೆ ಈ ಸಿನಿಮಾನಲ್ಲಿ ವಿಜಯ್‌ ಅವರು ಬೆಂಗಳೂರಿನ ಕರಾಳ ಮುಖದ ಜೊತೆಗೆ ಪ್ರೇಮಕತೆಯೊಂದನ್ನು ಸಹ ಬೆಸೆದಿದ್ದಾರೆ.

ಸಿನಿಮಾದ ಕತೆಯೇನು?

ದುನಿಯಾ ವಿಜಯ್ ಅವರು ʼಸಿಟಿ ಲೈಟ್ಸ್” ಸಿನಿಮಾ ಮೂಲಕ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಕರಾಳ ಒಳಜಗತ್ತಿಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತಾರೆ. ಅಲ್ಲಿ ಭ್ರಷ್ಟಾಚಾರ, ರಾಜಕೀಯ, ರೌಡಿಸಂ, ವೇಶ್ಯಾವಾಟಿಕೆಗಳ ಜೊತೆಗೆ ಅಲ್ಲಲ್ಲಿ ಮಾನವೀಯತೆಯ ಪಸೆಯೂ ಕಾಣಿಸುತ್ತದೆ. ನಾಯಕ ಶಿವು (ವಿನಯ್‌ ರಾಜ್‌ಕುಮಾರ್) ದುಡಿದು ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ‌ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾನೆ. ನಾಯಕಿ, ಕಾಣೆಯಾದ ತನ್ನ ತಮ್ಮನನ್ನು ಹುಡುಕುತ್ತಾ ಸಕಲೇಶಪುರದಿಂದ ಬರುತ್ತಾಳೆ. ಮಾನವ ಕಳ್ಳಸಾಗಣೆಯಿಂದ ಆಕೆಯನ್ನು ರಕ್ಷಿಸಲು ಹೋದ ಶಿವು, ಶಾಸಕನ ಸಹಾಯಕ ಪುನೀತ್‌ನ ಗ್ಯಾಂಗ್‌ನೊಂದಿಗೆ ಸಂಘರ್ಷಕ್ಕೆ ಸಿಲುಕುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಅಸಲಿ ಕತೆ.

ಸಿನಿಮಾ ಮೇಲ್ನೋಟಕ್ಕೆ ನಾಯಕ ಮತ್ತು ನಾಯಕಿಯ ಕತೆಯಂತೆ ಕಂಡರೂ ಸಹ ಚಿತ್ರಕತೆ ಕೇವಲ ಒಂದು ವಿಷಯದ ಮೇಲೆ ನಿಲ್ಲದೆ ಹಲವು ಎಳೆಗಳನ್ನು ಹಿಡಿದಿದೆ. ಪ್ರೇಮಕಥೆ, ತೃತೀಯಲಿಂಗಿಗಳ ಸಂಕಟ, ಪುಡಿ ರೌಡಿಗಳ ಅಟ್ಟಹಾಸ, ರಾಜಕೀಯ ಭ್ರಷ್ಟಾಚಾರ, ಪೊಲೀಸರ ಕಳ್ಳಾಟ, ಬೆಂಗಳೂರಿನ ಸ್ಲಂಗಳ ಕರಾಳ ಬದುಕು ಎಲ್ಲವನ್ನೂ ಬೆರೆಸಲಾಗಿದೆ. ಕೆಲವೊಮ್ಮೆ, ಸಿನಿಮಾ ಮುಖ್ಯ ಕತೆಯಿಂದ ಎತ್ತಲೋ ಸಾಗುತ್ತಿರುವ ಭಾವ ಪ್ರೇಕ್ಷಕರಲ್ಲಿ ಮೂಡುತ್ತದೆ. ಮೊದಲಾರ್ಧದಲ್ಲಿ ನಿರ್ದೇಶಕರು ಕತೆಗೆ ಹೆಚ್ಚಿನ ಫೋಕಸ್‌ ಮಾಡಿದ್ದಾರೆ, ಪಾತ್ರಗಳ ಪರಿಚಯ, ಅವರ ಸಂಕಷ್ಟ ಇನ್ನಿತರೆಗಳನ್ನು ಒmದೇ ಸೂತ್ರದಲ್ಲಿ ತೋರಿಸಿದ್ದಾರೆ. ಆದರೆ ದ್ವಿತೀಯಾರ್ಧದಲ್ಲಿ ಸೂತ್ರ ತುಸು ಸಡಿಲವಾಗಿದೆ. ದ್ವಿತೀಯಾರ್ಧದಲ್ಲಿ ಹಲವು ಭಿನ್ನ-ಭಿನ್ನ ದೃಶ್ಯಗಳು, ಉಪಕತೆಗಳಂಥಾ ದೃಶ್ಯಗಳು ಬರುತ್ತವೆ. ಅವು ಸಿನಿಮಾದ ಮುಖ್ಯ ಕತೆಗೆ ಸಂಬಂಧ ಹೊಂದಿಲ್ಲವಾದ್ದರಿಂದ ಪ್ರೇಕ್ಷಕರಿಗೆ ಹೇರಿಕೆಯ ಅನುಭವ ಆಗುತ್ತದೆ.

