Photo Credits: @kavya_gowdaaaaofficial (Instagram)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಮತ್ತೊಮ್ಮೆ ಪ್ರಸಿದ್ಧ ಕಾಮಾಕ್ಯ ದೇವಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪತಿಯ ಶ್ರೇಯಸ್ಸಿಗಾಗಿ ಹಾಗೂ ಕಷ್ಟಗಳು ದೂರವಾಗಲಿ ಎಂದು ಇವರು ನಿರಂತರವಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಅಸ್ಸಾಂ ರಾಜ್ಯದ ಗುವಾಹಟಿ ನಗರದ ನೀಲಾಂಚಲ್ ಬೆಟ್ಟದ ಮೇಲೆ ನೆಲೆಸಿರುವ ಕಾಮಾಕ್ಯ ದೇವಸ್ಥಾನ ಅತ್ಯಂತ ಶಕ್ತಿಶಾಲಿ ಶಕ್ತಿ ಪೀಠವೆಂದು ಹೆಸರುವಾಸಿಯಾಗಿದೆ. ವಿಜಯಲಕ್ಷ್ಮಿ ಅವರು ಈಗಾಗಲೇ ಎರಡು-ಮೂರು ಬಾರಿ ಈ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದರ್ಶನ್ ಅವರಿಗೆ ಜಾಮೀನು ಸಿಗುವ ಮುಂಚೆಯೂ ವಿಜಯಲಕ್ಷ್ಮಿ ಅವರು ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದಿದ್ದರು. ಇದೀಗ ಮತ್ತೊಮ್ಮೆ ಶಕ್ತಿ ದೇವತೆಯ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಬಾರಿ ಸ್ನೇಹಿತೆಯರ ಸಾಥ್: ನಟಿ ಕಾವ್ಯಾ ಗೌಡ ಹಾಗೂ ಭವ್ಯ ಗೌಡ ಜೊತೆ ಪೂಜೆ
ಈ ಬಾರಿ ವಿಜಯಲಕ್ಷ್ಮಿ ದರ್ಶನ್ ಅವರು ಕಾಮಾಕ್ಯ ಮಂದಿರಕ್ಕೆ ತನಿಒಂಟಿಯಾಗಿ ಹೋಗಿಲ್ಲ. ಬದಲಾಗಿ ತಮ್ಮ ಆಪ್ತ ಸ್ನೇಹಿತೆಯರೊಂದಿಗೆ ತೆರಳಿ ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ನಟಿ ಕಾವ್ಯಾ ಗೌಡ ಹಾಗೂ ಅವರ ಅಕ್ಕ ಭವ್ಯ ಗೌಡ ಅವರು ವಿಜಯಲಕ್ಷ್ಮಿ ಅವರ ಜೊತೆ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮೂವರೂ ಸೇರಿ ದೇವಿಯ ದರ್ಶನ ಪಡೆದ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವಿಜಯಲಕ್ಷ್ಮಿ ಅವರ ಇನ್ಸ್ಟಾಗ್ರಾಮ್ ಖಾತೆ ಹಾಗೂ ಕಾವ್ಯಾ ಗೌಡ ಅವರ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಈ ದೇವಸ್ಥಾನದ ಭೇಟಿಯ ಸುಂದರ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಕನ್ನಡ ತಾರೆಗಳ ನೆಚ್ಚಿನ ಧಾರ್ಮಿಕ ಕ್ಷೇತ್ರ: ಶಕ್ತಿ ದೇವತೆ ಕಾಮಾಕ್ಯನ ಸನ್ನಿಧಿ
ಕಾಮಾಕ್ಯ ದೇವಿ ಮಂದಿರಕ್ಕೆ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಅಪಾರ ಭಕ್ತಿ ಗೌರವಗಳಿಂದ ಭೇಟಿ ನೀಡುತ್ತಲೇ ಇರುತ್ತಾರೆ. ಸ್ಯಾಂಡಲ್ವುಡ್ನ ಪ್ರಮುಖ ಕಲಾವಿದರಿಗೆ ಈ ಕ್ಷೇತ್ರ ನೆಚ್ಚಿನ ಧಾರ್ಮಿಕ ತಾಣವಾಗಿದೆ.
ಈ ಹಿಂದೆ ಹಿರಿಯ ನಟಿ ತಾರಾ ಅನುರಾಧಾ, ಪ್ರೇಮಾ, ವಾಣಿ ಶ್ರೀ, ಕಾರುಣ್ಯ ರಾಮ್, ಶ್ವೇತಾ ಪ್ರಸಾದ್ ಹಾಗೂ ಯುವ ನಟಿ ಸಾನ್ಯ ಅಯ್ಯರ್ ಸೇರಿದಂತೆ ಹಲವರು ಕಾಮಾಕ್ಯ ದೇವಿಯ ದರ್ಶನ ಪಡೆದಿದ್ದಾರೆ.
ಕಾಮಾಕ್ಯ ದೇವಿಯ ಸನ್ನಿಧಿಗೆ ಭೇಟಿ ನೀಡುವುದೇ ಒಂದು ಅದ್ಭುತ ಹಾಗೂ ಶಕ್ತಿ ತುಂಬುವ ಅನುಭವ ಎಂದು ಹಲವು ನಟಿಯರು ತಮ್ಮ ಧಾರ್ಮಿಕ ಅನುಭವವನ್ನು ಹಂಚಿಕೊಂಡಿದ್ದಾರೆ.