ಬೆಂಗಳೂರಿನ ಕರಾಳ ಮುಖ

ಸಿನಿಮಾನಲ್ಲಿ ಬೆಂಗಳೂರಿನ ಗಲ್ಲಿಗಳನ್ನು ತೋರಿಸಿರುವ ರೀತಿ ಸಾಮಾನ್ಯ ಪ್ರೇಕ್ಷಕನನ್ನು ಅಚ್ಚರಿಗೆ ತಳ್ಳುತ್ತದೆ. ಬೆಂಗಳೂರೆಂದರೆ ಕೇವಲ ಮೆಟ್ರೊ, ವಿಧಾನಸೌಧ, ಯುಬಿ ಟವರ್‌, ಲಾಲ್‌ಭಾಗ್‌, ಕಬ್ಬನ್‌ ಪಾರ್ಕ್‌, ಜಯನಗರ, ಗಾಂಧಿ ಬಜಾರಿನ ಒಪ್ಪ ಓರಣ ರಸ್ತೆಗಳು ಎಂದುಕೊಂಡಿದ್ದವರಿಗೆ ಈ ಸಿನಿಮಾನಲ್ಲಿ ತೋರಿಸಿರುವ ಬೆಂಗಳೂರು ಶಾಕ್‌ ನೀಡುತ್ತದೆ. ನಗರದ ನಿಜವಾದ ಗಲ್ಲಿಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಹಲವು ಸ್ಥಳೀಯ ಪ್ರತಿಭೆಗಳಿಗೆ ಅವಕಾಶವನ್ನು ಸಹ ಸಿನಿಮಾನಲ್ಲಿ ನೀಡಿರುವುದು ಮೆಚ್ಚುಗೆಗೆ ಅರ್ಹ ನಡೆ.

ಯಾರ ನಟನೆ ಹೇಗಿದೆ?

ಸಿನಿಮಾದ ನಾಯಕ ವಿನಯ್‌ ರಾಜ್‌ಕುಮಾರ್‌ ನಟನೆ ಚೆನ್ನಾಗಿದೆ, ಮುಗ್ಧನಾಗಿ ಹಾಗೂ ಆಂಗ್ರಿ ಯಂಗ್‌ ಮ್ಯಾನ್‌ ಆಗಿ ಅವರ ನಟನೆ ಅಚ್ಚುಕಟ್ಟಾಗಿದೆ. ಅವರ ಸಂಭಾಷಣೆ ಶೈಲಿ ಅಲ್ಲಲ್ಲಿ ಅಸಹಜ ಎನಿಸುತ್ತದೆ. ನಾಯಕಿ ಮೊನಿಷಾ ಅವರ ಪಾತ್ರ ತುಸು ತಡವಾಗಿ ಎಂಟ್ರಿ ಕೊಟ್ಟರೂ ಸಹ ಅವರ ಪಾತ್ರವೇ ಸಿನಿಮಾದ ಹೈಲೆಟ್.‌ ಅವರ ನಟನೆ ಚೆನ್ನಾಗಿದೆ, ಇನ್ನಷ್ಟು ಅವಕಾಶಗಳು ಅವರಿಗೆ ಸಿಗಬೇಕಿದೆ. ಉಮಾಶ್ರೀಗೆ ನಟನೆಯ ವಿಷಯಲ್ಲಿ ಸಂಪೂರ್ಣ ಅಂಕ ಅಮ್ಮಾಜಿ ಪಾತ್ರದಲ್ಲಿ ಅವರ ನಟನೆಗೆ ಅವರಷ್ಟೆ ಸಾಟಿ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಸಂಪತ್ ಮೈತ್ರೇಯ ಅವರಂತಹ ಪ್ರತಿಭಾವಂತರು ಸಹ ಇದ್ದಾರೆ.

ಸಿನಿಮಾದ ಸಂಗೀತ ಬಹಳ ಚೆನ್ನಾಗಿದೆ. ಕೆಲವೊಮ್ಮೆ ದೃಶ್ಯವನ್ನೂ ಮೀರಿ ಸಂಗೀತ ಗಮನ ಸೆಳೆಯುತ್ತದೆ. ಸಿನಿಮಾದ ಹಾಡುಗಳು ಈಗಾಗಲೇ ಯೂಟ್ಯೂಬ್‌ಗಳಲ್ಲಿ ವೈರಲ್‌ ಆಗಿವೆ, ಸಾಹಸ ದೃಶ್ಯದಲ್ಲಿ ‘ಸ್ವಸ್ತಿಕ್’ ಚಿತ್ರದ ಹಾಡನ್ನು ಬಳಸಿರುವ ರೀತಿ ಮಜವಾಗಿದೆ. ಮಾಸ್ತಿ ಅವರ ಸಂಭಾಷಣೆಗೆ ಪಂಚ್ ಇದೆ.

ಒಟ್ಟಾರೆ ಸಿನಿಮಾ ಹೇಗಿದೆ?

ಸಿಟಿ ಲೈಟ್ಸ್ ಮೆಜೆಸ್ಟಿಕ್‌ನ ಕತ್ತಲೆ ಜಗತ್ತಿನ ನಿಜ ರೂಪ ತೋರಿಸುವ ಪ್ರಾಮಾಣಿಕ ಪ್ರಯತ್ನ. ಒಳ್ಳೆಯ ನಟನೆಯ ಜೊತೆಗೆ ಚರಣ್ ರಾಜ್ ಸಂಗೀತ ಚಿತ್ರದ ಬಲ ಸಿನಿಮಾಕ್ಕೆ ಇದೆ. ಆದರೆ ಹಲವು ವಿಷಯಗಳನ್ನು ಒಟ್ಟಿಗೆ ಹೇಳಲು ಹೋಗಿ ಚಿತ್ರಕಥೆ ಸ್ವಲ್ಪ ಚದುರಿದೆ. ಅಂಡರ್‌ವರ್ಲ್ಡ್ ಡ್ರಾಮಾ ಇಷ್ಟಪಡುವವರಿಗೆ ಮತ್ತು ಮೋನಿಷಾರ ಚೊಚ್ಚಲ ಚಿತ್ರ ನೋಡಲು ಕುತೂಹಲ ಇರುವವರಿಗೆ ಇದು ಒಮ್ಮೆ ನೋಡಬಹುದಾದ ಸಿನಿಮಾ.